janadhvani

Kannada Online News Paper

ಕಾಟಿಪಳ್ಳ: ನೂತನ ಮದ್ರಸ ಕಟ್ಟಡ ಉದ್ಘಾಟನಾ ಸಮಾರಂಭ- ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮ

ಕಾಟಿಪಳ್ಳ: ಇಲ್ಲಿನ ಪ್ರತಿಷ್ಠಿತ ಧಾರ್ಮಿಕ ಸಂಸ್ಥೆಯಾದ ಪಣಂಬೂರು ಮುಸ್ಲಿಂ ಜಮಾಅತ್ ಮುಹ್ಯಿದ್ದೀನ್ ಜುಮುಅ ಮಸೀದಿಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಮದ್ರಸ ಕಟ್ಟಡದ ಉದ್ಘಾಟನಾ ಸಮಾರಂಭವು 2026 ಏಪ್ರಿಲ್ 11, 12 ಮತ್ತು 13 ರಂದು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ವೇದಿಕೆಗೆ ಜಮಾಅತ್‌ನ ಏಳಿಗೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಮರ್ಹೂಮ್ ಮುಹಮ್ಮದ್ ಸ್ವಾಲಿಹ್ ಉಸ್ತಾದ್ (ಬೆಳಿಯೆ ಉಸ್ತಾದ್) ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

ಮೂರು ದಿನಗಳ ಕಾರ್ಯಕ್ರಮದ ವಿವರ:
ಏಪ್ರಿಲ್ 11 (ಶನಿವಾರ) ರಾತ್ರಿ ನಡೆಯುವ ಧಾರ್ಮಿಕ ಸಭೆಯಲ್ಲಿ ಅಡ್ಯಾರ್ ಕಟ್ಟೆ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಹಕೀಂ ಮದನಿ ಪಾಂಡವರಕಲ್ಲು ಪ್ರವಚನ ನೀಡಲಿದ್ದಾರೆ. ಏಪ್ರಿಲ್ 12 (ಆದಿತ್ಯವಾರ) ರಾತ್ರಿ ಪೊಯ್ಮುತ್ತಬ್ಬೈಲ್ ಕೇಂದ್ರ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಸಮಾರಂಭದ ಅಂತಿಮ ದಿನವಾದ ಏಪ್ರಿಲ್ 13 ಸೋಮವಾರ ಬೆಳಿಗ್ಗೆ 9:00 ಗಂಟೆಗೆ ಮದ್ರಸ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ.
ಲೋಕಾರ್ಪಣೆ ಮತ್ತು ಗಣ್ಯರ ಉಪಸ್ಥಿತಿ:
ಕಟ್ಟಡದ ಉದ್ಘಾಟನೆಯನ್ನು ಕಡಲುಂಡಿಯ ಸಯ್ಯಿದ್ ಇಬ್ರಾಹೀಂ ಖಲೀಲ್ ತಂಙಳ್ ಅಲ್ ಬುಖಾರಿ ನೆರವೇರಿಸಲಿದ್ದಾರೆ. ಕೃಷ್ಣಾಪುರ ಸಂಯುಕ್ತ ಜಮಾಅತ್‌ನ ಖಾಝಿ ಇ.ಕೆ. ಇಬ್ರಾಹೀಂ ಮುಸ್ಲಿಯಾರ್ ದುಆ ಆಶೀರ್ವಚನ ನೀಡಲಿದ್ದು, ಖ್ಯಾತ ವಿದ್ವಾಂಸ ಡಾ| ಅಬ್ದುಲ್ ಹಕೀಮ್ ಅಝ್ಹರಿ ಕಾಂತಪುರಂ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ. ಇನಾಯತ್ ಅಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪಿ.ಎಂ.ಜೆ ಅಧ್ಯಕ್ಷರಾದ ಹಾಜಿ ಎಸ್. ರಹಮತುಲ್ಲಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಸೋಮವಾರ ರಾತ್ರಿ 8:00 ಗಂಟೆಗೆ ಸಯ್ಯಿದ್ ತ್ವಾಹಾ ತಂಙಳ್ ಮತ್ತು ತಂಡದವರಿಂದ ‘ಸ್ವಲಾತ್ ವಾರ್ಷಿಕ’ ಮತ್ತು ಆಧ್ಯಾತ್ಮಿಕ ‘ಬುರ್ದಾ ಮಜ್ಲಿಸ್’ ನಡೆಯಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಮತ್ತು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲು ಜಮಾಅತ್ ಸಮಿತಿ ಸರ್ವರನ್ನೂ ಆತ್ಮೀಯವಾಗಿ ಆಹ್ವಾನಿಸಿದೆ.

