ಏಕ ಇಲಾಹನ ಸಂತೃಪ್ತಿಗೆ ಬೇಕಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡಿ ಏಕೈಕ ಮಗನನ್ನು ಬಲಿ ಅರ್ಪಿಸಲು ಸಿದ್ಧರಾದಂತಹಾ ಇಬ್ರಾಹಿಂ ನಬಿ (ಅ) ಹಾಗೂ ಸೃಷ್ಟಿಕರ್ತನ ನಿರ್ದೇಶನಕ್ಕೆ ಸಂಪೂರ್ಣವಾಗಿ ಬೆಂಬಲ ಸೂಚಿಸಿದ ಧರ್ಮಪತ್ನಿ ಹಾಜರ ಬೀವಿ (ರ) ಮತ್ತು ತನ್ನ ಜೀವ ಸಮರ್ಪಿಸಲು ನಿಂತ ಪ್ರಿಯ ಪುತ್ರ ಇಸ್ಮಾಯಿಲ್ ನಬಿ (ಅ)ರವರ ತ್ಯಾಗೋಜ್ವಲ ಜೀವನವನ್ನು ಸ್ಮರಿಸುವ ಈದುಲ್ ಅಳ್ಹಾ ಅಥವಾ ಬಕ್ರೀದ್ ಹಬ್ಬವನ್ನು ಇಂದು ರಾಜ್ಯಾದ್ಯಂತ ಮುಸ್ಲಿಮರು ಬಹಳ ಸಂಭ್ರಮದಿಂದ ಆಚರಿಸಿದರು.
ಹೊನ್ನಾವರ ಹೆರಂಗಡಿ ಬಿಲಾಲ್ ಮಸ್ಜಿದ್ ನಲ್ಲಿ ನಡೆದ ಈದ್ ನಮಾಜ್ ಗೆ ಖತೀಬರಾದ ಮುಹಮ್ಮದ್ ಅಲ್ ಹಿಕಮಿ ಮಳಲಿ ನೇತೃತ್ವ ನೀಡಿದರು. ಬಕ್ರೀದ್ ಹಬ್ಬವು ಮುಸ್ಲಿಂ ಸಮುದಾಯಕ್ಕೆ ಸಂತೋಷ ತುಂಬುವ ನಿಮಿಷ. ಕಷ್ಟ-ನಷ್ಟದ ದುಃಖ-ದುಮ್ಮಾನಗಳು ಇದ್ದೇ ಇರುತ್ತೆ ಅದಕ್ಕೊಂದು ಪರಿಹಾರವಾಗಿ ಇಬ್ರಾಹಿಂ ನಬಿ(ಅ)ರವರ ಕುಟುಂಬದ ಅವಿಸ್ಮರಣೀಯ ಸಮರ್ಪಣಾ ಜೀವನವನ್ನು ನೆನಪಿಸಿ ಪರಸ್ಪರ ಪ್ರೀತಿ ಸೌಹಾರ್ದತೆ, ಸಹಬಾಳ್ವೆ ಸಾರುವ ಬಲಿ ಪೆರ್ನಾಳ್ ಇಸ್ಲಾಮಿನ ಅಚ್ಚುಕಟ್ಟಾದ ನಿಯಮ ಪ್ರಕಾರ, ಉತ್ತಮ ರೀತಿಯಲ್ಲಿ ಆಚರಿಸುವ ಮೂಲಕ ಇರುವ ಮನಸ್ತಾಪಗಳೆಲ್ಲವನ್ನೂ ಮರೆತು ನಾವೆಲ್ಲರೂ ಒಂದಾಗಿ ಒಗ್ಗಟ್ಟಾಗಿ ಸ್ನೇಹ ಭಾತೃತ್ವವನ್ನು ತುಂಬಿಸುವ ಸುದಿನವಾಗಿದೆ ಇದು ಎಂದು ತಮ್ಮ ಈದ್ ಸಂದೇಶದಲ್ಲಿ ತಿಳಿಸಿದರು.
ಕುಟುಂಬ ಸಂಬಂಧ ಗಟ್ಟಿಗೊಳಿಸಿ, ದಾನ ಧರ್ಮಗಳನ್ನು ಅಧಿಕಗೊಳಿಸಿ ಈ ಹಬ್ಬ ನಮ್ಮಲ್ಲೊಂದು ಪರಿವರ್ತನೆ ಉಂಟು ಮಾಡಬೇಕು. ಸತ್ಕರ್ಮಗಳನ್ನು ಅಧಿಕಗೊಳಿಸಿ ಉತ್ತಮ ವ್ಯಕ್ತಿಗಳಾಗಿ ಬದಲಾಗಬೇಕು. ಕೆಡುಕಿನಿಂದ ಒಳಿತಿನೆಡೆಗೆ ಸಾಗಿ ಆತ್ಮೀಯ ಚೈತನ್ಯ ತುಂಬುವಂತಹ ಪ್ರೀತಿ ಸಹೋದರತೆಯ ಸಹಿಷ್ಣುತೆಯ ಹೂ ಬಿಟ್ಟು ಆತ್ಮೀಯ ಪರಿಮಳ ಸೂಸುವ ಈದುಳ್ ಅಳ್ಹಾವಾಗಿ ಸಂಭ್ರಮಿಸೋಣ. ಅಲ್ಲಾಹನ ಸಂತೃಪ್ತಿಗೆ ಪಾತ್ರರಾಗೋಣ ಎಂದು ಮುಹಮ್ಮದ್ ಅಲ್ ಹಿಕಮಿ ಮಳಲಿ (ಖತೀಬರು ಬಿಲಾಲ್ ಮಸ್ಜಿದ್ ಹೆರಂಗಡಿ) ಹಾರೈಸಿದರು.