ಬೆಂಗಳೂರು,ಮಾ. 04: ಇಂದು ಆರಂಭಗೊಂಡ ವಿಶೇಷ ಬಜೆಟ್ ನಿರೀಕ್ಷೆಯಂತೆ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಸಂಘರ್ಷಕ್ಕೆ ಸಾಕ್ಷಿಯಾಯಿತು. ಅಧಿವೇಶನದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆಯ ಮೇಲೆ ಚರ್ಚೆ ನಡೆಸಲು ಸ್ಪೀಕರ್ ಪ್ರಸ್ತಾಪಿಸಿದರು. ಇದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು.
ಯಾವ ನಿಯಮಾವಳಿಯಲ್ಲಿ ಈ ವಿಷಯ ತಂದಿದ್ದೀರಿ ಎಂದು ಪ್ರಶ್ನಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಇದು ಯಾವ ನಿಯಮಾವಳಿಯಲ್ಲೂ ಬರುವುದಿಲ್ಲ. ಆದರೂ ಕೂಡ ಇದನ್ನು ತಂದಿದ್ದೀರಿ. ನಿಯಮದಲ್ಲಿ ಇಲ್ಲದೇ ಇರುವುದನ್ನು ಚರ್ಚೆ ಮಾಡಲು ಆಗುವುದಿಲ್ಲ. ಇದೊಂದು ಆರೆಸ್ಸೆಸ್ ಅಜೆಂಡಾ ಎಂದು ಸಿದ್ದರಾಮಯ್ಯ ಟೀಕಿಸಿದರು. ಆದರೆ, ಇದು ನಿಯಮ 363ರ ಅಡಿ ಚರ್ಚೆಗೆ ಅವಕಾಶ ಇದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟನೆ ನೀಡಿದರು.
ಸ್ಪೀಕರ್ ಅವರು ತಮ್ಮ ವಿಶೇಷಾಧಿಕಾರ ಬಳಸಿ ಈ ವಿಷಯವನ್ನು ಚರ್ಚೆಗೆ ಸೇರಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್, ಸ್ಪೀಕರ್ ವಿಶೇಷಾಧಿಕಾರದ ದುರುಪಯೋಗ ಸರಿಯಲ್ಲ ಎಂದು ಟೀಕಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಿಎಂ ಯಡಿಯೂರಪ್ಪ, ಒನ್ ನೇಷನ್ ಒನ್ ಎಲೆಕ್ಷನ್ ವಿಷಯದ ಮೇಲೆ ಚರ್ಚೆಗೆ ಬಿಎಸಿ ಸಭೆಯಲ್ಲಿ ತೀರ್ಮಾನ ಆಗಿದೆ. ಇದು ಯಾರಿಗೆ ಒಪ್ಪಿಗೆ ಇದೆಯೋ ಇಲ್ಲವೋ ಎಂಬುದು ಬೇಡ. ಆದರೆ, ತೀರ್ಮಾನ ಆದಂತೆ ಚರ್ಚೆ ಆಗಲಿ. ಸಭಾಧ್ಯಕ್ಷರು ತಂದ ನಿಯಮವನ್ನು ಪ್ರಶ್ನಿಸಲು ಯಾರಿಗೂ ಅಧಿಕಾರ ಇಲ್ಲ. ಕಾನೂನು ರೀತಿ ಸಭಾಧ್ಯಕ್ಷರು ವಿಷಯ ಪ್ರಸ್ತಾಪಿಸಿದ್ದಾರೆ ಎಂದು ವಿಪಕ್ಷ ಸದಸ್ಯರಿಗೆ ತಿರುಗೇಟು ನೀಡಿದರು.
ಇತ್ತ, ಹೆಚ್ ಡಿ ಕುಮಾರಸ್ವಾಮಿ ಅವರು ಸದನದಲ್ಲಿ ಗೈರಾಗಿದ್ದರು. ಜೆಡಿಎಸ್ ಸದಸ್ಯರು ಮೌನಕ್ಕೆ ಶರಣಾಗಿದ್ದರು. ಜೆಡಿಎಸ್ ಸಕಾರಾತ್ಮಕವಾಗಿ ಸ್ಪಂದಿಸಿರುವ ಹಿನ್ನೆಲೆಯಲ್ಲಿ ಚರ್ಚೆ ಮಾಡಲಾಗುತ್ತಿದೆ ಎಂದು ಹೇಳಿದ ಸ್ಪೀಕರ್ ಕಾಗೇರಿ, ಕೈ ಸದಸ್ಯರ ವಿರೋಧದ ನಡುವೆಯೂ ಒನ್ ನೇಷನ್ ಒನ್ ಎಲೆಕ್ಷನ್ ವಿಚಾರವನ್ನು ಚರ್ಚೆಗೆ ತಂದರು. ಇದೊಂದು ಆರೆಸ್ಸೆಸ್ ಅಜೆಂಡಾ ಎಂದು ಸಿದ್ದರಾಮಯ್ಯ ಆರ್ಭಟಿಸುತ್ತಿರುವಂತೆಯೇ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಧರಣಿ ನಡೆಸಿದರು. ಇದಕ್ಕೆ ವ್ಯಗ್ರಗೊಂಡ ಸ್ಪೀಕರ್, ನೀವೇ ಚರ್ಚೆಗೆ ಒಪ್ಪಿಗೆ ಕೊಟ್ಟು ಈಗ ಈ ರೀತಿ ಮಾಡಿದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗದ್ದಲದ ನಡುವೆಯೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ಒಂದು ರಾಷ್ಟ್ರ ಒಂದು ಚುನಾವಣೆ ವಿಚಾರವನ್ನು ಓದುವುದನ್ನು ಮುಂದುವರಿಸಿದರು.
