ಬೆಂಗಳೂರು: ಲಿಖಿತ ರೂಪದಲ್ಲಿ ಬೇಡಿಕೆಗಳನ್ನು ಈಡೇರಿಸುವ ಕುರಿತಾಗಿ ಸರ್ಕಾರದ ಪ್ರತಿನಿಧಿ ತಿಳಿಸುವವರೆಗೆ ಮುಷ್ಕರ ಮುಂದುವರಿಯಲಿದೆ ಎಂದು ಸಾರಿಗೆ ನೌಕರರು ಸ್ಪಷ್ಟನೆ ನೀಡಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಸಂಧಾನ ಸಭೆಯ ಕುರಿತಾಗಿ ಮಾಹಿತಿ ನೀಡಿದರು. ಭಾನುವಾರ ಸರ್ಕಾರದ ಜೊತೆಗೆ ಮಾತುಕತೆ ನಡೆದಿತ್ತು. ಸಂಧಾನ ಸಭೆಯಲ್ಲಿ 9 ಬೇಡಿಕೆಗಳನ್ನು ಪೂರೈಸಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಒಂದು ಬೇಡಿಕೆ ಪೂರೈಸಲು ಮಾತ್ರ ಅಸಾಧ್ಯ ಎಂದಿದೆ.
ಆದರೆ ಸರ್ಕಾರದ ಈ ನಿರ್ಧಾರವನ್ನು ಸಚಿವರ ಮೂಲಕ ಈ ವೇದಿಕೆಗೆ ತಿಳಿಸಬೇಕು ಎಂದು ಕೋಡಿಹಳ್ಳಿ ಆಗ್ರಹಿಸಿದ್ದಾರೆ. ಭಾನುವಾರ ನಡೆದ ಸಭೆಯಲ್ಲಿ ಭಾಗಿಯಾಗಿದ್ದ 8 ಜನ ಮುಖಂಡರು ಇದ್ದಕ್ಕಿದ್ದಂತೆ ನಮಗೆ ಫೋನ್‌ಗೆ ಸಿಗಲಿಲ್ಲ. ಎರಡು ಗಂಟೆಯ ಬಳಿಕ ಫೋನ್ ಬಂತು, ನಂದೀಶ್ ರೆಡ್ಡಿ ಮಾತನಾಡಿ ನಮ್ಮ ಜೊತೆಗೆ ಇದ್ದಾರೆ ನಾಯಕರು ಎಂದರು. ಇಲ್ಲದಿದ್ದರೆ ಪೊಲೀಸ್ ಠಾಣೆಗೆ ದೂರು ಕೊಡುತ್ತಿದ್ದೆವು ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆಎಸ್‌ಆರ್‌ಟಿಸಿ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರು, ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರಾಗಬೇಕು ಎಂಬ ಬೇಡಿಕೆಯನ್ನು ನಾವು ಕೈಬಿಡಲ್ಲ. ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ಸಭೆಯಲ್ಲಿ ಹೇಳಿದ್ದಾರೆ. ನಮ್ಮ ಅಜೆಂಡಾದಲ್ಲಿ ನಾವು ಹಿಂದೆ ಸರಿದಿಲ್ಲ ಎಂದು ಸ್ಪಷ್ಟಪಡಿಸಿದರು. ಆರನೇ ವೇತನ ಆಯೋಗ ಜಾರಿಗೊಳಿಸಿ ಎಂಬ ವಿಚಾರವಾಗಿ ಗೊಂದಲ ಇದೆ. ಈ ನಿಟ್ಟಿನಲ್ಲಿ ಸರ್ಕಾರದ ಪ್ರತಿನಿಧಿ ಬಂದು ಹೇಳಿಕೆ ಕೊಡುವವರೆಗೆ ಮುಂದುವರಿಯುತ್ತೆ ಎಂದು ತಿಳಿಸಿದರು.