ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2020-21ನೇ ಸಾಲಿನ ಪರಿಷ್ಕೃತ ಬಜೆಟ್ ಮಂಡನೆ ಮಾಡಿದರು. ಈ ಬಾರಿಯ ರಾಜ್ಯ ಬಜೆಟ್ನಲ್ಲಿ ವಸ್ತು, ಸೇವೆಗಳ ಬೆಲೆ ಏರಿಕೆಗೇ ಹೆಚ್ಚು ಒಲವು ತೋರಲಾಗಿದೆ. ಬೆಲೆ ಇಳಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಸಕ್ತಿ ತೋರಿಲ್ಲ. ಅಧಿಕ ಸಂಪನ್ಮೂಲ ಕ್ರೂಡೀಕರಣದ ನೆಪವೊಡ್ಡಿ ತೆರಿಗೆ ಹೆಚ್ಚಿಸಲಾಗಿದೆ.
ಪೆಟ್ರೋಲ್, ಡೀಸೆಲ್ ದರ ಹೆಚ್ಚಳ: ಪೆಟ್ರೋಲ್, ಡೀಸೆಲ್ ಮೆಲಿನ ತೆರಿಗೆ ಪ್ರಮಾಣವನ್ನು ಕ್ರಮವಾಗಿ ಶೇ 32ರಿಂದ 35 ಮತ್ತು ಶೇ 21ರಿಂದ 24ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 1.60ರೂ. ಮತ್ತು ಪ್ರತಿ ಲೀಟರ್ ಡಿಸೇಲ್ ದರ 1.59ರೂ. ಏರಿಕೆಯಾಗಲಿದೆ.
ಮುದ್ರಾಂಕ ಶುಲ್ಕ ಇಳಿಕೆ: 20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಅಪಾರ್ಟ್ಮೆಂಟ್ಗಳ ಮೊದಲನೇ ನೋಂದಣಿ ಮುದ್ರಾಂಕ ಶುಲ್ಕ ಶೇ 5ರಿಂದ ಶೇ 2ಕ್ಕೆ ಇಳಿಕೆ ಮಾಡಲಾಗಿದೆ. ಆದರೆ, 20 ಲಕ್ಷಕ್ಕಿಂತ ಕಡಿಮೆ ಮೌಲ್ಯ ಎಂದು ಉಲ್ಲೇಖಿಸಿರುವುದರಿಂದ ಈ ಶುಲ್ಕ ಕಡಿತದಿಂದ ರಿಯಲ್ ಎಸ್ಟೇಟ್ ವಲಯಕ್ಕೆ ಹೆಚ್ಚಿನ ಪ್ರಯೋಜನ ದೊರೆಯದು ಎನ್ನಲಾಗುತ್ತಿದೆ.
ಸಿಎಂ ಯಡಿಯೂರಪ್ಪ ಅವರು 7ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದು, ಈ ಹಿಂದೆ 2006ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 2 ಬಾರಿ ಬಜೆಟ್ ಮಂಡಿಸಿದ್ದರು. ಆ ಬಳಿಕ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದ ಅವಧಿಯಲ್ಲಿ 4 ಬಾರಿ ಬಜೆಟ್ ಮಂಡನೆ ಮಾಡಿದ್ದರು.
ರಾಜ್ಯದ ಜನತೆಗೆ ಧನ್ಯವಾದ ಸಮರ್ಪಿಸಿ ಬಜೆಟ್ ಮಂಡನೆ ಆರಂಭಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇದು ಸರ್ವರಿಗೂ ಸಮಬಾಳು, ಎಲ್ಲರನ್ನೂ ಒಳಗೊಂಡ ಬಜೆಟ್. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕೃಷಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಅಲ್ಲದೆ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಮಕ್ಕಳ ಆಯವ್ಯಯ ಮಂಡನೆ:
ರಾಜ್ಯದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಆಯವ್ಯಯ ಮಂಡನೆ ಮಾಡಿರುವ ಸಿಎಂ ಯಡಿಯೂರಪ್ಪ, ರಾಜ್ಯದಲ್ಲಿರುವ 18 ವರ್ಷದ ಕೆಳಗಿರುವ ಎಲ್ಲಾ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ರಾಜ್ಯದ ಬದ್ಧತೆಯನ್ನು ಇದು ತೋರಿಸುತ್ತಿದೆ. 2020-21ನೇ ಸಾಲಿನ ಆಯವ್ಯಯದಲ್ಲಿ 36,340 ಕೋಟಿ ರೂ.ಗಳ 279 ಕಾರ್ಯಕ್ರಮಗಳ ಪ್ರಸ್ತಾಪ ಮಾಡಿದ್ದಾರೆ. ಇದಕ್ಕಾಗಿ ಒಟ್ಟಾರೆ ಆಯವ್ಯಯ ಗಾತ್ರದ 15.28 ರಷ್ಟನ್ನು ಮೀಸಲಿಡಲಾಗಿದೆ.
