ದಮ್ಮಾಮ್: ಪ್ರಾಯೋಜಕರೊಂದಿನ ಉದ್ಯೋಗ ಒಪ್ಪಂದ ಕೊನೆಗೊಂಡ ಬಳಿಕ ವಿದೇಶಿಗಳು ಇತರ ಸಂಸ್ಥೆಗಳಿಗೆ ವರ್ಗಾವಣೆಯಾಗುವಂತೆ ಅವಕಾಶ ನೀಡುವ ಕಾನೂನು ತಿದ್ದುಪಡಿಗೆ ಕಾರ್ಮಿಕ ಸಚಿವಾಲಯ ಮುಂದಾಗಿದೆ.ಈ ಬಗ್ಗೆ ಕಾರ್ಮಿಕ ಕಾನೂನು ತಿದ್ದುಪಡಿ ಪರಿಗಣನೆಯಲ್ಲಿದೆ ಎಂದು ಸಚಿವಾಲಯದ ಅಂಡರ್-ಸೆಕ್ರೆಟರಿ ಅಹ್ಮದ್ ಖತ್ತಾನ್ ತಿಳಿಸಿದ್ದಾರೆ.
ಪರಿಣಿತರಾದ ವಿದೇಶಿ ಕೆಲಸಗಾರರಿಗೆ ಉತ್ತಮ ಉದ್ಯೋಗಗಳನ್ನು ಸೃಷ್ಟಿಸಲು ಈ ಕಾನೂನು ಸಹಾಯ ಮಾಡಲಿದೆ ಮತ್ತು ಕಾರ್ಮಿಕ ಮಾರುಕಟ್ಟೆಯು ಮತ್ತೆ ಪುನರುಜ್ಜೀವನಗೊಳ್ಳಲಿದೆ. ಶಕ್ತರಲ್ಲದ ಕೆಲಸಗಾರರು ಮಾರುಕಟ್ಟೆಯಿಂದ ಹಿಂಜರಿಯಲು ಸಹ ಇದು ಕಾರಣವಾಗಲಿದೆ ಎಂದು ಅಹ್ಮದ್ ಖತ್ತಾನ್ ಹೇಳಿದರು.ಇದು ಭಾರತೀಯರು ಸೇರಿದಂತೆ ಲಕ್ಷಾಂತರ ವಿದೇಶಿಯರಿಗೆ ಪ್ರಯೋಜನವಾಗಲಿದೆ.
ಆದರೆ ಅಸ್ತಿತ್ವದಲ್ಲಿರುವ ಪ್ರಾಯೋಜಕತ್ವವನ್ನು ಉಳಿಸಿಕೊಂಡೇ ಹೊಸ ಕೆಲಸಕ್ಕೆ ಅವಕಾಶ ನೀಡಲಾಗುವುದೇ ಎನ್ನುವುದು ಸ್ಪಷ್ಟವಾಗಿಲ್ಲ. ಇದರ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹೊರಡಿಸಲಾಗುತ್ತದೆ. ಉದ್ಯೋಗದಲ್ಲಿ ತೊಡಗಿರುವವರು ಮತ್ತು ಉದ್ಯೋಗದಲ್ಲಿ ಸಂಕಷ್ಟ ಅನುಭವಿಸುತ್ತಿರುವವರಿಗೆ ಹಾಗೂ ಉದ್ಯೋಗ ಹುಡುಕುವ ವಿದೇಶಿ ಕಾರ್ಮಿಕರಿಗೆ ಈ ಕಾನೂನು ವರದಾನವಾಗಲಿದೆ.
ಪ್ರಸ್ತುತ ಉದ್ಯೋಗ ಒಪ್ಪಂದವು ಮುಕ್ತಾಯಗೊಂಡ ನಂತರವೂ ಪ್ರಾಯೋಜಕರ ಅನುಮತಿ ಇಲ್ಲವಾದರೆ, ಇತರ ಸಂಸ್ಥೆಗಳಲ್ಲಿ ಕೆಲಸ ಮಾಡಲು ಕಾರ್ಮಿಕರಿಗೆ ಅವಕಾಶ ನೀಡಲಾಗುವುದಿಲ್ಲ.