ರಿಯಾದ್ : ಕಳೆದ ಎಂಟು ವರ್ಷಗಳಿಂದ ಸೌದಿ ಅರೇಬಿಯಾದ ದಮ್ಮಾಂ ಹಾಗೂ ರಿಯಾದ್ ಪ್ರಾಂತ್ಯಗಳಲ್ಲಿ ರೀಟೇಲ್ ಸರಣಿಯ ಸಂಸ್ಥೆಯೊಂದರ ಶಾಪ್ ಗಳಲ್ಲಿ ದುಡಿಯುತ್ತಿದ್ದ ಮಂಗಳೂರಿನ ಇಮ್ರಾನ್ ಎಂಬ ಯುವಕನ ವಿರುದ್ಧ ಸಂಸ್ಥೆಯ ಮಾಲಕರು ಹಣ ವಂಚನೆಯ ಆರೋಪ ಹೊರಿಸಿ ಮೊಕದ್ದಮೆ ದಾಖಲಿಸಿದ್ದು ಆ ಮೂಲಕ ಆತನನ್ನು ಪೋಲೀಸರು ಬಂಧಿಸಿ ಜೈಲಿಗೆ ಹಾಕಿದ್ದರು.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜಿ ಸಂಧಾನಕ್ಕೆ ಮುಂದಾದ ಕೆಸಿಎಫ್ ಸೌದಿ ನಾಯಕರು ಯುವಕ ನೌಕರಿ ಮಾಡುತ್ತಿದ್ದ ಸಂಸ್ಥೆಯ ಮಾಲೀಕರೊಂದಿಗೆ ನೇರ ಮಾತುಕತೆ ನಡೆಸಿ ಯುವಕನ ಬಿಡುಗಡೆಗಾಗಿ ಶ್ರಮಸಿದ್ದರು. ಆರಂಭದಲ್ಲಿ ತನಗೆ ಯುವಕನಿಂದಾಗಿ ಭಾರೀ ಮೊತ್ತದ ಆರ್ಥಿಕ ನಷ್ಟವುಂಟಾಗಿದ್ದು 28 ಸಾವಿರ ರಿಯಾಲ್ (ಅಂದಾಜು ಐದು ಲಕ್ಷ ರೂಪಾಯಿ) ಪಾವತಿ ಮಾಡಿದರೆ ಮಾತ್ರ ಅತನನ್ನು ಬಿಡುಗಡೆ ಮಾಡುವುದಾಗಿ ಕಫೀಲ್ ಪಟ್ಟು ಹಿಡಿದಿದ್ದ. ಅದಾಗ್ಯೂ ಅನೇಕ ಸುತ್ತಿನ ಮಾತುಕತೆಯ ಬಳಿಕ ತನ್ನ ಪಟ್ಟು ಸಡಿಲಿಸಿದ ಮಾಲೀಕ ಸಂಘಟನೆಯ ನಾಯಕರ ಬೇಡಿಕೆಗೆ ಸ್ಪಂದಿಸಿ ತಾನು ಬೇಡಿಕೆ ಇಟ್ಟಿದ್ದ ಮೊತ್ತವನ್ನು ಹನ್ನೆರಡು ಸಾವಿರ ರಿಯಾಲ್ ಗೆ ಇಳಿಸಿದ್ದ. ಈ ಮೊತ್ತವನ್ನು ಯುವಕನ ಸಂಬಂಧಿಕರು ಭರಿಸಿದ್ದು ಕೆಸಿಎಫ್ ನಾಯಕರ ಜತೆ ಸೇರಿ ಸಂಸ್ಥೆಯ ಮಾಲೀಕನಿಗೆ ನೀಡಲಾಗಿತ್ತು.
ನಿಗದಿತ ಮೊತ್ತವನ್ನು ಪಡೆದು ಕೊಂಡ ಕಫೀಲ್ ತಕ್ಷಣವೇ ತಾನು ಹೂಡಿದ್ದ ಮೊಕದ್ದಮೆಯನ್ನು ಹಿಂಪಡೆದುಕೊಂಡು ಆತನನ್ನು ದೋಷಮುಕ್ತಗೊಳಿಸುವಂತೆ ಅಧಿಕೃತರೊಂದಿಗೆ ಮನವಿ ಮಾಡಿಕೊಂಡಿದ್ದ. ಆದರೂ ಬೇರೊಂದು ಪ್ರಕರಣದಲ್ಲಿ ಪೋಲೀಸರು ಆತನ ವಿರುದ್ಧ ಕೇಸು ದಾಖಲಿಸಿದ್ದರಿಂದ ಆತನ ಜೈಲು ಬಿಡುಗಡೆಗೆ ಅಲ್ಪ ವಿಳಂಬ ತಲೆದೋರುವಂತಾಯಿತು.
ಈ ಎರಡನೆಯ ಪ್ರಕರಣವನ್ನು ಇತ್ಯರ್ಥಗೊಳಿಸಲು ಕೆಸಿಎಫ್ ಮುಖಂಡರು ಹಾಗೂ ಆತನ ಕಫೀಲ್ ಹರಸಾಹಸ ಪಟ್ಟಿದ್ದು ಕೊನೆಗೂ ಆತ ಜೈಲಿನಿಂದ ಬಿಡುಗಡೆಯಾಗಿರುವುದು ಕುಟುಂಬ ವರ್ಗದಲ್ಲಿ ಸಂತಸ ಮೂಡಿಸಿದೆ
ಯುವಕನ ಬಿಡುಗಡೆಗಾಗಿ ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ನಾಯಕರಾದ ಸಲೀಂ ಕನ್ಯಾಡಿ, ಯಾಕೂಬ್ ಸಖಾಫಿ ಗಸೀಂ, ಸಾಲಿ ಬೆಳ್ಳಾರೆ, ನಝೀರ್ ಕಾಷಿಪಟ್ಣ, ಇಸ್ಮಾಯಿಲ್ ಜೋಗಿಬೆಟ್ಟು, ಮಜೀದ್ ವಿಟ್ಲ ಹಾಗೂ ಒಲಯ್ಯ ಸೆಕ್ಟರ್ ನಾಯಕ ಹಕೀಂ ಪಾತೂರು ಶ್ರಮಿಸಿದ್ದು ಯುವಕನ ಚಿಕ್ಕಪ್ಪ , ಬುರೈದಾದಲ್ಲಿ ಕೆಲಸದಲ್ಲಿರುವ ಸಲೀಂ ಬೈತಾರ್ ಎಲ್ಲ ರೀತಿಯ ಸಹಕಾರವನ್ನು ನೀಡಿದ್ದರು.
Amiin