ಕೊಣಾಜೆ: ಕಟ್ಟಡ ನಿರ್ಮಾಣ ಮಾಡುವವರಿಗೆ ಮರಳು ಸಿಗದೇ ಇರುವ ಕಾರಣ ಹರೇಕಳ, ಪಾವೂರು ಗ್ರಾಮದಲ್ಲಿ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದ್ದು ಇದರಿಂದ ಕಟ್ಟಡ ಕಾರ್ಮಿಕರು ಕೆಲಸ ಇಲ್ಲದೇ ತೊಂದರೆ ಅನುಭವಿಸುತ್ತಿದ್ದು ಜಿಲ್ಲಾಡಳಿತ ಕಡಿಮೆ ದರದಲ್ಲಿ ಸುಲಭವಾಗಿ ಮನೆ ಕಟ್ಟುವವರಿಗೆ ಮರಳು ಸಿಗುವಂತೆ ವ್ಯವಸ್ಥೆ ಕಲ್ಪಿಸ ಬೇಕೆಂದು ಒತ್ತಾಯಿಸಿ ಇಂದು ಗ್ರಾಮ ಚಾವಡಿ ಜಂಕ್ಷನ್ ನಲ್ಲಿ CWFI ಮತ್ತು DYFI ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರಿಂದ ಹಕ್ಕೊತ್ತಾಯ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ಲಾಕ್ ಡೌನ್ ನಂತರ ಕಟ್ಟಡ ನಿರ್ಮಾಣ ಕಾಮಗಾರಿ ಕುಂಠಿತಗೊಂಡಿದ್ದು ಕಾರ್ಮಿಕರು ಕೆಲಸವಿಲ್ಲದೇ ತೊಂದರೆ ಅನುಭವಿಸುತ್ತಿದ್ದರು. ಈಗ ಲಾಕ್ ಡೌನ್ ತೆರವುಗೊಂಡು ಜನಜೀವನ ಸಹಜ ಸ್ಥಿತಿಯತ್ತ ನಿಧಾನವಾಗಿ ವಾಲುತ್ತಿದ್ದರೆ ಕಟ್ಟಡ ಕಾರ್ಮಿಕರು ಮಾತ್ರ ನಿರ್ಮಾಣ ಕಾಮಗಾರಿ ಆರಂಭವಾಗದ ಕಾರಣ ಸಂಕಷ್ಟ ಅನುಭವಿಸುತ್ತಿದ್ದಾರೆ.
ಕಟ್ಟಡ ನಿರ್ಮಾಣ ಮಾಡುವವರಿಗೆ ಮರಳು ಸಮರ್ಪಕವಾಗಿ ಸಿಗದಿರುವ ಕಾರಣ ಈ ರೀತಿಯ ಸಮಸ್ಯೆ ಎದುರಾಗಿದ್ದು ಜಿಲ್ಲಾಡಳಿತ ಸ್ವಯಂ ಮುತುವರ್ಜಿ ವಹಿಸಿ ಕಟ್ಟಡ ನಿರ್ಮಾಣ ಮಾಡುವವರಿಗೆ ಸುಲಭ ಹಾಗೂ ರಿಯಾಯಿತಿ ದರದಲ್ಲಿ ಮರಳು ಸಿಗಲು ಬೇಕಾದ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಭೆಯನ್ನುದ್ದೇಶಿಸಿ ಕಟ್ಟಡ ಕಾರ್ಮಿಕರ ಸಂಘದ ಉಳ್ಳಾಲ ವಲಯ ಕಾರ್ಯದರ್ಶಿ ಚಂದ್ರಹಾಸ ಪಿಲಾರ್ ಮಾತನಾಡಿದರು. ಸಭೆಯಲ್ಲಿ ಡಿವೈಎಫ್ಐ ಜಿಲ್ಲಾ ನಾಯಕ ರಫೀಕ್ ಹರೇಕಳ , ಕಟ್ಟಡ ಕಾರ್ಮಿಕರ ಸಂಘದ ಉಳ್ಳಾಲ ವಲಯ ಅಧ್ಯಕ್ಷ ಜನಾರ್ದನ್ ಕುತ್ತಾರ್, ಉಪಾಧ್ಯಕ್ಷ ರಾಮಚಂದ್ರ ಪಜೀರ್, ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ, ಉಪಾಧ್ಯಕ್ಷ ಸತ್ತಾರ್ ಕೊಜಪಾಡಿ, ಉಮರಬ್ಬ ನ್ಯೂಪಡ್ಪು, ಕಾರ್ಯದರ್ಶಿ ಹನೀಫ್ ಪೊಡಾರ್, ಎವರಿಸ್ ಕುಟಿನ್ಹಾ, ಇಬ್ರಾಹಿಂ ಕೊಜಪಾಡಿ, ಡಿವೈಎಫ್ಐ ಅಧ್ಯಕ್ಷ ನಿಝಮ್ ಹರೇಕಳ ,ಅಶ್ರಫ್ ಹರೇಕಳ, ಇಸ್ಮಾಯಿಲ್ ಕೊಜಪಾಡಿ, ನವಾಜ್ ಆಲಡ್ಕ ಉಪಸ್ಥಿತರಿದ್ದರು.