ನಿಮಗೆ ಇಷ್ಟ ಇಲ್ಲದಿದ್ದರೆ ಹೇಳಬೇಡಿ. ಆದರೆ, ವಿರೋಧ ಮಾತ್ರ ಮಾಡಬೇಡಿ. ವಿರೋಧ ಪಕ್ಷದವರಿಗೆ ಯಾವುದರ ಮೇಲೂ ನಂಬಿಕೆ ವಿಶ್ವಾಸ ಇಲ್ಲ. ನೀವು ಗಲಾಟೆ ಮಾಡದೇ ಬಂದು ಚರ್ಚೆ ಮಾಡುವುದನ್ನು ಬಿಟ್ಟು ಹೀಗೆ ನಡೆದುಕೊಳ್ಳುವುದು ಸರಿಯಲ್ಲ. ನಿಮ್ಮ ನಡವಳಿಗೆ ನಿಜವಾಗಿಯೂ ನಾಚಿಕೆಗೇಡಿನ ಸಂಗತಿಯಾಗಿದೆ. ಇದನ್ನು ರಾಜ್ಯದ ಜನರು ಸಹಿಸುವುದಿಲ್ಲ ಎಂದು ಯಡಿಯೂರಪ್ಪ ಕೆಂಡಕಾರಿದರು.
ಒನ್ ನೇಷನ್ ಒನ್ ಎಲೆಕ್ಷನ್ ವಿಚಾರವನ್ಜು ನಿಯಮಾವಳಿ ಪ್ರಕಾರ ಮಂಡಿಸಿಲ್ಲ ಎಂಬ ತಮ್ಮ ವಾದವನ್ಉ ಮುಂದುವರಿಸಿದ ಕಾಂಗ್ರೆಸ್ ಸದಸ್ಯರು, ಪಾಯಿಂಟ್ ಆಫ್ ಆರ್ಡರ್ ಚರ್ಚೆಗೆ ಅವಕಾಶ ಕೊಡಬೇಕೆಂದು ಆಗ್ರಹಿಸಿದರು. ಆನಂತರ ಭದ್ರಾವತಿಯ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರು ಬಟ್ಟೆ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡಿದ್ದನ್ನು ಕಂಡ ಸ್ಪೀಕರ್ ಕುಪಿತಗೊಂಡರು. ಏನ್ರೀ ಸಿದ್ದರಾಮಯ್ಯನವರೇ, ಇವ್ರು ಸದಸ್ಯರೇನ್ರೀ, ಯಾಕೆ ಇವ್ರು ಹೀಗೆ ನಡೆದುಕೊಳ್ಳುತ್ತಿದ್ದಾರೆ. ಸಂಗಮೇಶ್ ಅವ್ರೆ ಇದು ರಸ್ತೆ ಏನ್ರೀ, ನಿಮ್ಮನ್ನ ಹೊರಗೆ ಹಾಕಬೇಕಾಗುತ್ತದೆ. ನೀವು ಭದ್ರಾವತಿ ಕ್ಷೇತ್ರದ ಜನರಿಗೆ ಅಗೌರವ ಮಾಡುತ್ತಿದ್ದೀರಿ. ಸದನದಲ್ಲಿ ಅಶಿಸ್ತಿನಿಂದ ನಡೆದುಕೊಂಡಿದ್ದೀರಿ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಾಕೀತು ಮಾಡಿದರು. ಬಳಿಕ ಸದನವನ್ನು 15 ನಿಮಿಷ ಕಾಲ ಮುಂದೂಡಿದರು.ಇವತ್ತು ಅಧಿವೇಶನ ಆರಂಭಕ್ಕೂ ಮುನ್ನ ಬೆಳಗ್ಗೆ 9:30ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಒನ್ ನೇಷನ್ ಒನ್ ಎಲೆಕ್ಷನ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಪ್ರತಿಭಟನೆ ನಡೆಸುವುದು ಎಂದು ತೀರ್ಮಾನಿಸಲಾಯಿತು. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಡಿಕೆ ಶಿವಕುಮಾರ್, ಕೆಜೆ ಜಾರ್ಜ್, ಜಮೀರ್ ಅಹ್ಮದ್, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಎಸ್ ಆರ್ ಪಾಟೀಲ್, ನಾರಾಯಣಸ್ವಾಮಿ ಮೊದಲಾದ ಅನೇಕ ಶಾಸಕರು ಭಾಗಿಯಾಗಿದ್ದರು. ಆದರೆ, ಮೇಯರ್ ಚುನಾವಣೆಯ ವಿವಾದದಲ್ಲಿ ಸಿಲುಕಿರುವ ತನ್ವೀರ್ ಸೇಠ್ ಹಾಗೂ ಪುಲಿಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಗೈರಾಗಿದ್ದರು. ತನ್ವೀರ್ ಸೇಠ್ ಅವರು ಸಿದ್ದರಾಮಯ್ಯ ಮೇಲಿನ ಮುನಿಸಿನಿಂದ ಸಭೆಗೆ ಬರಲಿಲ್ಲವಾದರೆ, ಅಖಂಡ ಅವರು ಡಿಜೆ ಹಳ್ಳಿ ಪ್ರಕರಣದಲ್ಲಿ ಸಂಪತ್ ರಾಜ್ ಮೇಲೆ ಯಾವ ಕ್ರಮವೂ ಕೈಗೊಂಡಿಲ್ಲ ಎಂಬ ಕೋಪದಿಂದ ಗೈರಾಗಿದ್ದರೆನ್ನಲಾಗಿದೆ.