ಬೆಂಗಳೂರು,ಮಾ.15: ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಹೋಗಬಾರದು, ಸರ್ಕಾರದ ಆದೇಶ ಕಾನೂನುಬದ್ಧವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು, ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೊರೆ ಹೋಗಲು ಸಿದ್ಧತೆ ಆರಂಭಿಸಿದ್ದಾರೆ.
ತೀರ್ಪಿನ ಬೆನ್ನಲ್ಲೇ ಪ್ರತಿಕ್ರಿಯಿಸಿದ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ, ಮೂವರು ಜಡ್ಜ್ಗಳಲ್ಲಿ ಒಬ್ಬರು ಮುಸಲ್ಮಾನರಾಗಿದ್ದರು. ಹಿಜಾಬ್ ಕುರ್ಆನ್ನಲ್ಲಿ ಕಡ್ಡಾಯ ಎನ್ನಲಾಗಿದೆ. ಯಾವ ಆಧಾರದ ಮೇಲೆ ತೀರ್ಪು ಕೊಟ್ಟಿದ್ದಾರೆ ಗೊತ್ತಿಲ್ಲ. ಮುಸ್ಲಿಂ ಹೆಣ್ಣುಮಗಳು ಮನೆಯಿಂದ ಹೊರಗಡೆ ಹೋಗುವಾಗ ಹಿಜಾಬ್ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಪವಿತ್ರ ಕುರಾನ್ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ನ್ಯಾಯಾಲಯದಲ್ಲಿ ನಮ್ಮ ವಕೀಲರು ವಾದ ಮಂಡನೆಯಲ್ಲಿ ಎಡವಿದ್ದರೆ, ಹಿಜಾಬ್ ವಿಚಾರವಾಗಿ ವಿರುದ್ಧ ತೀರ್ಪು ಬಂದಿದ್ದರೆ ನಾವು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಧಾರ್ಮಿಕ ಮುಖಂಡರೊಂದಿಗೆ ಚರ್ಚಿಸಿ ಸುಪ್ರೀಂ ಕೋರ್ಟ್ಗೆ ಹೋಗುವ ನಿರ್ಧಾರ ಕೈಗೊಳ್ಳುತ್ತೇವೆ. ಕಾನೂನಾತ್ಮಕವಾಗಿ ನಮ್ಮ ಹಕ್ಕನ್ನು ಪಡೆದುಕೊಳ್ಳಲು ಯತ್ನಿಸುತ್ತೇವೆ ಎಂದಿದ್ದಾರೆ.
ವಿದ್ಯಾರ್ಥಿನಿಗಳ ಮನವಿ
ಈಗ ವರ್ಷದ ಕೊನೆಯಾದ್ದರಿಂದ ಶಾಲಾ-ಕಾಲೇಜುಗಳಲ್ಲಿ ವಾರ್ಷಿಕ ಪರೀಕ್ಷೆಯ ಸಮಯವಾಗಿದ್ದು, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗುತ್ತಿರುವುದರಿಂದ ಅಲ್ಲಿಂದ ತೀರ್ಪು ಬರುವವರೆಗೆ ಹಿಜಾಬ್ ಧರಿಸಲು ಅವಕಾಶ ಮಾಡಿಕೊಡಿ ಎಂದು ವಿದ್ಯಾರ್ಥಿ ಪ್ರತಿನಿಧಿಗಳು ಒತ್ತಾಯಿಸುತ್ತಿದ್ದಾರೆ.
ಆದರೂ ಹೈಕೋರ್ಟ್ ನೀಡಿರುವ ತೀರ್ಪನ್ನು ಪಾಲಿಸಿ ಪರೀಕ್ಷೆ ಬರೆಯುವುದಾಗಿ ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ.
ಹೈಕೋರ್ಟ್ ಹೇಳಿದ್ದೇನು?
ಹಿಜಾಬ್ ಧರಿಸಿ ಶಾಲಾ-ಕಾಲೇಜಿನ ತರಗತಿಗಳಿಗೆ ಹಾಜರಾಗುವುದನ್ನು ನಿಷೇಧಿಸುವ ಮತ್ತು ಸಮವಸ್ತ್ರವನ್ನು ನಿರ್ಧರಿಸುವ ಜವಾಬ್ದಾರಿಯನ್ನು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ (ಸಿಡಿಸಿ) ವಹಿಸಿ ರಾಜ್ಯ ಸರ್ಕಾರ ಫೆ.5ರಂದು ಹೊರಡಿಸಿತ್ತು. ಈ ಆದೇಶ ರದ್ದು ಕೋರಿ ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ರೇಷಮ್ ಮತ್ತಿತರೆ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಏಳು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ಈ ಎಲ್ಲ ಅರ್ಜಿಗಳ ಕುರಿತು ಸತತ 11 ದಿನ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿರುವ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ.ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾ.ಜೆ.ಎಂ. ಖಾಜಿ ಅವರನ್ನು ಒಳಗೊಂಡ ಪೀಠ ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ, ಸರ್ಕಾರದ ಆದೇಶ ಪಾಲನೆ ಮಾಡಬೇಕು, ಇದು ಕಾನೂನು ಬದ್ಧವಾಗಿದೆ ಎಂದಿದೆ.
ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದ ಮಹತ್ವದ ವಿಚಾರಗಳು:
1- ವಿದ್ಯಾರ್ಥಿನಿಯರು ಸಮವಸ್ತ್ರ ಸಂಹಿತೆ ಆದೇಶ ಪಾಲಿಸಲೇಬೇಕು
2. ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವೇ ಅಲ್ಲ- ಹೈಕೋರ್ಟ್ ತೀರ್ಪು
3. ಸಮವಸ್ತ್ರ ಕಡ್ಡಾಯಕ್ಕೆ ವಿದ್ಯಾರ್ಥಿಗಳು ವಿರೋಧಿಸುವಂತಿಲ್ಲ
4. ವಿದ್ಯಾರ್ಥಿನಿಯರು ಸಮವಸ್ತ್ರ ಸಂಹಿತೆ ಆದೇಶ ಪಾಲಿಸಲೇಬೇಕು
5. ಸಮವಸ್ತ್ರ ಕಡ್ಡಾಯಗೊಳಿಸಿದ್ದ ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ
6. ಹಿಜಾಬ್ಗೆ ಅವಕಾಶ ಕೊಡುವುದು ಬಿಡುವುದು ಆಯಾ ಸಂಸ್ಥೆಗೆ ಬಿಟ್ಟದ್ದು
7. ಹಿಜಾಬ್ಗೆ ಅವಕಾಶ ಇಲ್ಲ ಎಂದರೆ ಮುಸ್ಲಿಂ ವಿದ್ಯಾರ್ಥಿನಿಯರ ಧಾರ್ಮಿಕ ಹಕ್ಕಿನ ಉಲ್ಲಂಘನೆ ಅಲ್ಲ
8. ಶಾಲಾ- ಕಾಲೇಜಿನ ಸಮವಸ್ತ್ರ ನೀತಿ ಪಾಲಿಸುವುದು ವಿದ್ಯಾರ್ಥಿನಿಯರ ಕರ್ತವ್ಯ







