ರಿಯಾದ್: ಸೌದಿ ಅರೇಬಿಯಾದಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಕರ್ಫ್ಯೂ ತೆಗೆದುಹಾಕಲಾಗಿದ್ದು, ಈ ಸಮಯದಲ್ಲಿ ತಮ್ಮ ಪ್ರಾಂತ್ಯದಲ್ಲಿ ಎಲ್ಲಿ ಬೇಕಾದರೂ ಪ್ರಯಾಣಿಸಬಹುದು. ಆದಾಗ್ಯೂ, ರಿಯಾದ್, ಮಕ್ಕಾ, ಮದೀನಾ, ತಬೂಕ್, ದಮ್ಮಾಮ್, ದಹ್ರಾನ್ ಮತ್ತು ಹಫೂಫ್‌ನಲ್ಲಿರುವವರು ನಗರ ವ್ಯಾಪ್ತಿಯನ್ನು ಬಿಟ್ಟು ಹೋಗಬಾರದು.
ಜಿದ್ದಾ, ತಾಯಿಫ್, ಖತೀಫ್, ಖೋಬರ್, ಸಾಮ್ತಾ, ಮತ್ತು ದಾಯಿರ್ ಗವರ್ನರೇಟ್‌ಗಳಲ್ಲಿರುವವರು ತಮ್ಮ ವ್ಯಾಪ್ತಿಯಿಂದ ಹೊರಗೆ ಹೋಗಬಾರದು.ಈ ನಗರಗಳು ಮತ್ತು ಗವರ್ನರೇಟ್ ವ್ಯಾಪ್ತಿಯ ಹೊರಗಿನವರು ಕೂಡ ಪ್ರಾಂತ್ಯ ಪ್ರವೇಶಕ್ಕೆ ವಿಧಿಸಲಾದ ನಿಷೇಧ ಮುಂದುವರಿಯಲಿದೆ.
ಈ ಕುರಿತು ಗೃಹ ಸಚಿವಾಲಯ ವಿವರಿಸಿದ್ದು, 24 ಗಂಟೆಗಳ ಕರ್ಫ್ಯೂ ಮಕ್ಕಾದಲ್ಲಿ ಮುಂದುವರಿಯಲಿದೆ. ಇದಲ್ಲದೆ, ಈ ಹಿಂದೆ 24 ಗಂಟೆಗಳ ಐಸೋಲೇಷನ್ ಘೋಷಿಸಲಾದ ಪ್ರದೇಶಗಳಾದ ಜಿದ್ದಾ ಕಿಲೋ 14 ಉತ್ತರ, ಕಿಲೋ 14 ದಕ್ಷಿಣ, ಕೊರಿಯಾತ್, ಪೆಟ್ರೋಮಿನ್, ಕಿಲೋ 13 ಗುಲೈಲ್, ಮಹಾಜರ್, ಮದೀನಾದಲ್ಲಿನ ಶೂರೈಬಾತ್, ಬನಿ ದಫರ್, ಖುರ್ಬಾನ್, ಅಲ್-ಜುಮುಆ, ಇಸ್ಕಾನ್‌ನ ಒಂದು ಭಾಗ, ಬನೀ ಖುದ್ರಾ, ಜಿಝಾನ್‌ನ ಸಾಮ್ತಾ, ಅಲ್-ದಾಯರ್ ಮುಂತಾದೆಡೆ 24 ಗಂಟೆಗಳ ಕರ್ಫ್ಯೂ ಮುಂದುವರಿಯುತ್ತದೆ. ಯಾರೂ ಈ ಸ್ಥಳಗಳನ್ನು ಪ್ರವೇಶಿಸಬಾರದು ಅಥವಾ ಹೊರಗೆ ಹೋಗಬಾರದು.
24 ಗಂಟೆಗಳ ಬದಲಾಗಿ ಕರ್ಫ್ಯೂ ಸಮಯವನ್ನು 16ಗಂಟೆಗಳಿಗೆ ಇಳಿಸಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಕರ್ಫ್ಯೂ ಇಲ್ಲ. ಪಾಸ್ ಇಲ್ಲದೆ ಈ ಸಮಯದಲ್ಲಿ ಹೊರಗಡೆ ಹೊರಡಬಹುದು. ಈ ಸಮಯದ ನಂತರ ಪ್ರಯಾಣಿಸಲು ಪಾಸ್ ಅಗತ್ಯವಿದೆ. ಇಲ್ಲದಿದ್ದರೆ, ದಂಡ ವಿಧಿಸಲಾಗುತ್ತದೆ. ಕರ್ಫ್ಯೂ ಅಲ್ಲದ ಸಮಯದಲ್ಲೂ, ಗುಂಪು ಗೂಡಿದರೂ ಕ್ರಮ ಕೈಗೊಳ್ಳಲಾಗುತ್ತದೆ. 10,000 ರಿಯಾಲ್ ದಂಡ ವಿಧಿಸಲಾಗುತ್ತದೆ.
ಯಾವುದೇ ಸರಕಾರಿ ಸಂಸ್ಥೆಗಳನ್ನು ತೆರೆಯಲು ಅನುಮತಿ ಇಲ್ಲ. ಆದರೆ ಪ್ರಸಕ್ತ ಕೆಲಸ ಮಾಡುತ್ತಿರುವವರು ಮುಂದುವರಿಯಬಹುದು. ಕೋವಿಡ್ ರಕ್ಷಣಾ ಕಾರ್ಯಗಳು ನಡೆಯುತ್ತಿರುವ ಪ್ರದೇಶಗಳಿಗೂ ಹಿಂದಿನಂತೆ ಮುಂದುವರಿಯಬಹುದು. ಅಗತ್ಯ ಸೇವೆಗಳನ್ನು ಬಳಸಿಕೊಳ್ಳುವುದಕ್ಕಾಗಿ ಕರ್ಫ್ಯೂ ಸಡಿಲಿಸಲಾಗಿದೆ. ವ್ಯಕ್ತಿಗಳು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿ ಹೊರಗಡೆ ಹೊರಡಬೇಕು ಎಂದು ಸಚಿವಾಲಯ ತಿಳಿಸಿದೆ.