ಬೆಳಿಯೆ ಉಸ್ತಾದರ ಸ್ಮರಣೆ ಮತ್ತು ವಿಶೇಷತೆ
1964ರಲ್ಲಿ ಮಂಗಳೂರು ಬಂದರ್‌ನಿಂದ ಕಾಟಿಪಳ್ಳಕ್ಕೆ ಆಗಮಿಸಿದ ಬೆಳಿಯೆ ಉಸ್ತಾದರು, ಸುಮಾರು ಮೂರೂವರೆ ದಶಕಗಳ ಕಾಲ ಈ ಜಮಾಅತ್‌ನ ಇಮಾಮರಾಗಿ, ಖತೀಬರಾಗಿ ಮತ್ತು ಮುಅಲ್ಲಿಮರಾಗಿ ಸೇವೆ ಸಲ್ಲಿಸಿದ್ದರು. ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರನ್ನೂ ಪ್ರೀತಿಸುತ್ತಿದ್ದ ಅವರು, ಈ ಭಾಗದ ಶೈಕ್ಷಣಿಕ ಕ್ರಾಂತಿಗೆ ಅಡಿಪಾಯ ಹಾಕಿದವರು.
ವಿಶೇಷ ಸಂಗತಿ: ಅವರು ನಿಧನರಾದ ದಿನದಂದೇ (ಶವ್ವಾಲ್ 22) ಅಲ್ ಮದ್ರಸತುನ್ನೂರಿಯ್ಯ ನೂತನ ಕಟ್ಟಡ ಉದ್ಘಾಟನೆ ಗೈಯ್ಯುತ್ತಿರುವುದು ವಿಶೇಷ ಹಾಗೂ ಅಲ್ಲಾಹನ ಅನುಗ್ರಹ ಎನ್ನಬಹುದು.
ಮದ್ರಸದ ಹೆಸರೇ ಸೂಚಿಸುವಂತೆ ಮದ್ರಸ, ಮಸೀದಿ ಹಾಗೂ ಶಾಲೆಗಳು (ನೂರ್) ಪ್ರಕಾಶದೊಂದಿಗೆ ಪ್ರಕಾಶಮಯವಾಗಿರಲಿ ಎಂದು ಪ್ರಾರ್ಥಿಸೋಣ ಮತ್ತು ಹಾರೈಸೋಣ!

ಕಾಟಿಪಳ್ಳ ಜನರು ಪ್ರೀತಿಯಿಂದ ಕರೆಯುವ ಬೆಳಿಯೆ ಉಸ್ತಾದರ ಹೆಸರು ಮುಹಮ್ಮದ್ ಸ್ವಾಲಿಹ್ ಉಸ್ತಾದ್. ಪಣಂಬೂರ್ ಖತೀಬ್ ಆಗಿದ್ದ ಇದ್ದಿನಬ್ಬ ಖಾಝಿ ಯವರ ಕಾಲದಲ್ಲಿ ಪ್ರತೀ ಶುಕ್ರವಾರ ಖುತುಬಾ ಪಾರಾಯಣ ಮಾಡಲು ಅವರು ಸ್ವಾಲಿಹ್ ಉಸ್ತಾದರಿಗೆ ನೀಡುತ್ತಿದ್ದರು.1963 ರಲ್ಲಿ ಪಣಂಬೂರ್ ನಿಂದ ಕಾಟಿಪಳ್ಳ ಕ್ಕೆ ಸ್ಥಳಾಂತರ ಗೊಂಡಾಗ ಕಾಟಿಪಳ್ಳ ಖತೀಬ್ ಆಗಿ ನೇಮಕಗೊಂಡ ಅವರು 1998 ರ ತನಕ ಅಂದರೆ ವಫಾತ್ ತನಕ ಖತೀಬ್ ಆಗಿಯೇ ಮುಂದುವರಿದಿದ್ದರು. ಕಾಟಿಪಳ್ಳದ ಮೊದಲ ಖತೀಬ್ ಎಂಬ ಹೆಗ್ಗಳಿಕೆ ಅವರದ್ದು.

