ಶಿವಮೊಗ್ಗ, ಏ.3-ನುಡಿದಂತೆ ಪ್ರಧಾನಿ ನರೇಂದ್ರ ಮೋದಿ ನಡೆದುಕೊಂಡಿಲ್ಲ,ಕೇಂದ್ರ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಠಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರ ಭರವಸೆ ಸುಳ್ಳಾಗಿದೆ, , ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ರಾಜ್ಯದಲ್ಲಿ 5ನೇ ಸುತ್ತಿನ ಚುನಾವಣಾ ಪ್ರಚಾರ ಆರಂಭಿಸಿರುವ ಅವರು ಇಂದು ಶಿವಮೊಗ್ಗದಲ್ಲಿ ರೋಡ್ ಶೋ ನಡೆಸಿ ಗೋಪಿ ವೃತ್ತದಲ್ಲಿ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಮಗನ ಆಸ್ತಿ 3 ತಿಂಗಳಲ್ಲಿ 50 ಸಾವಿರ ರೂಪಾಯಿಯಿಂದ 80 ಕೋಟಿಗೆ ಏರಿಕೆಯಾಗುತ್ತದೆ. ಇದರ ಅರ್ಥ ಏನು ಇವರಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು ಇದು ಭ್ರಷ್ಟಾಚಾರವಲ್ಲದೆ ಮತ್ತೇನು ಎಂದು ವಾಗ್ಧಾಳಿ ನಡೆಸಿದರು.
ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ತಲಾ 15 ಲಕ್ಷ ರೂಪಾಯಿ ಜಮಾ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು. 15 ಲಕ್ಷ ವಿರಲಿ 5 ರೂಪಾಯಿಯೂ ಜಮಾ ಮಾಡಿಲ್ಲ. ಮೋದಿಯವರದ್ದು ಕೇವಲ ಮಾತಿನ ಬಡಾಯಿ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಸರ್ಕಾರ, ಕಮಿಷನ್ ಪಡೆಯುವ ಸರ್ಕಾರ ಎಂದು ಮೋದಿ ಸುಳ್ಳು ಹೇಳುತ್ತಾರೆ. ಹಿಂದಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪಕ್ಕದಲ್ಲಿ ಕುರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ಮಾತನಾಡುವುದು ಹಾಸ್ಯಾಸ್ಪದ ಎಂದರು.
ಬಿಜೆಪಿ ನಾಯಕರ ಭ್ರಷ್ಟಾಚಾರ ಮೋದಿ ಅವರ ಕಣ್ಣಿಗೆ ಕಾಣುತ್ತಿಲ್ಲವೇ ಪ್ರಧಾನಿ ಮೋದಿ ಅವರು ಮೊದಲು ತಮ್ಮ ಪಕ್ಷದ ಭ್ರಷ್ಟರನ್ನು ವೇದಿಕೆಯಿಂದ ಕೆಳಗಿಳಿಸುವ ಕೆಲಸ ಮಾಡಲಿ, ನಂತರ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಲಿ ಎಂದು ವ್ಯಂಗ್ಯವಾಡಿದರು.