ರಾಜ್ಯದ ತೆರಿಗೆ ಪಾಲು ಕಡಿಮೆ:
2019-20ನೇ ಹಣಕಾಸು ವರ್ಷದಲ್ಲಿ ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು 1,993 ಕೋಟಿ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದ ಸಿಎಂ ಬಿಎಸ್ವೈ, ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲು ಕಡಿಮೆಯಾಗಿರುವುದರಿಂದ ರಾಜ್ಯದ ಅನುದಾನವೂ ಕಡಿಮೆಯಾಗಿದೆ. ರೂ.8883 ಕೋಟಿ ಅನುದಾನ ಕಡಿಮೆಯಾಗಿದೆ ಎಂದರು.
ಕಳೆದ ಸಾಲಿನಲ್ಲಿ ಕೃಷಿ ಕ್ಷೇತ್ರದಲ್ಲೂ ಕುಸಿತವಾಗಿದ್ದು, ಈ ಸಾಲಿನಲ್ಲಿ ಚೇತರಿಕೆಯಾಗಿದೆ ಎಂದು ತಿಳಿಸಿದರು. ಇದೇ ವೇಳೆ ಭಾಗ್ಯಲಕ್ಷ್ಮೀ ಯೋಜನೆ, ವಿದ್ಯಾರ್ಥಿಗಳಿಗೆ ಬೈಸಿಕಲ್ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಮುಂದುವರೆಸುವುದಾಗಿ ತಿಳಿಸಿದರು.
ಬಜೆಟ್ ಗಾತ್ರ: ಕಳೆದ ವರ್ಷಕ್ಕಿಂತ ಈ ವರ್ಷ 3 ಸಾವಿರ ಕೋಟಿ ಹೆಚ್ಚುವರಿ ಬಜೆಟ್ ಮಂಡಿಸಲಾಗಿದೆ.
- ಕಳೆದ ಬಾರಿಯ ಬಜೆಟ್ ಗಾತ್ರ 2 ಲಕ್ಷದ 34 ಸಾವಿರ ಕೋಟಿ ರೂ.
-ಈ ಬಾರಿಯ ಬಜೆಟ್ ಗಾತ್ರ 2 ಲಕ್ಷದ 37 ಸಾವಿರ ಕೋಟಿ ರೂ.
ಕೃಷಿ ಕ್ಷೇತ್ರಕ್ಕೆ ಏನೇನು?
- ಹೊಸ ಕೃಷಿ ನೀತಿ ಜಾರಿ.
- ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆಗೆ ರಾಜ್ಯದಿಂದ ನೀಡುತ್ತಿದ್ದ 4,000 ರೂ. ಹಣ ಮುಂದುವರಿಕೆ.
- ಸಾವಯವ ಕೃಷಿ ಪ್ರೋತ್ಸಾಹಕ್ಕಾಗಿ 200 ಕೋಟಿ ರೂ. ಮೀಸಲು
- ರೈತರಿಗೆ ಅಧಿಕ ಬಡ್ಡಿ ದರದಿಂದ ಪರಿಹಾರ ನೀಡಲು ಹೊಸ ಯೋಜನೆ.
- ರೈತರು, ಮೀಸುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್.
- ಕೃಷಿ ಭೂಮಿಗೆ ಅನುಕೂಲವಾಗುವಂತೆ ಮಣ್ಣಿನ ಪರೀಕ್ಷೆಗಾಗಿ ಸಂಚಾರಿ ಹೆಲ್ತ್ ಕ್ಲಿನಿಕ್.
