janadhvani

Kannada Online News Paper

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಮೇ 3 ರಂದು ಪ್ರಕಟ-ತನ್ವೀರ್‌ ಸೇಠ್‌

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಮೇ 3ರಂದು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಹೇಳಿದರು.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು ‘ಇಂದು (ಶುಕ್ರವಾರ) ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದಿದ್ದು, ಪರೀಕ್ಷಾ ಸುಧಾರಣಾ ಕ್ರಮ ತೃಪ್ತಿ ತಂದಿದೆ’ ಎಂದರು.

‘ಈ ಬಾರಿ ಒಟ್ಟು 33 ವಿಷಯಗಳಲ್ಲಿ ಪರೀಕ್ಷೆ ನಡೆದಿದೆ. 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ. 2.73 ರಷ್ಟು ವಿದ್ಯಾರ್ಥಿಗಳು  ಗೈರುಹಾಜರಾಗಿದ್ದಾರೆ. 2817 ಪರೀಕ್ಷಾ ಕೇಂದ್ರಗಳಲ್ಲಿ 51 ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ. ಇದೇ 16ರಿಂದ 25ರ ವರೆಗೆ ಮೌಲ್ಯಮಾಪನ ನಡೆಯಲಿದೆ’ಎಂದು ಮಾಹಿತಿ ನೀಡಿದರು.

ಪರೀಕ್ಷೆಯ ಉತ್ತರಗಳನ್ನು ಮೇ.8 ರಂದು ಅಂತರ್ಜಾಲದಲ್ಲಿ ಪ್ರಕಟಿಸಲಾಗುತ್ತದೆ. ಫಲಿತಾಂಶದ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಮೇ 8ರಿಂದ 10ರವರೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಕಳೆದ ವರ್ಷ ಗಣಿತ ವಿಷಯದಲ್ಲಿ 16 ವಿದ್ಯಾರ್ಥಿಗಳು ಡಿಬಾರ್ ಆಗಿದ್ದರೆ, ಈ ಬಾರಿ 21 ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ. ಕಳೆದ ಬಾರಿ ಶೇ. 73.47 ರಷ್ಟು ಫಲಿತಾಂಶ ಬಂದಿದ್ದು, ಈ ಬಾರಿ ಇನ್ನೂ ಉತ್ತಮ ಫಲಿತಾಂಶ ಬರುವ ವಿಶ್ವಾಸವಿದೆ ಎಂದರು.