janadhvani

Kannada Online News Paper

ಅನೈತಿಕ ಪೊಲೀಸ್ ಗಿರಿ ಸಮರ್ಥನೆ: ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ-ಸಿದ್ದರಾಮಯ್ಯ

ಸ್ತ್ರಿಪೀಡಕರ ಹೆಡೆಮುರಿಕಟ್ಟಿ ಜೈಲಿಗೆ ತಳ್ಳಬೇಕಾದ ನೀವು ಅದನ್ನು ಮಾಡದೆ ದುಷ್ಕರ್ಮಿಗಳ ರಕ್ಷಣೆಗೆ ನಿಂತಿದ್ದೀರಿ.

ಬೆಂಗಳೂರು: ನೈತಿಕ ಪೊಲೀಸ್ ಗಿರಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಪುಂಡರು ಕಾನೂನನ್ನು ಕೈಗೆತ್ತಿಕೊಳ್ಳುವ ಅನೈತಿಕ ಪೊಲೀಸ್‌ಗಿರಿಯನ್ನು ಸಮರ್ಥಿಸುವ ಮೂಲಕ ಕಾನೂನು ಪಾಲನೆ ನಿಮ್ಮಿಂದ ಸಾಧ್ಯವಿಲ್ಲ ಎಂದು ನಿಮ್ಮ ಅಸಾಮರ್ಥ್ಯವನ್ನು ತೋಡಿಕೊಂಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯವನ್ನು ಜಂಗಲ್ ರಾಜ್ಯ ಮಾಡಬೇಡಿ. ದಯವಿಟ್ಟು ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ. ಅನೈತಿಕ ಪೊಲೀಸ್‌ಗಿರಿಗೆ ಬಲಿಯಾಗುತ್ತಿರುವುದು ಅಸಹಾಯಕ, ಅಮಾಯಕ ಹೆಣ್ಣುಮಕ್ಕಳು. ಸ್ತ್ರಿಪೀಡಕರ ಹೆಡೆಮುರಿಕಟ್ಟಿ ಜೈಲಿಗೆ ತಳ್ಳಬೇಕಾದ ನೀವು ಅದನ್ನು ಮಾಡದೆ ದುಷ್ಕರ್ಮಿಗಳ ರಕ್ಷಣೆಗೆ ನಿಂತಿದ್ದೀರಿ. ಕುರ್ಚಿಯ ರಕ್ಷಣೆಗಾಗಿ ಸಂಘ ಪರಿವಾರದ ಓಲೈಕೆ ನಿಮಗೆ ಅನಿವಾರ್ಯವಾಗಿರಬಹುದು. ಇದಕ್ಕಾಗಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದೇ? ಎಂದು ಪ್ರಶ್ನಿಸಿದ್ದಾರೆ.

ನಾಳೆಯಿಂದ ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲೆ ಅನೈತಿಕ ಪೊಲೀಸ್ ಗಿರಿಯನ್ನು ಯಾರೇ ನಡೆಸಲಿ, ಅವರದ್ದು ಮುಖವಾಡ ಮಾತ್ರ, ಅಸಲಿ ಮುಖ ಅಂತಹ ಕೃತ್ಯಕ್ಕೆ ಪ್ರಚೋದನೆ, ಉತ್ತೇಜನ ಮತ್ತು ರಕ್ಷಣೆ ನೀಡುವ ನಿಮ್ಮದು ಎಂದು ತಿಳಿದುಕೊಳ್ಳಬಹುದೇ?

ಆ್ಯಕ್ಷನ್ ಗೆ ರಿಯಾಕ್ಷನ್ ಇರುತ್ತೆ ಎಂದು ಹೇಳುವ ಮೂಲಕ ಯಾವ ಕಾಡಿನ ನ್ಯಾಯವನ್ನು ಪಾಠ ಮಾಡುತ್ತಿದ್ದೀರಿ? ಪೊಲೀಸ್ ಇಲಾಖೆಯನ್ನು ರದ್ದು ಮಾಡಿ ನಿಮ್ಮ ಪರಿವಾರಕ್ಕೆ ಕಾನೂನು ಪಾಲನೆಯ ಕೆಲಸವನ್ನು ವಹಿಸಿಕೊಡುವ ದುಷ್ಟ ಉದ್ದೇಶವೇನಾದರೂ ನಿಮಗಿದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಆರೋಗ್ಯ ಸಚಿವ ಸುಧಾಕರ್ ಅವರು ಇತ್ತೀಚೆಗೆ ಹೆಣ್ಣುಮಕ್ಕಳ ಬದುಕುವ ಸ್ವಾತಂತ್ರ್ಯವನ್ನು ಪ್ರಶ್ನಿಸಿ ಅವಮಾನ ಮಾಡಿದ್ದರು, ಇದೀಗ ನೀವು ಮಹಿಳೆಯರ ಮೆಲೆ ದೌರ್ಜನ್ಯ ನಡೆಸುತ್ತಿರುವವರ ರಕ್ಷಣೆಗೆ ಇಳಿದಿದ್ದೀರಿ. ನಿಮ್ಮ ಸರ್ಕಾರದ ನಿಷ್ಠೆ ಸಂವಿಧಾನಕ್ಕೋ? ಮನುಸ್ಮೃತಿಗೋ? ಎಂದು ಪ್ರಶ್ನಿಸಿದ್ದಾರೆ.

error: Content is protected !! Not allowed copy content from janadhvani.com