ಬೆಂಗಳೂರು,ಡಿ.28: ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಎರಡು ಹಂತದಲ್ಲಿ ಗಣತಿ ನಡೆಸಲಾಗುತ್ತಿದ್ದು, ಮೊದಲ ಹಂತದಲ್ಲಿ ಮನೆಗಣತಿ, ಎರಡನೇ ಹಂತದಲ್ಲಿ ಜನಗಣತಿ ನಡೆಯಲಿದೆ. ಇದೇ ಮೊದಲ ಬಾರಿಗೆ ಕಾಗದ ಮುಕ್ತ ಜನಗಣತಿ ಮಾಡಲಾಗುವುದು ಎಂದು ರಾಜ್ಯ ಜನಗಣತಿ ನಿರ್ದೇಶಕ ಹಾಗೂ ಜನಗಣತಿ ಮುಖ್ಯ ಅಧಿಕಾರಿ ಎಸ್.ಬಿ.ವಿಜಯ್‌ಕುಮಾರ್ ತಿಳಿಸಿದರು.
ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಆಯುಕ್ತ ಹಾಗೂ ಬಿಬಿಎಂಪಿ ವ್ಯಾಪ್ತಿಯ ಜನಗಣತಿ ಅಧ್ಯಕ್ಷ ಬಿ.ಎಚ್.ಅನಿಲ್‌ಕುಮಾರ್ ಅಧಿಕಾರಿಗಳೊಂದಿಗೆ ‘ಜನಗಣತಿ 2021’ ಪೂರ್ವಭಾವಿ ಸಭೆ ನಡೆಸಿದರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ಎರಡು ಹಂತಗಳಲ್ಲಿ ಜನಗಣತಿ ಸಮೀಕ್ಷೆ ನಡೆಯಲಿದ್ದು, ಮೊದಲನೇ ಹಂತದಲ್ಲಿ ಮನೆ ಗಣತಿ ನಡೆಯಲಿದೆ. ಇದು 2020ರ ಏಪ್ರಿಲ್ 15ರಿಂದ ಮೇ 29ರವರೆಗೆ ನಡೆಯಲಿದೆ. ಜನಗಣತಿ 2021ರ ಫೆಬ್ರವರಿ 9ರಿಂದ ಫೆ.29 ವರೆಗೆ ನಡೆಯಲಿದ್ದು, 2021ರ ಮಾಚ್‌ರ್ 1ರಿಂದ ಮಾಚ್‌ರ್ 5ರವರೆಗೆ ಸಮೀಕ್ಷೆಯ ಪುನರ್ ಪರಿಶೀಲನೆ ನಡೆಯಲಿದೆ. ಈ ಬಾರಿ 2023ರೊಳಗೆ ವರದಿ ಸಿದ್ಧಪಡಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಹಾಗಾಗಿ ಕೆಲವು ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಮನೆ ಗಣತಿಯಲ್ಲಿ ಕೇಳುವ ಮಾಹಿತಿ, ಪ್ರಶ್ನೆಗಳಿವು
ಮನೆಯ ಸ್ಥಿತಿ, ಮಹಡಿಗಳು, ಮಾಲೀಕತ್ವ, ಕೊಠಡಿಗಳ ಸಂಖ್ಯೆ, ವಾಸಿಸುತ್ತಿರುವ ಕುಟುಂಬಗಳು, ಕುಡಿಯುವ ನೀರು, ವಿದ್ಯುತ್, ಶೌಚಾಲಯ, ಒಳಚರಂಡಿ ಸಂಪರ್ಕ, ಸ್ನಾನದ ಮನೆ, ಅಡುಗೆ ಮನೆ, ಅಡುಗೆಗೆ ಬಳಸುವ ಇಂಧನ, ಎಲೆಕ್ಟ್ರಾನಿಕ್, ಗೃಹೋಪಯೋಗಿ ವಸ್ತುಗಳು, ಆಹಾರಕ್ಕೆ ಬಳಸುವ ಪದಾರ್ಥಗಳು. ಕುಟುಂಬದ ಯಜಮಾನ, ಧರ್ಮ, ಜಾತಿ, ಮಾತೃ ಭಾಷೆ, ಮಾತನಾಡಲು ಬರುವ ಭಾಷೆಗಳು, ವಿದ್ಯಾರ್ಹತೆ, ಉದ್ಯೋಗ, ಜನ್ಮ ಸ್ಥಳ, ಈ ಮೊದಲು ವಾಸವಿದ್ದ ಸ್ಥಳ, ಕುಟುಂಬ ಸದಸ್ಯರ ಸಂಖ್ಯೆ, ಜನ್ಮ ದಿನಾಂಕ, ವಯಸ್ಸು, ವೈವಾಹಿಕ ವಿವರ, ವಿವಾಹ ದಿನಾಂಕ, ಮಕ್ಕಳು, ಆರ್ಥಿಕ ಸ್ಥಿತಿ, ಮನೆಯಿಂದ ಕೆಲಸದ ಸ್ಥಳಕ್ಕಿರುವ ಅಂತರ, ವಲಸೆ ಬಂದ ದಿನ, ವಲಸೆಗೆ ಕಾರಣ, ಎಷ್ಟು ವರ್ಷಗಳಿಂದ ವಾಸ.
