janadhvani

Kannada Online News Paper

ಸಾರ್ವಜನಿಕರಿಂದ ವಿರೋಧ: ರಾತ್ರಿ ಕರ್ಫ್ಯೂ ಆದೇಶ ರದ್ದು

ಬೆಂಗಳೂರು: ಸಾರ್ವಜನಿಕರು ಹಾಗೂ ವಿಪಕ್ಷಗಳ ತೀವ್ರ ವಿರೋಧಕ್ಕೆ ಮಣಿದಿರುವ ರಾಜ್ಯ ಸರಕಾರ ರಾತ್ರಿ ಕರ್ಫ್ಯೂ ಜಾರಿ ನಿರ್ಧಾರವನ್ನು ವಾಪಸ್‌ ಪಡೆದಿದೆ. ಜನರೇ ಸ್ವಯಂ ನಿರ್ಬಂಧ ವಿಧಿಸಿಕೊಂಡು, ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಸಾರ್ವಜನಿಕ ವಲಯದಲ್ಲಿ ರಾತ್ರಿ ಕರ್ಫ್ಯೂವಿನ ಅಗತ್ಯವಿಲ್ಲವೆಂಬಂತಹ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆ ನಿರ್ಧಾರವನ್ನು ಮರುಪರಿಶೀಲಿಸಲಾಗಿದೆ. ಸಂಪುಟ ಸಹದ್ಯೋಗಿಗಳ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ರಾತ್ರಿ ಕರ್ಫ್ಯೂವನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಪತ್ತೆಯಾದ ರೂಪಾಂತರ ಹೊಂದಿದ ಕೊರೊನಾ ವೈರಸ್‌ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ತಜ್ಞರ ಸಲಹೆಯ ಮೇರೆಗೆ ರಾತ್ರಿ ಕರ್ಫ್ಯೂವನ್ನು ಜಾರಿಗೆ ತರಲು ತೀರ್ಮಾನಿಸಲಾಗಿತ್ತು. ಆದರೆ, ಸಾರ್ವಜನಿಕರಿಂದ ಅನಗತ್ಯ ಎಂಬ ಅಭಿಪ್ರಾಯ ಬಂದ ಹಿನ್ನೆಲೆ ನಿರ್ಧಾರ ವಾಪಸ್‌ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಯದಲ್ಲೂ ಬದಲಾವಣೆ ಮಾಡಿದ ಸರಕಾರ
ಇನ್ನು, ಸಾರ್ವಜನಿಕರು ಸ್ವಯಂ ನಿರ್ಬಂಧ ವಿಧಿಸಿಕೊಂಡು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು. ಸರಕಾರ ವಿಧಿಸಿದ ಕೊರೊನಾ ನಿಯಂತ್ರಣದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ವೈರಸ್‌ ಹರಡುವಿಕೆ ತಡೆಯಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.

ಡಿಸೆಂಬರ್‌ 24ರ ರಾತ್ರಿ 11 ರಿಂದ ಡಿಸೆಂಬರ್‌ 2ರ ಬೆಳಗ್ಗೆ 5ರವರೆಗೆ ರಾತ್ರಿ ಕರ್ಫ್ಯೂವನ್ನು ವಿಧಿಸಲು ಸರಕಾರ ನಿರ್ಧರಿಸಿತ್ತು. ಅದಲ್ಲದೇ ಈ ವೇಳೆ ಅಗತ್ಯ ಸೇವೆಗಳ ಹೊರತಾಗಿ ಬಹುತೇಕ ಎಲ್ಲ ಚಟುವಟಿಕೆಗಳಿಗೂ ಸರಕಾರ ಅನುಮತಿ ನೀಡಿರುವುದು, ಕೇವಲ ಹೆಸರಿಗಷ್ಟೇ ರಾತ್ರಿ ಕರ್ಫ್ಯೂ ಎಂದು ಹೇಳಲಾಗಿತ್ತು

error: Content is protected !! Not allowed copy content from janadhvani.com