janadhvani

Kannada Online News Paper

ಯುಎಇ ಯ ಸಹಾಯ ನಿರಾಕರಣೆ: ದುಬೈ ಶೈಖರ ಟ್ವೀಟ್ ವೈರಲ್

ಕೋಝಿಕ್ಕೋಡ್: ಕೇರಳಕ್ಕೆ ಯುಎಇ ನೀಡಿದ್ದ 700 ಕೋ. ರೂ.ವನ್ನು ಭಾರತ ನಿರಾಕರಿಸಿದ್ದಾಗಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ಯುಎಇ ಉಪಾಧ್ಯಕ್ಷ, ಪ್ರಧಾನಮಂತ್ರಿ, ದುಬೈನ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮರ ಟ್ವೀಟ್ ವೈರಲ್ ಆಗುತ್ತಿದೆ.

ಎರಡು ಬಗೆಯ ಆಡಳಿತಗಾರರ ಬಗ್ಗೆ ಅವರು ವಿವರಿಸಿದ್ದು, ಜನರ ಉನ್ನತಿಗಾಗಿ ಹಾದಿ ಹುಡುಕುವವರು ಮತ್ತು ಜನರ ಜೀವನ ದುರಂತಮಯಗೊಳಿಸಲು ಬೇಕಾಬಿಟ್ಟಿ ನಿಯಮಗಳನ್ನು ಹೇರುವವರನ್ನು ನಾವಿಂದು ವಿಶ್ವದಲ್ಲಿ ಕಾಣಬಹುದು ಎಂದು ಅವರು ಟ್ವೀಟಿಸಿದ್ದಾರೆ.

‘ನನ್ನ ಜೀವನ ಹಾದಿ’ ಎನ್ನುವ ಶೀರ್ಷಿಕೆಯೊಂದಿಗೆ ಟ್ವೀಟ್ ಪ್ರಾರಂಭಿಸಿದ ಅವರು, ಅಧಿಕಾರಿಗಳ ಪೈಕಿ ಒಂದು ವಿಭಾಗ ಒಳಿತಿನ ಕಡೆಯ ಬೀಗ ತೆರೆಯುವವರು ಇರುತ್ತಾರೆ. ಅವರು ಜನಸೇವೆಯಲ್ಲೂ, ಜನರಿಗೆ ಉತ್ತಮ ಸೌಕರ್ಯಗಳನ್ನು ನೀಡುವುದರಲ್ಲಿ ಆನಂದ ಕಂಡುಕೊಳ್ಳುತ್ತಾರೆ. ನೀಡುವ ಮೂಲಕ ತನ್ನ ಮೌಲ್ಯವನ್ನು ಎತ್ತಿಹಿಡಿಯುತ್ತಾರೆ. ಇತರರ ಜೀವನ ಸುಗಮಗೊಳಿಸಲು ಬಾಗಿಲುಗಳನ್ನು ತೆರೆಯುತ್ತಾ ಅವರು ಪರಿಹಾರವನ್ನು ಕಂಡುಕೊಳ್ಳುವವರಾಗಿರುತ್ತಾರೆ.

ಮತ್ತೊಂದು ವಿಭಾಗ ಒಳಿತಿನ ಬದ್ದ ವೈರಿಗಳಾಗಿರುತ್ತಾರೆ. ಸುಲಭವಾದ ಹಾದಿಯನ್ನು ಸಂಕೀರ್ಣಗೊಳಿಸುವವರು. ಹೆಚ್ಚಾಗಿರುವುದನ್ನು ಕಡಿತಗೊಳಿಸುವ ಅವರು, ಅವಶ್ಯಗಳಿಗಾಗಿ ತನ್ನತ್ತ ಬರುವವರ ಮುಂದೆ ಬಾಗಿಲು ಮುಚ್ಚುವವರು. ಆಶ್ರಿತರನ್ನು ಕಚೇರಿಗಳ ಮುಂದೆ ಕಾದು ನಿಲ್ಲಿಸಿ ಆನಂದ ಕಂಡುಕೊಳ್ಳುವವರು. ಇವರ ಪೈಕಿ ಮೊದಲು ವಿವರಿಸಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿದ್ದರೆ ಯಾವುದೇ ದೇಶ ಅಥವಾ ಆಡಳಿತಕ್ಕೆ ವಿಜಯ ಕಾಣುವುದು ಅಸಾಧ್ಯ ಎಂದು ಮಖ್ತೂಂ ಟ್ವೀಟಿಸಿದ್ದಾರೆ.

ಪ್ರಳಯದ ಹಿನ್ನೆಲೆಯಲ್ಲಿ ಕಂಗಾಲಾದ ಕೇರಳಕ್ಕೆ ಯುಎಇ ಕೊಡಮಾಡಿದ್ದ ಸಂಭಾವನೆಯನ್ನು ಸ್ವೀಕರಿಸುವ ವಿಷಯದಲ್ಲಿ ಕೇಂದ್ರ ಹಾಗೂ ಕೇರಳದ ಮಧ್ಯೆ ಇರಿಸುಮುರಿಸು ಉಂಟಾಗಿದ್ದು, ಯುಎಇ ಪ್ರಧಾನಿಯ ಟ್ವೀಟ್ ಹೊರಬಿದ್ದಾಗ ಅದರೊಂದಿಗೆ ತುಲನೆ ಮಾಡುವವರೂ ಇದ್ದಾರೆ. ಇದೀಗ ಮಖ್ತೂಂ ಅವರ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

error: Content is protected !! Not allowed copy content from janadhvani.com