- ಎತ್ತಿನಹೊಳೆ ಯೋಜನೆಗೆ ಆದ್ಯತೆ. ಪ್ರಾಯೋಗಿಕ ಚಾಲನೆಗಾಗಿ 1,500 ಕೋಟಿ ರೂ. ನೆರವು.
- ಮಹಾದಾಯಿ ಯೋಜನೆಗೆ 500 ಕೋಟಿ ರೂ. ಅನುದಾನ
- ಸಿರಿಧಾನ್ಯ ಬೆಳೆಯಲು ಪ್ರತಿ ಹೆಕ್ಟೇರ್ ಗೆ 10,000 ರೂ.ನಂತೆ ಪ್ರೋತ್ಸಾಹ ಧನ
- ನೀರಿನಲ್ಲಿ ಕರಗುವ ಗೊಬ್ಬರ, ಸೂಕ್ಷ್ಮ ಪೋಷಕಾಂಶಗಳ ಮಾಹಿತಿ ಮತ್ತು ಸಂಪನ್ಮೂಲಗಳನ್ನು ರೈತರಿಗೆ ಒದಗಿಸಲಾಗುವುದು.
- ನೀರು ಮತ್ತು ಗೊಬ್ಬರದ ವೈಜ್ಞಾನಿಕ ಬಳಕೆಗೆ ಕ್ರಮ.
- ಆಹಾರ ಸಂಸ್ಕರಣಾ ಘಟಕಗಳಿಗೆ ಆದ್ಯತೆ
ಮೀನುಗಾರರಿಗೆ ಬಜೆಟ್ ಕೊಡುಗೆ:
- ಮೀನುಗಾರರ ಅನುಕೂಲಕ್ಕಾಗಿ ಮತ್ಸ ವಿಕಾಸ ಯೋಜನೆ
- ಮಹಿಳಾ ಮೀನುಗಾರ ಸಬಲೀಕರಣ ಯೋಜನೆ ಮೂಲಕ ದ್ವಿಚಕ್ರ ವಾಹನ ವಿತರಣೆ.
- ಉಡುಪಿ ಜಿಲ್ಲೆಯಲ್ಲಿ ಬಂದರು ಅಭಿವೃದ್ಧಿ.
- ಮೀನುಗಾರಿಗೆ ಸದೃಢಗೊಳಿಸಲು ಕ್ರಮ.
- ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ತಾಲ್ಲೂಕಿನ ವಿದ್ಯಾರ್ಥಿಗಳಿಗೆ 25% ಮೀಸಲಾತಿ.
- ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಔಷಧಿ ತಯಾರಿಕಾ ಘಟಕ ಸ್ಥಾಪನೆ.
- ವಸತಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಮ
- ಶಿಕ್ಷಕರಿಗೆ ಎಲ್ಲಾ ಸೇವಾ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ಒದಗಿಸಲು ‘ಶಿಕ್ಷಕ ಮಿತ್ರ’ ಆಪ್ ಅಭಿವೃದ್ಧಿ.
- “ಸಂಭ್ರಮ ಶನಿವಾರ” ಆಚರಣೆ-ಪ್ರತಿ ತಿಂಗಳಲ್ಲಿ ಎರಡು ಶನಿವಾರ ಬ್ಯಾಗ್ ರಹಿತ ದಿನ
-ಆರು ವರ್ಷದೊಳಗಿನ ಮಕ್ಕಳಲ್ಲಿ ಜನ್ಮಜಾತ ಕಿವುಡುತನ ಪತ್ತೆ ಹಚ್ಚಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ನಡೆಸಿ, ಶ್ರವಣಯಂತ್ರ ಒದಗಿಸಿ ಗುಣಪಡಿಸುವ ಯೋಜನೆಗೆ 28 ಕೋಟಿ ರೂ. ಅನುದಾನ. - ರಾಜ್ಯ ರಾಜಧಾನಿ ಬೆಂಗಳೂರಿನ ಚಿತ್ರಸಂತೆಗೆ 1 ಕೋಟಿ ರೂ. ಅನುದಾನ/
- ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ
- ಪೆಟ್ರೋಲ್ ಮೇಲಿನ ತೆರಿಗೆ ಪ್ರಮಾಣ ಶೇ.32 ರಿಂದ ಶೇ.35ಕ್ಕೆ ಏರಿಕೆ
- ಡೀಸೆಲ್ ಮೇಲಿನ ತೆರಿಗೆ ಪ್ರಮಾಣ ಶೇ.21ರಿಂದ 24ಕ್ಕೆ ಏರಿಕೆ
- ಮದ್ಯ ತೆರಿಗೆ ಸ್ಲಾಬ್ ಪ್ರಸ್ತುತ ದರದ ಮೇಲೆ 6 % ಹೆಚ್ಚಳ
- ಸರ್ಕಾರಿ ಕಛೇರಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಆನಂದ್ ರಾವ್ ಸರ್ಕಲ್ ನಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಾಣ.