ಜನಗಣತಿಯ ನಾಲ್ಕು ವಿಭಾಗಗಳು
1. ಲಿಂಗ: ಜನ್ಮ ದಿನಾಂಕ, ವಯಸ್ಸು, ಮದುವೆ ದಿನಾಂಕ, ಮಕ್ಕಳಿದ್ದರೆ ಅವರ ವಿವರ
2. ಸಾಮಾಜಿಕ ಮತ್ತು ಸಾಂಸ್ಕೃತಿಕ: ಕುಟುಂಬದ ಮುಖ್ಯಸ್ಥರು, ಸಂಬಂಧ ಏನು?, ರಾಷ್ಟ್ರೀಯತೆ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ, ವಿಶೇಷ ಚೇತನರೇ?, ಮಾತೃಭಾಷೆ, ಇತರೆ ಭಾಷೆ ಬಳಕೆ ವಿವರ, ವಿದ್ಯಾಭ್ಯಾಸದ ವಿವರ, ಯಾವ ಕ್ಷೇತ್ರ.
3.ಆರ್ಥಿಕತೆ: ಉದ್ಯೋಗದ ವಲಯ, ಸಂಘಟಿತ ಅಥವಾ ಅಸಂಘಟಿತ, ಉದ್ಯೋಗದ ಕ್ಷೇತ್ರ, ನಿರುದ್ಯೋಗಿಯೇ, ಉದ್ಯೋಗ ಹಾಗೂ ವಾಸ ಸ್ಥಳದ ದೂರ, ಸಂಚಾರಕ್ಕೆ ಸ್ವಂತ ವಾಹನವಿದೆಯೇ.
4 ವಲಸೆ: ವಲಸೆ ಬಂದವರೆ? ಈ ಹಿಂದೆ ಸ್ಥಳದ ವಿವರ, ವಲಸೆಗೆ ಕಾರಣ, ವಲಸೆ ಬಂದ ಅವಧಿ, ಮೂಲ ಸ್ಥಳದ ವಿವರ.
ಎನ್‌ಪಿಆರ್‌ಗೆ ನೀಡಬೇಕಾದ ಮಾಹಿತಿ
ಹೆಸರು, ಲಿಂಗ, ಕುಟುಂಬದ ಮುಖ್ಯಸ್ಥರೊಂದಿಗೆ ಸಂಬಂಧ ಏನು, ವಾಸವಿರುವ ಸ್ಥಳದ ವಿವರ, ತಾತ್ಕಾಲಿಕ ಮತ್ತು ಕಾಯಂ ವಿಳಾಸ, ಶೈಕ್ಷಣಿಕ ಪ್ರಗತಿ, ತಂದೆ, ತಾಯಿ ಹೆಸರು ಮತ್ತು ಅವರ ಜನ್ಮ ದಿನಾಂಕ, ಅವರು ಜನಿಸಿದ ಸ್ಥಳ, ಪತಿ ಅಥವಾ ಪತ್ನಿ ಹೆಸರು, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ, ಪ್ಯಾನ್‌ಕಾರ್ಡ್, ವಾಹನ ಚಾಲನಾ ಪರವಾನಗಿ ಮಾಹಿತಿಗಳನ್ನು ಕೇಳಲಾಗುತ್ತದೆ. ಆದರೆ, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವುದು ಕಡ್ಡಾಯವಲ್ಲ ಎಂದು ಎಸ್.ಬಿ. ವಿಜಯ್‌ಕುಮಾರ್ ಸ್ಪಷ್ಟಪಡಿಸಿದರು.
