ಹೌದು, ಜನರ ದೈಹಿಕ ಸಂಕಷ್ಟಗಳಿಗೆ ಸಾಂತ್ವನವಾಗಬೇಕಾಗಿದ್ದ ಖಾಸಗೀ ಆಸ್ಪತ್ರೆಗಳು ಇಂದು ಹಣಗಳಿಸುವ ವ್ಯಾಪಾರ ಕೇಂದ್ರಗಳಾಗಿ ಬಿಟ್ಟಿದೆ. ಆಧುನಿಕ ಜಗತ್ತು ತಂತ್ರಜ್ಙಾನಿಕವಾಗಿ ಮುಂದುವರಿಯುತ್ತಾ ಹೋದ ಹಾಗೆ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ . ಜನಸಂಖ್ಯೆ ಹೆಚ್ಚಳ, ಆಧುನಿಕ ಆಹಾರ ಪದಾರ್ಥಗಳು, (ಫಾಸ್ಟ್ ಫುಡ್), ಬಿಡುವಿಲ್ಲದ ಒತ್ತಡದ ಕೆಲಸ, ಅರಣ್ಯಗಳ ನಾಶ, ಕೈಗಾರಿಕೆಗಳಿಂದ ಹೊರಬಿಡುವ ವಿಷಪೂರಿತ ವಸ್ತುಗಳು ಹೀಗೆ ಹಲವಾರು ಕಾರಣಗಳಿಂದಾಗಿ ಇಂದು ಮನುಷ್ಯ ಹೊಸ ಹೊಸ ರೋಗಗಳಿಗೆ ತುತ್ತಾಗುತ್ತಾನೆ.
ರೋಗ ಬಂದಾಗ ಸಾಮಾನ್ಯವಾಗಿ ಮನುಷ್ಯನನ್ನು ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆಗಳು ದೊರಕದೇ ಇರುವುದರಿಂದ , ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಖಾಸಗೀ ಆಸ್ಪತ್ರೆಗಳಿಗೆ ಜನರು ಮುಖಮಾಡುತ್ತಾರೆ. ಇದನ್ನೇ ಒಂದು ಅಸ್ತ್ರವಾಗಿಟ್ಟುಕೊಂಡು ಖಾಸಗೀ ಆಸ್ಪತ್ರೆಗಳು ಜನರ ರೋಗಗಳಿಗೆ ಕಡಿಮೆ ದರದಲ್ಲಿ ದೊರೆಯುವ ಚಿಕಿತ್ಸೆಗಳಿಗೆ ದುಬಾರಿ ದರವನ್ನು ನಿಗದಿಪಡಿಸಿ, ದೈಹಿಕವಾಗಿ ನೊಂದ ವ್ಯಕಿಗೆ ಮಾನಸಿಕವಾಗಿ ನೋವು ನೀಡುತ್ತದೆ.
ಖಾಸಗೀ ಆಸ್ಪತ್ರೆಗಳು ಚಿಕಿತ್ಸೆಯ ನೆಪದಲ್ಲಿ ನಡೆಸುವ ಈ ಹಣದ ವ್ಯಾಪಾರಕ್ಕೆ ಬುದ್ದಿವಂತರೆನಿಸಿಕೊಂಡ ಕೆಲವು ಡಾಕ್ಟರುಗಳ ಪಾಲೂ ಕೂಡ ಇದೆ. ರೊಗಿಯ ಒಂದು ಸಲದ ಸಂದರ್ಶನಕ್ಕೆ ಇವರೂ ಕೂಡ ದುಬಾರಿ ಬೆಲೆಯನ್ನು ನಿಗದಿಪಡಿಸುತ್ತಾರೆ. ಡಾಕ್ಟರ್’ಗಳ ಈ ರೀತಿಯ ಒಂದು ಕಾರ್ಯಕ್ಕೆ ಪರೋಕ್ಷವಾಗಿ ಕಾರಣವಾಗುವುದು ಇಂದಿನ ಮೆಡಿಕಲ್ ಕಾಲೇಜುಗಳು. ಒಬ್ಬ ಮೆಡಿಕಲ್ ಕಾಲೇಜು ವಿದ್ಯಾರ್ಥಿ ತನ್ನ ಡಾಕ್ಟರ್ ಪದವಿಯನ್ನು ಗಳಿಸಲು ಇಂದು ಲಕ್ಷಗಟ್ಟಲೆ ಶುಲ್ಕವನ್ನು ಭರಿಸುತ್ತಾನೆ. ತಾನು ಭರಿಸಿದ ಮೊತ್ತವನ್ನು ಸರಿಹೊಂದಿಸಲು ತಾನು ಗಳಿಸಿದ ಪದವಿಯನ್ನು ವ್ಯಾಪಾರದ ರೀತಿಯಲ್ಲಿ ಕೊಂಡುಹೋಗುತ್ತಾನೆ. ಇದೆಲ್ಲದರ ಪರಿಣಾಮ ಬೀರುವಂತದ್ದು ಮಾತ್ರ ಸಾಮನ್ಯವಾದ ಜನರ ಮೇಲೆ.
ಖಾಸಗೀ ಆಸ್ಪತ್ರೆಗಳು ರೋಗದ ಚಿಕಿತ್ಸೆಗಾಗಿ ಉತ್ತಮ ಸೌಲಭ್ಯವನ್ನು ಹೊಂದಿದೆ ಎಂಬೂದನ್ನು ನಾವು ಅಲ್ಲಗಳೆಯುವಂತಿಲ್ಲ. ಆದರೆ ಅದಕ್ಕಾಗಿ ಒಂದು ಸಮಂಜಸವಾದ ಶುಲ್ಕವನ್ನು ನಿಗದಿಪಡಿಸಲಿ. ಹಾಗಿದ್ದಲ್ಲಿ ಮಾತ್ರ ಜನರ ನೋವುಗಳಿಗೆ ಸಾಂತ್ವನ ದೊರೆತಂದಾಗುತ್ತದೆ. ಇಲ್ಲವಾದಲ್ಲಿ ದೈಹಿಕವಾಗಿ ಸಾಂತ್ವನ ದೊರೆತರೂ, ಜನರು ಮಾನಸಿವಾಗಿ ಕುಗ್ಗಿಹೋಗುತ್ತಾರೆ. ಈ ನಿಟ್ಟಿನಲ್ಲಿ ಸರಕಾರ ಇಂತಹ ದುಬಾರಿ ಶುಲ್ಕಗಳಿಗೆ ಕಡಿವಾಣ ಹಾಕುವ ವ್ವವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಖಾಸಗೀ ಆಸ್ಪತ್ರೆಗಳು ಸಂಪೂರ್ಣವಾಗಿ ವ್ಯಾಪಾರ ಕೇಂದ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ……..
✍ ಹಸೈನಾರ್ ಕಾಟಿಪಳ್ಳ