ವಾಷಿಂಗ್ಟನ್: ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲು ಸಿದ್ಧ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
‘ನಾನು ಮಾತುಕತೆಯಲ್ಲಿ ನಂಬಿಕೆ ಇಟ್ಟಿದ್ದೇನೆ. ಅವರು ಮಾತುಕತೆಗೆ ಮುಂದಾದರೆ ನಾನು ಕೂಡ ಭೇಟಿಯಾಗಲು ಸಿದ್ಧ’ ಎಂದು ಇಟಲಿ ಪ್ರಧಾನಿ ಪೌಲೋ ಜೆಂಟಿಲೋನಿ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ವೇಳೆ ಪ್ರಶ್ನೆಯೊಂದಕ್ಕೆ ಈ ರೀತಿ ಉತ್ತರಿಸಿದರು.
‘ಅವರು ಮಾತುಕತೆಗೆ ಸಿದ್ಧರಿದ್ದಾರೆಯೇ ಎಂಬುದು ಇದುವರೆಗೂ ಗೊತ್ತಿಲ್ಲ. ಸದ್ಯಕ್ಕೆ ಅವರು ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ. ಇರಾನ್ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಿದ್ದೇನೆ, ಅದೊಂದು ಹಾಸ್ಯಾಸ್ಪದವಾದ ಒಪ್ಪಂದವಾಗಿತ್ತು. ಅವರು ನನ್ನನ್ನು ಭೇಟಿಯಾಗಲು ಎದುರುನೋಡುತ್ತಿದ್ದಾರೆ, ನಾನು ಕೂಡ ಯಾವುದೇ ಸಂದರ್ಭದಲ್ಲಿ ಭೇಟಿಯಾಗಲು ಸಿದ್ಧನಿದ್ದೇನೆ’ ಎಂದು ಅವರು ತಿಳಿಸಿದರು.
ಆರ್ಥಿಕ ಸಂಕಷ್ಟದಲ್ಲಿ ಇರಾನ್:
ಅಮೆರಿಕಾದ ಆರ್ಥಿಕ ನೀತಿಯ ನಿರ್ಬಂಧಗಳಿಂದಾಗಿ ಇರಾನಿನ ಹಣಕಾಸು ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿದೆ. ಆಗಸ್ಟ್ 7ರಿಂದ ಅನ್ವಯವಾಗುವಂತೆ ಇರಾನ್‌ನಿಂದ ರಫ್ತಾಗುವ ಸರಕು–ಸೇವೆಗಳ ಮೇಲೆ ಅಮೆರಿಕಾ ಹೊಸ ನಿಯಮಗಳನ್ನು ರೂಪಿಸಿದೆ. ಇದರಿಂದಾಗಿ ಇರಾನಿನ ಕರೆನ್ಸಿ ‘ರಿಯಾಲ್’ ಬೆಲೆಯೂ ಕುಸಿದಿದೆ. ಭಾನುವಾರದ ಮಾರುಕಟ್ಟೆಯಲ್ಲಿ ಒಂದು ಲಕ್ಷ ರಿಯಾಲ್‌ನ ಮೌಲ್ಯ ಒಂದು ಡಾಲರ್‌ಗೆ ಸಮವಾಗಿತ್ತು.
ಪ್ರಮುಖ ರಾಷ್ಟ್ರಗಳು ಒಟ್ಟುಗೂಡಿ 2015ರಲ್ಲಿ ಮಾಡಿಕೊಂಡಿರುವ ಪರಮಾಣು ಒಪ್ಪಂದದಿಂದ ಅಮೆರಿಕ ಕಳೆದ ಮೇನಲ್ಲಿ ಹೊರಬಂದಿತ್ತು. ಜತೆಗೆ ಇರಾನ್‌ನ ಪರಮಾಣು ಪ್ರಯೋಗಗಳನ್ನು ಹತ್ತಿಕ್ಕಲು ಪ್ರಯತ್ನಿಸಿತ್ತು. ಇದರಿಂದಾಗಿ ಅಮೆರಿಕಾ–ಇರಾನ್ ನಡುವಿನ ಸಂಬಂಧವೂ ಹಳಸಲು ಆರಂಭಿಸಿತ್ತು.