- ಬೆಂಗಳೂರು ಪೊಲೀಸರಿಗೆ 75 ಹೊಸ ಹೊಯ್ಸಳ ವಾಹನ
- ಪೊಲೀಸ್ ಸಿಬ್ಬಂದಿಗಳಿಗಾಗಿ ‘ಗೃಹ ಭಾಗ್ಯ’ ಯೋಜನೆ. ಇದಕ್ಕಾಗಿ 200 ಕೋಟಿ ರೂ. ಮೀಸಲು.
- ಕೆಎಸ್ಆರ್ಟಿಸಿಗೆ 2450 ನೂತನ ಬಸ್
- ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ‘ಮನೆ ಮನೆಗೆ ಗಂಗೆ’ ಎಂಬ ನೂತನ ಯೋಜನೆ
- ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ 780 ಕೋಟಿ ರೂ. ಮೀಸಲು.
- 60 ವರ್ಷ ಮೀರಿದ ಬಿಪಿಎಲ್ ಕಾರ್ಡ್ ದಾರರಿಗೆ ಜೀವನಚೈತ್ರ ಯಾತ್ರೆ ಯೋಜನೆ ಮೂಲಕ ಪ್ರಸಿದ್ಧ ತೀರ್ಥಕ್ಷೇತ್ರಗಳ ದರ್ಶನಕ್ಕೆ ವ್ಯವಸ್ಥೆ. ಇದಕ್ಕಾಗಿ 20 ಕೋತಿ ರೂ. ಮೀಸಲು.
- 400 ಸರ್ಕಾರಿ ಉರ್ದು ಮಾಧ್ಯಮ ಶಾಲೆಗಳ ಆರಂಭ
- ಕಟ್ಟಡ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ 10 ‘ಮೊಬೈಲ್ ಕ್ಲಿನಿಕ್’ ಆರಂಭ
- ಹೈದರಾಬಾದ್ ಕರ್ನಾಟಕ ಪ್ರದೆಶಾಭಿವೃದ್ಧಿ ಮಂಡಳಿಗೆ 1500 ಕೋಟಿ ರೂ.
- ಗ್ರಾಮೀಣ ಸುಮಾರ್ಗ ಯೋಜನೆ ಘೋಷಣೆ
- ರಾಜ್ಯದ ನದಿಗಳಲ್ಲಿನ ಮಾಲಿನ್ಯಕ್ಕೆ ಕಡಿವಾಣ ಹಾಕಲು 20 ನಗರಗಳಲ್ಲಿ ಮಲತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆಗೆ ಕ್ರಮ.
- ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ.
- ರಾಜ್ಯದಲ್ಲಿ ಹೂಡಿಕೆದಾರರ ಸಮಾವೇಶ:
ರಾಜ್ಯದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು 2020ರ ನವೆಂಬರ್ ನಲ್ಲಿ ಕರ್ನಾಟಕದಲ್ಲಿ ಜಾಗತಿಕ ಮಟ್ಟದ ‘ಇನ್ವೆಸ್ಟ್ ಕರ್ನಾಟಕ 2020’ ಹೂಡಿಕೆದಾರರ ಸಮಾವೇಶ ಆಯೋಜನೆ. - ಬೆಂಗಳೂರು ಅಭಿವೃದ್ಧಿಗೆ ಒತ್ತು
- ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರದ ಆಶ್ರಯದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ “ಕೃಷಿ ನಾವೀನ್ಯತಾ ಕೇಂದ್ರ” ಸ್ಥಾಪನೆ
- ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದ 500 ಕೋಟಿ ರೂ. ಅನುದಾನ.
