ನವದೆಹಲಿ: ಭಾರತ್ ಬಯೋಟೆಕ್ನ ಕೋವಾಕ್ಸಿನ್ ಅನ್ನು ಒಮಾನ್ ದೇಶವು ಅನುಮೋದಿತ ಕೋವಿಡ್ 19ರ ಲಸಿಕೆಗಳ ಪಟ್ಟಿಗೆ ಸೇರಿಸಿದೆ. ಕೋವಾಕ್ಸಿನ್ನ ಎರಡೂ ಡೋಸ್ ಲಸಿಕೆ ಪಡೆದ ಪ್ರಯಾಣಿಕರು ಒಮಾನ್ನಲ್ಲಿ ಕ್ವಾರಂಟೈನ್ಗೆ ಒಳಗಾಗುವ ಅಗತ್ಯ ಇನ್ನು ಇರುವುದಿಲ್ಲ.
ಈ ಸಂಬಂಧ ಮಸ್ಕತ್ನ ಭಾರತೀಯ ರಾಯಭಾರ ಕಚೇರಿ ಪ್ರಕಟಣೆ ಹೊರಡಿಸಿದೆ. ಪ್ರಯಾಣಕ್ಕೂ 14 ದಿನ ಮುನ್ನ ಎರಡೂ ಡೋಸ್ ಕೋವಾಕ್ಸಿನ್ ಲಸಿಕೆ ಪಡೆದಿರುವ ಭಾರತೀಯರಿಗೆ ಇದು ಅನುಕೂಲವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಉಳಿದಂತೆ ಎಲ್ಲ ಬಗೆಯ ಕೋವಿಡ್ ಸಂಬಂಧಿ ಷರತ್ತುಗಳು ಮುಂದುವರಿಯುತ್ತವೆ. ಪ್ರಯಾಣಿಕರು ಆಗಮನಕ್ಕೂ ಮುನ್ನ ಆರ್ಟಿಪಿಸಿಆರ್ ಪರೀಕ್ಷಾ ವರದಿ ತರಬೇಕು ಎಂದು ಪ್ರಕಟಣೆ ಹೇಳಿದೆ.
ಅಸ್ಟ್ರಾಜೆನಿಕಾ/ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ಪ್ರಯಾಣಿಕರಿಗೆ ಕ್ವಾರಂಟೈನ್ ಇಲ್ಲದೆ ಒಮಾನ್ಗೆ ಪ್ರಯಾಣಿಸಲು ಈಗಾಗಲೇ ಅನುಮತಿ ನೀಡಲಾಗಿದೆ.







