janadhvani

Kannada Online News Paper

ಒಂದೇ ತಿಂಗಳಲ್ಲಿ ಸೌದಿ ವಿಮಾನಯಾನ ಸಂಸ್ಥೆಗಳ ವಿರುದ್ಧ 1600 ದೂರುಗಳು

ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಪೈಕಿ ಜಿದ್ದಾ ವಿಮಾನ ನಿಲ್ದಾಣದ ವಿರುದ್ಧ ಹೆಚ್ಚು ದೂರುಗಳು ದಾಖಲಾಗಿವೆ.

ರಿಯಾದ್: ಕಳೆದ ತಿಂಗಳೊಂದರಲ್ಲೇ ಸೌದಿ ವಿಮಾನಯಾನ ಸಂಸ್ಥೆಗಳ ವಿರುದ್ಧ ನಾಗರಿಕ ವಿಮಾನಯಾನ ಪ್ರಾಧಿಕಾರಕ್ಕೆ 1,600ಕ್ಕೂ ಹೆಚ್ಚು ದೂರುಗಳು ಬಂದಿವೆ.

ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಸೌದಿಯಾ(Saudia) ವಿರುದ್ಧ ಅತಿ ಕಡಿಮೆ ದೂರುಗಳು ದಾಖಲಾಗಿವೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮದೀನಾ ವಿಮಾನ ನಿಲ್ದಾಣ ವಿರುದ್ಧ ಕಡಿಮೆ ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.

ಸೌದಿಯಾ ವಿರುದ್ಧ ಒಂದು ಲಕ್ಷ ಪ್ರಯಾಣಿಕರಿಗೆ 17 ದೂರುಗಳು ಎಂಬ ನೆಲೆಯಲ್ಲಿ ಸ್ವೀಕರಿಸಲಾಗಿದೆ. ಇವುಗಳಲ್ಲಿ ಶೇ.90 ದೂರುಗಳನ್ನು ನಿಗದಿತ ಸಮಯದಲ್ಲಿ ಪರಿಹರಿಸಲಾಗಿದೆ. ಬಜೆಟ್ ಏರ್‌ಲೈನ್ ಫ್ಲೈ ನಾಸ್(flynas) ಎರಡನೇ ಅತಿ ಕಡಿಮೆ ಸಂಖ್ಯೆಯ ದೂರುಗಳನ್ನು ಹೊಂದಿದೆ. Flynas ಪ್ರತಿ ಲಕ್ಷ ಪ್ರಯಾಣಿಕರಿಗೆ 29 ದೂರುಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ ಶೇ. 88 ರಷ್ಟು ಪರಿಹಾರವಾಗಿದೆ.

ಬಜೆಟ್ ಏರ್‌ಲೈನ್ ಫ್ಲೈ ಅದೀಲ್(Flyadeal) ಪ್ರತಿ ಲಕ್ಷ ಪ್ರಯಾಣಿಕರಿಗೆ 73 ದೂರುಗಳನ್ನು ಸ್ವೀಕರಿಸಿದೆ.ಶೇ. 86 ರಷ್ಟು ದೂರುಗಳನ್ನು ಪರಿಹರಿಸಲಾಗಿದೆ. ಫ್ಲೈ ಅದೀಲ್ ಮೂರನೇ ಅತಿ ಕಡಿಮೆ ಸಂಖ್ಯೆಯ ದೂರುಗಳನ್ನು ಹೊಂದಿರುವ ವಿಮಾನಯಾನ ಸಂಸ್ಥೆ.

ಕಳೆದ ತಿಂಗಳು, ಟಿಕೆಟ್ ಮರುಪಾವತಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯ ದೂರುಗಳು ಬಂದಿವೆ. ವಿಳಂಬ ಸೇವೆ ಮತ್ತು ಲಗೇಜ್ ನಷ್ಟ ಇತರ ಹೆಚ್ಚಿನ ದೂರುಗಳಾಗಿವೆ.

ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಕುರಿತಾದ ದೂರುಗಳ ಪೈಕಿ ಅತಿ ಹೆಚ್ಚು ದೂರುಗಳು ಜಿದ್ದಾ ವಿಮಾನ ನಿಲ್ದಾಣದ ವಿರುದ್ಧ ದಾಖಲಾಗಿವೆ. ರಿಯಾದ್ ವಿಮಾನ ನಿಲ್ದಾಣ ಎರಡನೇ ಸ್ಥಾನದಲ್ಲಿದೆ ಮತ್ತು ಮದೀನಾ ವಿಮಾನ ನಿಲ್ದಾಣವು ಕಡಿಮೆ ಸಂಖ್ಯೆಯ ದೂರುಗಳನ್ನು ಹೊಂದಿದೆ.