ರಿಯಾದಿನಲ್ಲಿ ಹೃದಯಾಘಾತಕ್ಕೊಳಗಾಗಿ ಮರಣ ಹೊಂದಿದ ಅಸ್ಗರ್ ಆಲಂ ಬಿಹಾರ ಇವರ ಮೃತದೇಹವನ್ನು ಊರಿಗೆ ತಲುಪಿಸುವ ಕೆಲಸವು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಯಿತು.
ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಮಾಹಿತಿ ತಿಳಿದ ಕೂಡಲೇ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನಾಯಕರು ಆಸ್ಪತ್ರೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿ ನಿಧನರಾಗುವ ಅನಿವಾಸಿಗಳ ಮೃತದೇಹವನ್ನು ಇಲ್ಲಿ ದಫನ ಮಾಡುವುದು ಅಥವಾ ಊರಿಗೆ ಕೊಂಡೊಯ್ಯುವುದಿದ್ದರೆ ವಲಸೆ ನೀತಿಗೆ ಸಂಬಂಧಿಸಿದ ಹಲವಾರು ದಾಖಲೆ ಪತ್ರಗಳನ್ನು ಸರಿಪಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತೀಯ ಧೂತವಾಸ ಕೇಂದ್ರ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ, ಪೊಲೀಸ್ ಹಾಗೂ ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಕಡೆಗಳಿಂದ ಸಿಗಬೇಕಾದ ದಾಖಲೆಗಳನ್ನು ಸರಿಪಡಿಸಲು ಕೆಸಿಎಫ್ ದಮ್ಮಾಮ್ ಝೋನ್ ಸಾಂತ್ವನ ಇಲಾಖೆ ನಾಯಕರಾದ ಬಾಷಾ ಗಂಗಾವಳಿ, ರಿಯಾದ್ ಝೋನ್ ಸಾಂತ್ವನ ಇಲಾಖೆ ನಾಯಕರಾದ ಮಜೀದ್ ವಿಟ್ಲ , ಅಶ್ರಫ್ ಕೆಎಮ್ಮೆಸ್ ಮತ್ತು ಮೃತರ ಕಫೀಲ್ ಅಹ್ಮದ್ ಮತ್ತು ಸಂಬಂಧಿ ತಬ್ರೀದ್ ಆಲಂ, ಜಾವೇದ್ ಆಲಂ ಮುಂತಾದವರು ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಮುಂಚೂಣಿಯಲ್ಲಿದ್ದು ಶ್ರಮಿಸಿದರ ಫಲವಾಗಿ ಶೀಘ್ರವಾಗಿ ಎಲ್ಲಾ ದಾಖಲೆಗಳನ್ನು ಸರಿಪಡಿಸಿ ಮೃತದೇಹವನ್ನು ಊರಿಗೆ ಕಳುಹಿಸಲು ಸಾಧ್ಯವಾಯಿತು. ಕೆಸಿಎಫ್ ರಿಯಾದ್ ತಂಡದ ಈ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
08/10/24 ರಂದು ಮಂಗಳವಾರ ಅಸರ್ ನಮಾಝ್ ಬಳಿಕ ಜಾಮಿಅ ಮಲಿಕ್ ಖಾಲಿದ್ ಮಸ್ಜಿದ್, ಉಮ್ಮುಲ್ ಹಮಾಮ್ ನಲ್ಲಿ ನಡೆದ ಜನಾಝಾ ನಮಾಝ್ ನಲ್ಲಿ ಕೆಸಿಎಫ್ ನಾಯಕರಾದ ಖಲೀಲ್ ಝುಹ್ರಿ ನೇತೃತ್ವದಲ್ಲಿ ಮೃತರ ಕುಟುಂಬಸ್ಥರು, ಸ್ಥಳೀಯರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. 09/10/24ರಂದು ಬುಧವಾರ ಪಟ್ನಾ ವಿಮಾನ ನಿಲ್ದಾಣಕ್ಕೆ ಮೃತದೇಹ ತಲುಪಲಿದೆ. ಮೃತರು ತಂದೆ ತಾಯಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.