ಮಂಗಳೂರು:ಕೊರೋನಾ ನಿಯಂತ್ರಣದ ಅಂಗವಾಗಿ ಗಡಿಯನ್ನು ಮುಚ್ಚಲ್ಪಟ್ಟು ಹಲವಾರು ಸಮಸ್ಯೆಗಳಿಗೆ ಈಡಾಗಿದ್ದ ಮಂಗಳೂರು- ಕಾಸರಗೋಡು ತಲಪಾಡಿ ಗಡಿಯನ್ನು ಸಂಚಾರ ಮುಕ್ತಗೊಳಿಲಾಗಿದೆ.
ಆದರೆ ಉದ್ಯೋಗಕ್ಕಾಗಿ ಬರುವವರಿಗೆ ಪಾಸ್ ವಿತರಣೆಯಲ್ಲಿ ಗೊಂದಲ ವಾಗಿರುವ ಬಗ್ಗೆ ಮಾಹಿತಿ ಬಂದಿರುವ ಕಾರಣ, ಇನ್ನು ಮುಂದೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸಲು ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ ಸೋಮವಾರದಿಂದ ಮೂರು ಪ್ರತ್ಯೇಕ ಸಹಾಯಕೇಂದ್ರ ಆರಂಭಿಸುವಂತೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಸೂಚನೆ ನೀಡಿರುವುದಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ
ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ನೇತೃತ್ವದ ತಂಡ ಸಂಸದ ನಳಿನ್ ಕುಮಾರ್ ಹಾಗೂ ನನ್ನನ್ನು ಭೇಟಿ ಯಾಗಿ ಸಮಸ್ಯೆಯ ಬಗ್ಗೆ ವಿವರಿಸಿದ್ದಾರೆ. ನಿಯಮಗಳ ಸಮಸ್ಯೆಗಳೇನೇ ಇದ್ದರೂ ದೈನಂದಿನ ಚಟುವಟಿಕೆಗಳಿಗಾಗಿ ದ.ಕ.ಗೆ ಬರುವ ಕಾಸರಗೋಡು ಕನ್ನಡಿಗರಿಗೆ ತುರ್ತು ಪಾಸ್ ನೀಡಲು ಸೂಚಿಸಲಾಗಿದೆ ಎಂದರು.
ವೆನ್ಲಾಕ್ ಒಪಿಡಿ 2 ದಿನದಲ್ಲಿ ಆರಂಭ
ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದ್ದ ವೆನ್ಲಾಕ್ ಜಿಲ್ಲಾಸ್ಪತ್ರೆಯ ಹೊರರೋಗಿ ವಿಭಾಗದ (ಒಪಿಡಿ) ಸೇವೆಯನ್ನು ಮುಂದಿನ ಎರಡು ದಿನಗಳಲ್ಲಿ ಪುನಃ ಆರಂಭಿಸಲಾಗುವುದು. ಪ್ರಾರಂಭಿಕವಾಗಿ ಕೊರೊನಾಕ್ಕಾಗಿ ನಿಗದಿಪಡಿಸಲಾದ ಆಸ್ಪತ್ರೆ ಹೊರತುಪಡಿಸಿ ಉಳಿದ ಕಟ್ಟಡವನ್ನು ಒಪಿಡಿಗೆ ಮೀಸಲಿಡಲಾಗುವುದು ಎಂದು ಹೇಳಿದರು.