janadhvani

Kannada Online News Paper

ಅಫ್ಘಾನಿಸ್ತಾನ : ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆತ್ಮಹತ್ಯಾ ದಾಳಿ : 14 ಸಾವು, 60 ಮಂದಿ ಗಾಯ

ಕಾಬೂಲ್ : ಐಸಿಸ್ ಉಗ್ರರು ಅಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ರಾಜಧಾನಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪಾಧ್ಯಕ್ಷ ಅಬ್ದುಲ್ ರಶೀದ್ ದೋಸ್ತಮ್ ಆಗಮನದ ನಂತರ ಆತ್ಮಹತ್ಯಾ ಬಾಂಬರ್ ದಾಳಿ ನಡೆದಿದ್ದು, ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದು, 60 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅಬ್ದುಲ್ ರಶೀದ್ ದೋಸ್ತಮ್ ಸ್ವಾಗತಿಸಲು ಸರ್ಕಾರದ ಹಿರಿಯ ಅಧಿಕಾರಿಗಳು, ರಾಜಕೀಯ ನಾಯಕರು ಮತ್ತು ಅವರ ಬೆಂಬಲಿಗರು ಆಗಮಿಸಿದ್ದರು. ಈ ಸಂದರ್ಭದಲ್ಲಿ ದಾಳಿ ನಡೆದಿದೆ. ಮೊದಲ ಬಾರಿಗೆ ಇಂತಹ ದಾಳಿ ನೋಡುತ್ತಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಚೆಲ್ಲಾಪಿಲ್ಲಿಯಾಗಿ ಬಿದಿದ್ದ ಮನುಷ್ಯರ ಮಾಂಸಗಳನ್ನು ಕೆಲವರು ಸಂಗ್ರಹಿಸುತ್ತಿದ್ದರು. ಅಫ್ಘಾನಿಸ್ತಾನದಲ್ಲಿ ಏನು ನಡೆಯುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಪಾಶ್ಚಾತ್ಯ ಸೂಟ್ ಮತ್ತು ಶಸ್ತ್ರಸಜ್ಜಿತ ವಾಹನದಲ್ಲಿ ಪ್ರಯಾಣಿಸುತ್ತಿದ್ದ ದೋಸ್ತಮ್ ಅವರಿಗೆ ಯಾವುದೇ ರೀತಿಯ ಗಾಯವಾಗಿಲ್ಲ ಎಂದು ವಕ್ತಾರ ಬಾಷಿರ್ ಅಹ್ಮದ್ ತಯಾಂಜ್ ತಿಳಿಸಿದ್ದಾರೆ.
ಘಟನೆಯಲ್ಲಿ 14 ಮಂದಿ ಜನರು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 9 ಭದ್ರತಾ ಪಡೆ ಹಾಗೂ ಸಂಚಾರ ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರ ಹಸ್ಮತ್ ಸ್ಟಾನಿಕ್ ಜಾಯ್ ಹೇಳಿದ್ದಾರೆ.
ಐಸಿಸ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಅಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳ ದುರ್ಬಳಕೆ ಸಂಬಂಧಿಸಿದಂತೆ ಡೊಸ್ಟಮ್ ಮೇಲೆ ಆರೋಪ ಕೇಳಿಬಂದಿತ್ತು. 2017ರಿಂದಲೂ ಟರ್ಕಿಯಲ್ಲಿ ವಾಸಿಸುತ್ತಿದ್ದ ಅವರು ವಿಮಾನದ ಮೂಲಕ ಆಗಮಿಸುತ್ತಿದ್ದರು ಎನ್ನಲಾಗಿದೆ.
ಸರ್ಕಾರದ ಮೇಲೆ ನಂಬಿಕೆ ಇಲ್ಲ , ದೋಸ್ತಮ್ ವಿರುದ್ಧ ಪ್ರತಿಭಟನೆ ಮುಂದುವರೆಸುವುದಾಗಗಿ ಪ್ರತಿಭಟನಾಕಾರರು ಹೇಳಿಕೆ ನೀಡಿದ್ದಾರೆ.
ಮುಂದಿನ ವರ್ಷದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಉತ್ತರ ಮತ್ತು ಮಧ್ಯ ಉಜ್ಬೇಕ್ ಪ್ರಾಂತ್ಯದಲ್ಲಿ ಬೆಂಬಲ ಪಡೆಯುವ ನಿಟ್ಟಿನಲ್ಲಿ ಅಧ್ಯಕ್ಷ ಅಶ್ರಪ್ ಘನಿ ಅವರೇ ದೋಸ್ತಮ್ ಸ್ವದೇಶಕ್ಕೆ ವಾಪಾಸ್ ಆಗಲು ಗ್ರೀನ್ ಸಿಗ್ನಲ್ ನೀಡಿದ್ದರು ಎಂಬುದು ಮೂಲಗಳಿಂದ ತಿಳಿದುಬಂದಿದೆ.

error: Content is protected !! Not allowed copy content from janadhvani.com