ಭದ್ರತಾ ದೃಷ್ಟಿಯಿಂದ ಇರಾನ್ ಪರಮಾಣಿನ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ ಎಂದು ಅಮೆರಿಕಾ ವಾದಿಸಿದ್ದಲ್ಲದೆ, ಇರಾನ್ ತೈಲದ ಉತ್ಪನ್ನಗಳ ಆಮದನ್ನು ತಡೆಹಿಡಿಯುವಂತೆ ಇತರೆ ರಾಷ್ಟ್ರಗಳಿಗೂ ಸೂಚಿಸಿತ್ತು. ಇಲ್ಲದಿದ್ದರೆ, ಅಮೆರಿಕಾದ ನೀತಿಯ ಪರಿಣಾಮಗಳನ್ನು ಎದುರಿಸಲು ಸಿದ್ಧವಿರುವಂತೆ ಎಚ್ಚರಿಕೆ ನೀಡಿತ್ತು.
ಮಾರುಕಟ್ಟೆಯಲ್ಲಿ ಶನಿವಾರ ಒಂದು ಡಾಲರ್‌ಗೆ 97,500 ರಿಯಾಲ್ಸ್ ಸಮವಾಗಿದ್ದರೆ, ಭಾನುವಾರಕ್ಕೆ ಅದು 1,11,500ಕ್ಕೆ ಸರ್ರನೆ ಕುಸಿದಿತ್ತು.
ದುರ್ಬಲ ಆರ್ಥಿಕತೆ, ಸ್ಥಳೀಯ ಬ್ಯಾಂಕ್‌ಗಳಲ್ಲಿನ ಹಣಕಾಸಿನ ಅಡೆತಡೆಗಳು ಮತ್ತು ಡಾಲರ್‌ಗೆ ಹೆಚ್ಚಿದ ಬೇಡಿಕೆಯಿಂದಾಗಿ ಕಳೆದ ಏಪ್ರಿಲ್‌ನಲ್ಲಿ ಇದ್ದ ಸ್ಥಿತಿಗಿಂತ, ರಿಯಾಲ್ ಮೌಲ್ಯ ಅರ್ಧದಷ್ಟು ಕುಸಿದಿದೆ.
ಇರಾನ್ ಅನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಪ್ರಯತ್ನವನ್ನು ಡೋನಾಲ್ಡ್ ಟ್ರಂಪ್ ಮಾಡುತ್ತಿರುವ ಈ ಹೊತ್ತಿನಲ್ಲಿಯೇ, ಯುರೋಪಿನ ರಾಷ್ಟ್ರಗಳು ಇರಾನ್‌ನ ಕೈ ಹಿಡಿಯಲು ಮುಂದಾಗಿವೆ. ಫ್ರಾನ್ಸ್ ಒಂದು ಹೆಜ್ಜೆ ಮುಂದೆ ಬಂದು, ಇರಾನಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಘೋಷಿಸಿದೆ.
ಅಮೆರಿಕಾದ ನೀತಿ ಆಗಸ್ಟ್ 7ರಿಂದ ಜಾರಿಯಾದರೆ, ಇರಾನ್‌ನಿಂದ ಹೊರಹೋಗುವ ಚಿನ್ನ, ಗ್ರಾಫೈಟ್, ಬೆಲೆಬಾಳುವ ಲೋಹಗಳು, ಕಲ್ಲಿದ್ದಿಲು ಮತ್ತು ಕೈಗಾರಿಕಾ ಸಂಬಂಧಿಸಿದ ಸಾಫ್ಟ್‌ವೇರ್ ಸೇವೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗೆಯೇ ಇಲ್ಲಿ ತಯಾರಾಗುವ ನೆಲಹಾಸು, ಆಹಾರ ಉತ್ಪನ್ನಗಳು ಅಮೆರಿಕಕ್ಕೆ ಹೋಗಲಾರವು.
ಟ್ರಂಪ್‌ರ ನೀತಿಯಿಂದಾಗಿ ಇರಾನ್‌ನ ತೈಲು ರಫ್ತು ಸಹ ಈ ವರ್ಷದ ಅಂತ್ಯಕ್ಕೆ ಮೂರನೇ ಎರಡರಷ್ಟು ಕುಸಿಯಲಿದೆ. ಇದರಿಂದ ವಿವಿಧ ರಾಷ್ಟ್ರಗಳಲ್ಲಿ ಇಂಧನಗಳ ಕೊರತೆ ತಲೆದೋರಲಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.