ಬೆಂಗಳೂರು,ಜ.6: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಹರಡುವ ಭೀತಿಯ ಹಿನ್ನೆಲೆಯಲ್ಲಿ ವಾರಾಂತ್ಯ ಕರ್ಫ್ಯೂ ಸಹಿತ ಕಠಿಣ ಕ್ರಮಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಜ.6 ರಿಂದ 19 ರ ವರೆಗೆ ಈ ನಿರ್ಬಂಧವು ಜಾರಿಯಲ್ಲಿರಲಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ. ವ್ಯಾಕ್ಸಿನ್ ಹಾಕಿಸಿಕೊಂಡ 50 ಭಕ್ತರಿಗೆ ಮಾತ್ರ ಒಮ್ಮೆಲೆ ಅವಕಾಶ ಎಂದು ಉಲ್ಲೇಖಿಸಲಾಗಿದೆ.
ಮಸೀದಿಗಳಲ್ಲಿ ಪ್ರಾರ್ಥನೆಗಾಗಿ ಮಸೀದಿಯ ಸಾಮರ್ಥ್ಯಕ್ಕನುಗುಣವಾಗಿ ಶೇ.50 ರಷ್ಟು ಮಂದಿಗೆ ಪ್ರವೇಶಿಸಲು ಅನುಮತಿ ನೀಡುವಂತೆ ವಕ್ಫ್ ಮಂಡಳಿ ಬೇಡಿಕೆ ಇಟ್ಟಿದ್ದು, ಇದರನ್ವಯ ಕಟ್ಟು ನಿಟ್ಟಿನ ಕೋವಿಡ್ ಪ್ರೋಟೋಕಾಲ್ ಪಾಲನೆಯೊಂದಿಗೆ ಶೇ.50 ರಷ್ಟು ಮಂದಿಗೆ ಏಕಕಾಲಕ್ಕೆ ಮಸೀದಿ ಪ್ರವೇಶಕ್ಕೆ ಸರ್ಕಾರ ಅನುಮತಿ ನೀಡಿದೆ.
ಮಾರ್ಗಸೂಚಿಗಳು
- ಆಯಾ ಮಸೀದಿಯ ಸಾಮರ್ಥ್ಯಕ್ಕನುಗುಣವಾಗಿ ಶೇ.50 ಮುಸಲ್ಲಿಗಳಿಂದ ಮೀರಬಾರದು.
- ಮಸೀದಿ ಪ್ರವೇಶಕ್ಕೆ ಮುಂಚಿತವಾಗಿ ದೇಹದ ತಾಪಮಾನವನ್ನು ತಪಾಸಣೆ ಮಾಡುವುದು, ಕೈಗಳನ್ನು ಸೋಪು ಅಥವಾ ಸ್ಯಾನಿಟೈಝರ್ ನಿಂದ ಶುಚಿಗೊಳಿಸುವುದು.
- ಕಡ್ಡಾಯವಾಗಿ ಮಾಸ್ಕ್ ಧರಿಸುವುದು.
- ಎರಡು ಡೋಸ್ ಸಂಪೂರ್ಣ ಲಸಿಕೆ ಪಡೆದಿರುವುದು.
- ನಮಾಜ್ ಮಾಡುವವರ ಮಧ್ಯೆ ಕನಿಷ್ಠ 5 ಅಡಿ ಅಂತರವನ್ನು ಕಾಯ್ದುಕೊಳ್ಳುವುದು.
- 65 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕೆಳಗಿನವರು ಮನೆಯಲ್ಲಿ ನಮಾಜ್ ಮಾಡುವುದು.
- ಮನೆಯಿಂದಲೇ ಮುಸಲ್ಲಾ ತರುವುದು.
- ಹಸ್ತಲಾಘವ ಮತ್ತು ಆಲಿಂಗನ ಮಾಡದಿರುವುದು.
ಇದರೊಂದಿಗೆ, ಆರೋಗ್ಯ ಇಲಾಖೆ, ಪೋಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಹೊರಡಿಸುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಕ್ಫ್ ಮಂಡಳಿಗೆ ಸರ್ಕಾರ ನಿರ್ದೇಶಿಸಿದೆ.