janadhvani

Kannada Online News Paper

ಸೆ.10 ಕ್ಕೆ ಭಾರತ್ ಬಂದ್: ಹಲವಾರು ಸಂಘಟನೆಗಳಿಂದ ಬೆಂಬಲ-ಕರ್ನಾಟಕ ಸ್ತಬ್ಧ ಸಾಧ್ಯತೆ

ಬೆಂಗಳೂರು:ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಸೋಮವಾರ ಕರೆ ನೀಡಿರುವ ಭಾರತ್ ಬಂದ್ ಗೆ ಕೆಎಸ್ ಆರ್ ಟಿಸಿ, ಬಿಎಂಟಿಸಿ, ಸಿಐಟಿಯು, ಕನ್ನಡಪರ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು ಸಾರಿಗೆ ಸಂಚಾರ ಸ್ತಬ್ಧವಾಗುವ ಸಾಧ್ಯತೆ ಇದೆ.

ಏತನ್ಮಧ್ಯೆ ಭಾರತ್ ಬಂದ್ ಗೆ ಬೆಂಬಲ ನೀಡುವಂತೆ ಕಾಂಗ್ರೆಸ್ ಮುಖಂಡರು ಮನವಿ ಮಾಡಿಕೊಂಡಿದ್ದಾರೆ. ಕನ್ನಡ ಪರ ಸಂಘಟನೆಯ ವಾಟಾಳ್ ನಾಗರಾಜ್, ನಾರಾಯಣ ಗೌಡ ಸೇರಿದಂತೆ ಹಲವು ಮುಖಂಡರು ಬೆಂಬಲ ಸೂಚಿಸಿದ್ದಾರೆ. ಶಾಲಾ, ಕಾಲೇಜುಗಳ ರಜೆಯನ್ನು ಆಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ಓಲಾ, ಉಬರ್ ಕಾರು ಚಾಲಕ, ಮಾಲಕರ ಸಂಘ ಬೆಂಬಲ ವ್ಯಕ್ತಪಡಿಸಿದೆ. ಆಟೋ, ಕಾರು ಚಾಲಕ ಮಾಲಕರ ಅಸೋಸಿಯೇಶನ್ ಕೂಡಾ ಬೆಂಬಲ ಸೂಚಿಸಿದೆ. ಚಿಕ್ಕಮಗಳೂರು, ಹುಬ್ಬಳ್ಳಿ ಹಾಗೂ ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜೆಡಿಎಸ್ ಸೇರಿದಂತೆ ವಿವಿಧ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿವೆ.

ಭಾರತ ಬಂದ್‍ಗೆ ಸಂಪೂರ್ಣ ಬೆಂಬಲ: ವಾಟಾಳ್ ನಾಗರಾಜ್

ಪೆಟ್ರೋಲ್, ಡೀಸೆಲ್, ಅಡುಗೆ ಸಿಲಿಂಡರ್ ದರ ಏರಿಕೆ ಖಂಡಿಸಿ ಅಖಿಲ ಭಾರತ ಬಂದ್‍ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.10ರಂದು ಬೆಳಗ್ಗೆ 11.30ಕ್ಕೆ ಬಂದ್ ಪ್ರಯುಕ್ತ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ವಿನೂತನ ಪ್ರತಿಭಟನೆ ನಡೆಸಲಾಗುವುದು ಎಂದರು.

ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಬಹಳ ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ 10 ಬಾರಿ ಬೆಲೆ ಏರಿಸಿದೆ. ಇದರಿಂದ ಮಧ್ಯಮ ವರ್ಗದ ಜನರು ತೀವ್ರ ತೊಂದರೆಗೆ ಒಳಗಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಬಸ್ ಪ್ರಯಾಣ ದರ ಏರಿಕೆ ಕೂಡಾ ಸರಿಯಾದ ಕ್ರಮವಲ್ಲ ಎಂದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಸ್ ಪ್ರಯಾಣ ದರ ಏರಿಸಲು ತೀರ್ಮಾನಿಸಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ಬಸ್ ಪ್ರಯಾಣ ದರ ಏರಿಸಬಾರದು ಎಂದು ಒತ್ತಾಯಿಸಿದರು.

ಈಗಾಗಲೇ ಸೈಕಲ್ ಮೆರವಣಿಗೆ ಮಾಡುವ ಮೂಲಕ ಡೀಸೆಲ್, ಪೆಟ್ರೋಲ್, ಗ್ಯಾಸ್ ದರ ಏರಿಕೆಯನ್ನು ಖಂಡಿಸಿದ್ದೇವೆ. ಇವುಗಳ ಬೆಲೆ ಏರಿಕೆ ಅವೈಜ್ಞಾನಿಕ. ಇದನ್ನು ಖಂಡಿಸಿ ಪ್ರತಿಭಟನೆ ಮಾಡುತ್ತೇವೆ ಹಾಗೂ ಭಾರತ್ ಬಂದ್‍ಗೆ ಬೆಂಬಲ ನೀಡುತ್ತೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.

error: Content is protected !! Not allowed copy content from janadhvani.com