janadhvani

Kannada Online News Paper

ಸೌದಿ: ರಂಝಾನ್ ಪ್ರಯುಕ್ತ ಮನೆಮನೆಗೆ ಪವಿತ್ರ ಝಂಝಂ- ಯೋಜನೆ ಆರಂಭ

ರಿಯಾದ್: ರಂಝಾನ್ ಪ್ರಯುಕ್ತ ಸೌದಿ ಅರೇಬಿಯಾದ್ಯಂತ ಮನೆಗಳಿಗೆ ಪವಿತ್ರ ಝಂಝಂ ನೀರನ್ನು ತಲುಪಿಸುವ ಹೊಸ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಯೋಜನೆಯ ಮೊದಲ ಹಂತವು ಇಂದಿನಿಂದ ಮಕ್ಕಾದಲ್ಲಿ ಪ್ರಾರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನಾ ಹರಡುವ ಹಿನ್ನೆಲೆಯಲ್ಲಿ, ಭದ್ರತೆಯ ಭಾಗವಾಗಿ ಮಕ್ಕಾದ ಪವಿತ್ರ ತೀರ್ಥ ಝಂಝಂ ನೀರು ಸರಬರಾಜು ಕಾರ್ಖಾನೆಯನ್ನು ಮುಚ್ಚಲಾಗಿತ್ತು. ಈ ಸನ್ನಿವೇಶದಲ್ಲಿ ಝಂಝಂ ತೀರ್ಥ ನೀರನ್ನು ತುಂಬಿದ ಬಾಟಲಿಗಳನ್ನು ಮನೆಗಳಿಗೆ ತಲುಪಿಸುವ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ.

ರಂಝಾನ್‌ನಲ್ಲಿ ಪವಿತ್ರ ಝಂಝಂ ನೀರನ್ನು ಪಡೆಯಲು ಬಯಸುವವರಿಗೆ 5 ಲೀಟರ್ ಬಾಟಲಿಗಳನ್ನು ವಿತರಿಸಲಾಗುವುದು ಎಂದು ವಿತರಣೆಯ ಉಸ್ತುವಾರಿ ರಾಷ್ಟ್ರೀಯ ಜಲ ಪ್ರಾಧಿಕಾರದ ಸಿಇಒ ಇಂಜಿನಿಯರ್ ಮುಹಮ್ಮದ್ ಮುವಕ್ಕಿಲಿ ತಿಳಿಸಿದ್ದಾರೆ.

ನೀರನ್ನು ಎರಡು ರೀತಿಯಲ್ಲಿ ಸರಬರಾಜು ಮಾಡಲಾಗುತ್ತದೆ. ಒಂದು “ಹುನಾಕಾ” ವೆಬ್ ಪೋರ್ಟಲ್ ಮೂಲಕ ಮತ್ತು ಇನ್ನೊಂದು ಸೌದಿ ಅರೇಬಿಯಾದ ಅತಿದೊಡ್ಡ ಚಿಲ್ಲರೆ ಮಾರಾಟ ಕೇಂದ್ರವಾದ ಹೈಪರ್‌ಪಾಂಡಾ ಸೂಪರ್ ಮಾರ್ಕೆಟ್‌ಗಳ ಮೂಲಕ.

ಸೌದಿ ಅರೇಬಿಯಾದ ವಿವಿಧ ಪ್ರಾಂತ್ಯಗಳಲ್ಲಿ ಪಾಂಡಾ ಚಿಲ್ಲರೆ ಮಾರುಕಟ್ಟೆ ಮೂಲಕ ಐದು ಲೀಟರ್ ಬಾಟಲಿ ಝಂಝಂ ನೀರನ್ನು ಪೂರೈಸಲಾಗುವುದು. ರಾಷ್ಟ್ರೀಯ ಜಲ ಪ್ರಾಧಿಕಾರದ ಸಿಇಒ ಪ್ರಕಾರ, ಪಾಂಡಾ ಸೂಪರ್ಮಾರ್ಕೆಟ್ ಅಧಿಕಾರಿಗಳೊಂದಿಗೆ ಈ ಕುರಿತು ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

‘ಹುನಾಕಾ’ ಇಲೆಕ್ಟ್ರಾನಿಕ್ ಪೋರ್ಟಲ್ ಮೂಲಕ ಝಂಝಂ ಬಾಟಲಿಗಳ ಮೊದಲ ಹಂತದ ವಿತರಣೆ ಸೋಮವಾರ ಮಕ್ಕಾದಲ್ಲಿ ಪ್ರಾರಂಭವಾಗಿದೆ.ಈ ಸೇವೆಯನ್ನು ಸೌದಿ ಅರೇಬಿಯಾದ ವಿವಿಧ ಭಾಗಗಳಿಗೆ ವಿಸ್ತರಿಸಲಾಗುವುದು. ಪಾಂಡಾ ಸುಪರ್ ಮಾರ್ಕೆಟ್ ನಲ್ಲಿ ಅದೇ ದಿನ ವಿತರಣೆ ಪ್ರಾರಂಭವಾಗುತ್ತದೆ. “ಸೌದಿಯ ವಿವಿಧ ಭಾಗಗಳಲ್ಲಿರುವ ಪಾಂಡಾದ ಅಂಗಡಿಗಳ ಮೂಲಕ ಅಗತ್ಯವಿರುವವರಿಗೆ 10 ದಿನಗಳ ಒಳಗಾಗಿ ಝಂಝಂ ನೀರು ಲಭ್ಯವಾಗಲಿದೆ ಎಂದು ಸಿಇಒ ಹೇಳಿದರು.

error: Content is protected !! Not allowed copy content from janadhvani.com