janadhvani

Kannada Online News Paper

ಕರಾವಳಿಯ ಹಿರಿಯ ಮುತ್ಸದಿ ಬಿ.ಎ.ಮೊಯ್ದೀನ್ ನಿಧನ -ಸಿ ಎಂ ಸಂತಾಪ

ಮಂಗಳೂರು: ಕರಾವಳಿಯ ಹಿರಿಯ ಕಾಂಗ್ರೆಸ್ ನಾಯಕ ಬಿ.ಎ. ಮೊಯ್ದೀನ್ ಮಂಗಳವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಪೇಜಾವರ ಎಂಬ ಕುಗ್ರಾಮದ ಅನಕ್ಷರಸ್ಥ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿ, ಸ್ವಪ್ರಯತ್ನದಿಂದ ರಾಜಕಾರಣದಲ್ಲಿ ಗುರುತಿಸಿಕೊಂಡು, ಒಂದೊಂದೇ ಮೆಟ್ಟಿಲೇರಿ ರಾಜ್ಯದ ಉನ್ನತ ಶಿಕ್ಷಣ ಸಚಿವರ ಹುದ್ದೆಯನ್ನೂ ಒಂದು ಸಣ್ಣ ಕಪ್ಪು ಚುಕ್ಕೆಯೂ ಇಲ್ಲದಂತೆ ನಿರ್ವಹಿಸಿದ ಧೀಮಂತ ವ್ಯಕ್ತಿ ಇವರು. ಸರಳ ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಮೊಯ್ದೀನ್ ಅವರ ಆತ್ಮಕಥನ ‘ನನ್ನೊಳಗಿನ ನಾನು’ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗುವುದಿತ್ತು.

ಅನಾರೋಗ್ಯದಿಂದ ಬಳಲುತ್ತಿದ್ದ 81ರ ಹರೆಯದ ಮೊಯ್ದೀನ್ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಯಿಂದ ಚೇತರಿಸಿಕೊಂಡು ಬೆಂಗಳೂರು ಬಂದಿದ್ದ ಇವರು ಕಳೆದ ವಾರ ಅನಾರೋಗ್ಯಕ್ಕೀಡಾಗಿದ್ದರು. ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಇವರು ಇಂದು ಮುಂಜಾನೆ 6 ಗಂಟೆಗೆ ನಿಧನರಾಗಿದ್ದಾರೆ.

ಮೊಯ್ದೀನ್ ಅವರ ಪಾರ್ಥಿವ ಶರೀರವನ್ನು 8 ಗಂಟೆಗೆ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಬೆಂಗಳೂರಿನ ಸಂಜಯ ನಗರ ಪೊಲೀಸ್ ಠಾಣೆ ಬಳಿಯ ಅಪಾರ್ಟ್‍ಮೆಂಟ್‍ನ ಮೂರನೇ ಮಹಡಿಯಲ್ಲಿ 11 ಗಂಟೆಗೆ ಸಾರ್ವಜನಿಕರ ದರ್ಶನಕ್ಕೆ ಇಟ್ಟು ನಂತರ ಸಚಿವ ಖಾದರ್ ಉಸ್ತುವಾರಿಯಲ್ಲಿ ಮಂಗಳೂರಿಗೆ ಕೊಂಡೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.

ಮೊಯ್ದೀನ್ ಅವರ ಕಿರು ಪರಿಚಯ:
ಪೂರ್ತಿ ಹೆಸರು: ಬಜ್ಪೆ ಅಬ್ದುಲ್ ಖಾದರ್ ಮೊಯ್ದೀನ್
ಅಪ್ಪ: ಅಬ್ದುಲ್ ಖಾದರ್
ಅಮ್ಮ: ಹಲೀಮಾ
ಮದುವೆ: 25 ಮೇ 1962
ಪತ್ನಿ: ಖತೀಜಾ
ಮಕ್ಕಳು: ಹಲೀಮಾ ಶಾಹೀನ್, ಎ.ಕೆ ಮುಶ್ತಾಕ್, ಫಾತಿಮಾ ಸಬೀನಾ, ಅಸಿಫ್ ಮಸೂದ್

ಶಿಕ್ಷಣ: ಬಿಎಸ್ಸಿ ಪದವಿ
ವೃತ್ತಿ ಜೀವನ
ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ರಾಜಕಾರಣಕ್ಕೆ ಪ್ರವೇಶ- 1969
ಡಾ.ಡಿ.ಬಿ ಚಂದ್ರೇಗೌಡರ ಅಧಿಕಾರ ಅವದಿಯಲ್ಲಿ  ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ದೇವರಾಜ ಅರಸ್ ಅವಧಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ : 1975- 1980
ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲುವು:  1978
ಎಂಎಲ್‍ಸಿ – 1990-2002
ಗವರ್ನಮೆಂಟ್ ಚೀಫ್  ವಿಪ್ -ಶಾಸಕಾಂಗ ಸಮಿತಿ: 1994- 1995
ಉನ್ನತ ಶಿಕ್ಷಣ ಮತ್ತು ಕೈಗಾರಿಕೆ ಸಚಿವ:  1995-1999
ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯ- 2007ರಿಂದ

ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಮಾವೇಶದಲ್ಲಿ ಭಾಗವಹಿಸುವಿಕೆ
1979: ರಷ್ಯಾದಲ್ಲಿ ನಡೆದ ಸಮಾವೇಶದಲ್ಲಿ ಜಾಗತಿಕ ಶಾಂತಿ ಸಮಿತಿ ಪ್ರತಿನಿಧಿಯಾಗಿ ಭಾಗಿ
1986: ಹವಾನಾ (ಕ್ಯೂಬಾ)- ಶಿಕ್ಷಣ ಸಚಿವರ ಸಮ್ಮೇಳನ
ಇಂಡೋ-ಚೀನಾ ಫ್ರೆಂಡ್‍ಶಿಪ್ ಸೊಸೈಟಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗಿ
ಪ್ರಶಸ್ತಿ ​
2016: ದೇವರಾಜ ಅರಸು ಪ್ರಶಸ್ತಿ

ಸಿಎಂ ಕುಮಾರಸ್ವಾಮಿ ಸಂತಾಪ:  ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿ ಬಿ.ಎ. ಮೊಯ್ದೀನ್ ಅವರ ನಿಧನ ಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ದೇವರಾಜ ಅರಸು ಅವರ ಒಡನಾಡಿಯಾಗಿದ್ದ ಮೊಯ್ದೀನ್ ಅವರು ನಂತರದ ವರ್ಷಗಳಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. 2016 ರಲ್ಲಿ ರಾಜ್ಯ ಸರ್ಕಾರದ ದೇವರಾಜ ಅರಸು ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ನಿಧನದಿಂದ ನಾಡು ಹಿರಿಯ ಮುತ್ಸದ್ಧಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

error: Content is protected !! Not allowed copy content from janadhvani.com