- ವನಿತಾ ಸಂಗಾತಿ” ಯೋಜನೆಯಡಿ ಗಾರ್ಮೆಂಟ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಮಾಸಿಕ ಬಸ್ ಪಾಸ್ ವಿತರಣೆ
- ಅಂಧ ತಾಯಂದಿರಿಗೆ ನೀಡುವ ಮಾಸಿಕ 2000 ರೂ. ಶಿಶುಪಾಲನಾ ಭತ್ಯೆ ಯೋಜನೆ ಮಗುವಿನ ಮೊದಲ ಎರಡು ವರ್ಷಗಳಿಂದ ಐದು ವರ್ಷದ ವರೆಗೆ ವಿಸ್ತರಣೆ.
- ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 5 ಕೋಟಿ ರೂ. ಅನುದಾನ.
- ಹೊಸ ಪ್ರವಾಸೋದ್ಯಮ ಯೋಜನೆ ಜಾರಿ.
- SSLC ಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ. ಪ್ರತೀ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಪ್ರಶಸ್ತಿ.
- ಪದವಿ ಪೂರ್ವ ವಿದ್ಯಾರ್ಥಿಗಳಿಗೆ ‘ವಿಜ್ಞಾನ ಪ್ರತಿಭಾ ಶೋಧನೆ’ ಕಾರ್ಯಕ್ರಮ ಪ್ರಾರಂಭ. ಆಯ್ಕೆಯಾದ 500 ವಿದ್ಯಾರ್ಥಿಗಳಿಗೆ ಎರಡು ವರ್ಷ ಶಿಕ್ಷಣ, ಒಂದು ಸಾವಿರ ರೂ. ಮಾಸಿಕ ಶಿಷ್ಯವೇತನ.
- ರಾಜ್ಯದ ಜಿ.ಐ. ಟ್ಯಾಗ್ ಹೊಂದಿರುವ ಕೈಮಗ್ಗ ಬಟ್ಟೆ ಉತ್ಪನ್ನಗಳಿಗೆ ರಾಜ್ಯದ ಪ್ರತಿಷ್ಠಿತ “ಪ್ರಿಯದರ್ಶಿನಿ” ಬ್ರಾಂಡ್ ಮೂಲಕ ಮಾರುಕಟ್ಟೆ ಸೌಲಭ್ಯ
- ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ 100 ಕೋಟಿ ರೂ. ಅನುದಾನ.
- ಚಿತ್ರದುರ್ಗದ ಮುರುಘಾ ಮಠದ ಆವರಣದಲ್ಲಿ ಎತ್ತರದ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ 20 ಕೋಟಿ ರೂ. ಅನುದಾನ.
- ಯುವಜನತೆಯಲ್ಲಿ ನಾಯಕತ್ವ ಹಾಗೋ ಮೌಲ್ಯವರ್ಧನೆಗೆ ಅನಂತ್ ಕುಮಾರ್ ಪ್ರತಿಷ್ಠಾನ ಸ್ಥಾಪನೆ
- ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ 100 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣ.
- ರಾಜ್ಯದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜಾಗತಿಕ ಮಟ್ಟದ ಫಿಲಂ ಸಿಟಿ ನಿರ್ಮಾಣ.
- ಲಂಬಾಣಿ ಭಾಷಾ ಅಕಾಡೆಮಿ ಸ್ಥಾಪನೆಗೆ ಕ್ರಮ.
- ರಾಜ್ಯ ವ್ಯಾಪಿ ಸುರಕ್ಷಾ ಆಪ್ ವಿಸ್ತರಣೆಗೆ ಕ್ರಮ
- ರಾಜ್ಯ ಸರ್ಕಾರಿ ನೌಕಾರರ ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಬದಲಾವಣೆ. ರಾಜ್ಯ ಸರ್ಕಾರಿ ನೌಕರರು ಹಾಗೂ ಅವಲಂಬಿತರಿಗೆ ನಗದು ರಹಿತ ಶಸ್ತ್ರ ಚಿಕಿತ್ಸೆ ಸೌಲಭ್ಯ.