ಬೆಂಗಳೂರು: ಹಿಜಾಬ್ ವಿವಾದ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಬೇಕೆಂದು ಯುವ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿಶ್ರೀನಿವಾಸ್ ಇಂದು ಶುಕ್ರವಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಹಿಜಾಬ್ ಸಂಘರ್ಷಕ್ಕೆ ಇತಿಶ್ರೀ ಹಾಡಬೇಕೆಂದು ಕೋರಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ಧರಿಸುವುದರ ಕುರಿತು ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ನಿಯಮವನ್ನು ಪ್ರಶ್ನಿಸಿ ಮತ್ತು ಹೈಕೋರ್ಟ್ ನ ಮಧ್ಯಂತರ ಮೌಖಿಕ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೊಸ ಅರ್ಜಿಯನ್ನು ಸಲ್ಲಿಸಲಾಯಿತು.
ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವಂತೆ ಕಪಿಲ್ ಸಿಬಲ್ ಮನವಿ
ರಾಷ್ಟ್ತವ್ಯಾಪಿ ಚರ್ಚೆಗೆ ಗ್ರಾಸವಾಗಿರುವ ಹಿಜಾಬ್ ವಿವಾದ ಪ್ರಕರಣವನ್ನು ಪ್ರಮುಖ ನ್ಯಾಯವಾದಿ ಹಾಗೂ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ನಿನ್ನೆ ಸುಪ್ರೀಂ ಕೋರ್ಟ್ ಅಂಗಳಕ್ಕೆ ಎಳೆದಿದ್ದರು.
ಪರೀಕ್ಷಾ ಸಮಯದಲ್ಲಿ ಹಿಜಾಬ್ ಆತಂಕ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಹೀಗಾಗಿ ಸುಪ್ರೀಂ ಕೋರ್ಟ್ ನಲ್ಲಿ ಈ ಪ್ರಕರಣದ ವಿಚಾರಣೆ ನಡೆಸಬೇಕೆಂದು ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದರು.
ಆದರೆ ಸುಪ್ರೀಂ ಕೋರ್ಟ್ ಹಿಬಾಜ್ ಪ್ರಕರಣದ ವಿಚಾರಣೆಗೆ ನಿರಾಕರಿಸಿದ್ದು, ಕರ್ನಾಟಕ ಹೈಕೋರ್ಟ್ ನಲ್ಲಿ ಈಗಾಗಲೇ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಹೀಗಾಗಿ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿತ್ತು. ಮುಂದೇ ಏನು ಮಾಡಬಹುದೆಂದು ಪರಿಶೀಲಿಸಲಾಗುತ್ತದೆ ಎಂದಿತ್ತು.
ಇದೀಗ ರಾಜ್ಯ ಹೈಕೋರ್ಟ್ ನ ಮಧ್ಯಂತರ ಮೌಖಿಕ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದ್ದು, ಸುಪ್ರೀಂ ಕೋರ್ಟ್ ನ ಮುಂದಿನ ನಡೆ ಏನೆಂಬುದನ್ನು ಕಾದು ನೋಡಬೇಕಿದೆ.