ಎನ್‌ಸಿಆರ್ ಸಂಬಂಧವಿಲ್ಲ:
ಎನ್‌ಪಿಆರ್ ಹಾಗೂ ಎನ್‌ಸಿಆರ್‌ಗೂ ಯಾವುದೇ ಸಂಬಂಧವಿಲ್ಲ ಎಂಬ ಬಗ್ಗೆ ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಸಾರ್ವಜನಿಕರು ಗೊಂದಲಕ್ಕೆ ಒಳಗಾಗುವುದು ಬೇಡ. ಇನ್ನು ಜನಗಣತಿ ವೇಳೆ ಕಾರು, ಬೈಕ್, ಟಿವಿ ಸೇರಿದಂತೆ ಇನ್ನಿತರ ಮಾಹಿತಿ ನೀಡುವ ವೇಳೆ ಮುಂದೆ ಗೊಂದಲ ಆಗಬಹುದು ಎಂಬ ಕಾರಣಕ್ಕೆ ತಪ್ಪು ಮಾಹಿತಿ ನೀಡಬಾರದು, ಜನಗಣತಿಯಲ್ಲಿ ಸಂಗ್ರಹಿಸುವ ಅಂಕಿ ಅಂಶವನ್ನು ಯಾವುದೇ ಕಾರಣಕ್ಕೂ ಮತ್ತೊಂದು ಇಲಾಖೆಯೊಂದಿಗೆ ಹಂಚಿಕೊಳ್ಳುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಆಯವ್ಯಯ ಹಾಗೂ ಯೋಜನೆ ರೂಪಿಸುವುದಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕಾಲಮಿತಿಯೊಳಗೆ ಜನಗಣತಿ ಮುಗಿಸುವ ಉದ್ದೇಶದಿಂದ ಸಾರ್ವಜನಿಕರು ಸಹ ನೇರವಾಗಿ ತಮ್ಮ ಮಾಹಿತಿಯನ್ನು ಆ್ಯಪ್ ಮೂಲಕ ಸಲ್ಲಿಕೆ ಮಾಡುವುದಕ್ಕೂ ಅವಕಾಶ ನೀಡಲಾಗಿದೆ. ಅದಕ್ಕಾಗಿ ಪ್ರತ್ಯೇಕ ಆ್ಯಪ್ ರೂಪಿಸಲಾಗಿದೆ ಎಂದು ತಿಳಿಸಿದರು.
ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಮಾತನಾಡಿ, ಕಾಗದ, ಆ್ಯಪ್ ಹಾಗೂ ವೈಯಕ್ತಿಕವಾಗಿ ಸಾರ್ವಜನಿಕರು ತಮ್ಮ ಮಾಹಿತಿ ದಾಖಲಿಸಬಹುದಾಗಿದೆ. ಹೀಗಾಗಿ, ಜನಗಣತಿ ಕಾರ್ಯ ಸುಲಭವಾಗಲಿದೆ. ಈ 2011ರಲ್ಲಿ ಮಾಡಿದ ಜನಗಣತಿಯ ಸಾರಾಂಶ ಇನ್ನೂ ಅಂತಿಮವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಒಟ್ಟು ಮೂರು ಆ್ಯಪ್ ಪರಿಚಯಿಸಲಾಗಿದ್ದು, ಪ್ಲೆ ಸ್ಟೋರ್‌ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. 2023ರ ವೇಳೆಗೆ ಜನಗಣತಿ ಹಾಗೂ ಎನ್‌ಪಿಆರ್ ವರದಿ ಸಿದ್ಧಪಡಿಸುವ ಗುರಿ ಹೊಂದಲಾಗಿದೆ ಎಂದರು.
ಜನಗಣತಿಗೆ ಸರ್ಕಾರಿ ಹಾಗೂ ಖಾಸಗಿ ಶಾಲೆಯ ಶಿಕ್ಷಕರನ್ನು ಬಳಸಿಕೊಳ್ಳಲು ಬಿಬಿಎಂಪಿ ಮುಂದಾಗಿದ್ದು, ಜನಗಣತಿಗೆ ಒಟ್ಟು 17,535 ಬ್ಲಾಕ್‌ಗಳಿಗೆ 19,289 ಸಿಬ್ಬಂದಿ, 3,215 ಮೇಲ್ವಿಚಾರಕರು ಬೇಕಾಗಲಿದ್ದಾರೆ ಎಂದು ತಿಳಿಸಿದರು.






