ಅಬುಧಾಬಿ : ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರಮೋದಿ ಅರಬ್ ರಾಷ್ಟ್ರ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.ಭಾರತೀಯ ಮೂಲದ ಮೂರು ಮಿಲಿಯನ್ ಜನರು ಇಲ್ಲಿ ವಾಸಿಸುತ್ತಿದ್ದು, ದುಬೈ- ಅಬುಧಾಬಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊದಲ ಬಾರಿಗೆ ಹಿಂದೂ ದೇವಾಲಯ ನಿರ್ಮಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ಟೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
2015ರ ನಂತರ ಎರಡನೇ ಬಾರಿಗೆ ಪ್ರಧಾನಿ ನರೇಂದ್ರಮೋದಿ ಅರಬ್ ರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ. 55 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ನಿರ್ಮಾಣವಾಗುತ್ತಿದ್ದು, ಶಂಕುಸ್ಥಾಪನೆ ಸಮಾರಂಭ ಐತಿಹಾಸಿಕವಾದದ್ದು ಎಂದು ಯುಎಇನ ಭಾರತೀಯ ರಾಯಬಾರಿ ನವ್ ದೀಪ್ ಸಿಂಗ್ ಸೂರಿ ತಿಳಿಸಿದ್ದಾರೆ.ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನರೇಂದ್ರಮೋದಿ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ದುಬೈನ ಒಪೇರಾ ಹೌಸ್ ನಲ್ಲಿ ಭಾರತೀಯ ಸಮುದಾಯಗಳೊಂದಿಗೆ ನರೇಂದ್ರಮೋದಿ ಮಾತುಕತೆ ನಡೆಸಿದರು. ವಿವಿಧ ವೃತ್ತಿಪರ ಹಾಗೂ ಸಂಘಟನೆಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.