ಕೊಡಗು : ಕೊಡಗು ಜಿಲ್ಲಾ ಸಂಯುಕ್ತ ಜಮಾಅತ್ ಸಹಾಯಕ ಖಾಝಿಯಾಗಿ ಸೇವೆ ಸಲ್ಲಿಸುತ್ತಿದ್ದ ಎಡಪಾಲ ಮಹ್ಮೂದ್ ಮುಸ್ಲಿಯಾರ್ (77) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಿಕ್ಕರೆ ಅಬ್ದುಲ್ ಖಾದರ್ ಮಾಸ್ಟರ್ ಹಾಗೂ ಅಸ್ಮಾಅ್ ದಂಪತಿಯ ಪುತ್ರ ಮಹ್ಮೂದ್ ಮುಸ್ಲಿಯಾರ್ ಎಡಪ್ಪಾಲ ಪ್ರಾಥಮಿಕ ಶಿಕ್ಷಣವನ್ನು ಕೊಡಗಿನ ಕುಪ್ಪಾದಲ್ಲಿ ಮುಗಿಸಿದರು. ನಂತರ ಧಾರ್ಮಿಕ ಶಿಕ್ಷಣವನ್ನು ಕೊಂಡಗೇರಿ, ತಲಶ್ಶೇರಿ ಸಮೀಪದ ಪೊಕೋಂ ಹಾಗೂ ತಳಿಪರಂಬುವಿನ ತಿರುವಟ್ಟೂರು ಮತ್ತು ಕಣ್ಣೂರು ಜಿಲ್ಲೆಯ ಕಾಂಬದಾರ್ ಮತ್ತು ಪಾಪಿನಿಶೇರಿಯಲ್ಲಿ ಪಡೆದರು.
1963ರಿಂದ ನಾಪೊಕ್ಲು, ಎಡಪಾಲ, ಮೂರ್ನಾಡ್, ವಿರಾಜಪೇಟೆ, ಎಮ್ಮೆಮಾಡು, ಮೈಸೂರು ಮುಂತಾದ ಕಡೆ ಮುದರ್ರಿಸ್, ಖತೀಬರಾಗಿ ಸೇವೆ ಸಲ್ಲಿಸಿದ್ದಾರೆ. 1968-69ರಲ್ಲಿ ಕೊಡಗಿನ ಖತೀಬರನ್ನು ಒಟ್ಟು ಸೇರಿಸಿ ‘ಜಂಇಯತುಲ್ ಖುತಬಾಅ್’, 1969-70ರಲ್ಲಿ ‘ಕೂರ್ಗು ಮುಸ್ಲಿಂ ಅಸೋಸಿಯೇಶನ್’, 1971-72ರಲ್ಲಿ ‘ಕೂರ್ಗ್ ಜಿಲ್ಲಾ ಜಂಇಯತುಲ್ ಉಲಮಾಗೆ’ ಚಾಲನೆ ನೀಡಿದರು. ಅದರೊಂದಿಗೆ ಪ್ರತ್ಯೇಕ ಮದ್ರಸ ಸಿಲೆಬಸ್ ರೂಪಿಕರಿಸಬೇಕೆಂಬ ಬೇಡಿಕೆಗೆ “ಕೊಡಗು ಜಿಲ್ಲಾ ಇಸ್ಲಾಂ ವಿದ್ಯಾಭ್ಯಾಸ ಸಂಸ್ಥೆ” ಎಂಬ ಹೆಸರಲ್ಲಿ ವಿದ್ಯಾಭ್ಯಾಸ ಬೋರ್ಡನ್ನು ಜಾರಿಗೆ ತರಲಾಯಿತು. ‘ನೂರುಲ್ ಇಸ್ಲಾಂ ಸಭಾ’ ಎಂಬ ಸಂಘಟನೆಗೆ ರೂಪು ನೀಡಿ ಅದರ ಅಧೀನದಲ್ಲಿ ಇಂಗ್ಲೀಷ್ ಮೀಡಿಯಂ ಶಾಲೆ, ಮದ್ರಸಗಳನ್ನು ಕಟ್ಟಿ ಬೆಳೆಸಿದ್ದರು. ನಂತರ ‘ಮರ್ಕಝುಲ್ ಹಿದಾಯ ಎಜುಕೇಶನಲ್ ಸೆಂಟರ್’ಗೆ ಚಾಲನೆ ನೀಡಲಾಯಿತು.
ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.