ಬೆಂಗಳೂರು : ‘ ಮೋಟಾರು ವಾಹನ ಮಸೂದೆ, ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಹಾಗೂ ಬುಧವಾರ ಸಾರಿಗೆ ಬಸ್ ಸೇವೆ ಇರುವುದಿಲ್ಲ ’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸೋಮವಾರ ಸ್ಪಷ್ಟಪಡಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸರ್ಕಾರದ ಆಸ್ತಿ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಐದಾರು ಸಾರಿಗೆ ಬಸ್‌ಗಳಿಗೆ ಹಾನಿಯುಂಟಾಗಿದೆ. ಹೀಗಾಗಿ ಬಂದ್ ವೇಳೆ ಸಾರಿಗೆ ಬಸ್ ಓಡಿಸದಿರಲು ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಭಟನಾಕಾರರು ಅವಕಾಶ ನೀಡಿದರೆ ಮಾತ್ರ ಬಸ್ ಬಿಡಲಾಗುವುದು. ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.
ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ:
ಜನವರಿ 8 ಮತ್ತು 9ರಂದು ಮುಷ್ಕರ ನಡೆಸಲು ಹಲವು ಕಾರ್ಮಿಕ ಸಂಘಟನೆಗಳು ನಿರ್ಧರಿಸಿದ ಹಿನ್ನೆಲೆಯಲ್ಲಿ ಎರಡು ದಿನ ರಾಜ್ಯದ ಎಲ್ಲ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಖಾಸಗಿ ಶಾಲೆಗಳ ಆಡಳಿತ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಇನ್ನು ಸರಕಾರಿ ಶಾಲೆಗಳಿಗೆ ಭಾರತ ಬಂದ್ ಹಿನ್ನೆಲೆಯಲ್ಲಿ ರಜೆ ಘೋಷಣೆ ಮಾಡಿಲ್ಲ. ಜಿಲ್ಲೆಯಲ್ಲಿ ನಡೆಯುವ ಮುಷ್ಕರದ ಪರಿಸ್ಥಿತಿ ಅನುಗುಣವಾಗಿ ಸರಕಾರಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಲಿದ್ದಾರೆ.
ಆಟೋ, ಟ್ಯಾಕ್ಸಿ ಸೇವೆಯೂ ಇಲ್ಲ:
ಆಟೋರಿಕ್ಷಾ, ಆ್ಯಪ್ ಆಧರಿತ ಟ್ಯಾಕ್ಸಿಗಳು, ಬ್ಯಾಂಕ್ ಸೇವೆ, ಲಾರಿ ಓಡಾಟ ಸ್ಥಗಿತಗೊಳ್ಳಲಿವೆ ಎಂದು ಕಾರ್ಮಿಕ ಮುಖಂಡರು ತಿಳಿಸಿದ್ದಾರೆ. ಮೆಟ್ರೊ, ರೈಲು, ಆಸ್ಪತ್ರೆಗಳು, ಮೆಡಿಕಲ್ ಶಾಪ್, ಆ್ಯಂಬುಲೆನ್ಸ್ ಸೇವೆ, ಹಾಲು, ತರಕಾರಿ, ಪೇಪರ್ ಎಂದಿನಂತೆ ಇರಲಿದೆ.