ಕಾಟಿಪಳ್ಳ ಜನತೆಯ ಪ್ರೀತಿಯ ಬೆಲಿಯೊ ಉಸ್ತಾದ್ ಆಗಿದ್ದ ಅವರು ಮಸೀದಿಗೆ ಮಾತ್ರ ಸೀಮಿತವಾದವರಲ್ಲ. ಪ್ರತೀ ಮನೆಗಳಲ್ಲಿ ನಡೆಯುವ ಸಭೆ‌ ಸಮಾರಂಭ ಗಳ ಭಾಗವಾಗುತ್ತಿದ್ದರು.ಪ್ರತಿಯೊಬ್ಬರ ಕಷ್ಟ ಸುಖಗಳಿಗೆ ಸಾಂತ್ವನ ಕೇಂದ್ರವಾಗಿದ್ದರು. ಮಕ್ಕಳು ಜನಿಸಿದರೆ ಅವರ ಜನ್ಮ ದಿನಾಂಕ ದಾಖಲಿಸಿಡುವ ಸೇವಕರಾಗಿದ್ದರು. ಬಡ ಮಕ್ಕಳನ್ನು ಕಂಡರೆ ಅವರಿಗೆ ನೆರವು ನೀಡುವ ದಾನಿಯಾಗಿದ್ದರು.‌ ಸಮಸ್ಯೆ ಗಳು ಎದುರಾದರೆ ಜನತೆ ಓಡಿಬರುತ್ತಿದ್ದದ್ದು ಬೆಲಿಯೊ ಉಸ್ತಾದರ ಬಳಿಗೆ. ಅಲ್ಲಿ ನೆಮ್ಮದಿಯ ಮನ ತೃಪ್ತಿ ಅವರಿಗೆ ಲಭಿಸುತ್ತಿತ್ತು.
ಹೀಗೆ ತನ್ನ ಸಜ್ಜನಿಕೆಯ ಗುಣ ದಿಂದ ಕಾಟಿಪಳ್ಳ ಜನತೆಯ ಮನದಾಳದಲ್ಲಿ ಬೆಳಿಯೆ ಉಸ್ತಾದರಾಗಿ ವಿರಾಜಮಾನ ರಾಗಿ ನೆಲೆನಿಂತರು.

ಕಾಟಿಪಳ್ಳ ದಲ್ಲಿ ಸರಿಸುಮಾರು ಮೂವತ್ತೈದು ವರ್ಷಗಳ ಕಾಲ ಖತೀಬರಾಗಿ ದುಡಿದ ಅವರು ಸೇವೆಯಲ್ಲಿರುವಾಗಲೇ ಇಹಲೋಕ ತ್ಯಜಿಸಿದರು. ‌1998 ರ ಶವ್ವಾಲ್ 22 ರಂದು ತನ್ನ 63 ನೇ ವಯಸ್ಸಿನಲ್ಲಿ ಜೀವನದ ಓಟ ನಿಲ್ಲಿಸಿ ಇಂದಿಗೆ ಇಪ್ಪತ್ತೆಂಟು ವರ್ಷ ಕಳೆದರೂ ಕಾಟಿಪಳ್ಳ ಜನರ ಮನದಿಂದ ಅವರ ನೆನಪು ಮಾಸಿ ಹೋಗಿಲ್ಲ. ಈಗಲೂ ಬೆಳಿಯೆ ಉಸ್ತಾದರನ್ನು ನೆನಪಿಸುತ್ತಾರೆ. ಜನ ಮನಗಳಲ್ಲಿ ಪ್ರಕಾಶಮಾನವಾಗಿರುವ ಅವರ ಪರಲೋಕವನ್ನು ಅಲ್ಲಾಹನು ಬೆಳಗಿಸಲಿ. ಮಗ್ಪಿರತ್ ನೊಂದಿಗೆ ಜನ್ನತ್ ನೀಡಿ ಅನುಗ್ರಹಿಸಲಿ.

ಪಣಂಬೂರು ಮುಸ್ಲಿಂ ಜಮಾಅತ್ ಎಂಬ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಧಾರ್ಮಿಕ ಸಂಸ್ಥೆಗೆ, 1964ರ ತನ್ನ ಯವ್ವನ ಪ್ರಾಯದಲ್ಲಿ ಮಂಗಳೂರು ಬಂದರ್ ನಿಂದ ಧಾರ್ಮಿಕ ಕ್ಷೇತ್ರವನ್ನು ವಿಸ್ತರಿಸಿ,
ಅಂದಿನಿಂದ ಮರಣದ ತನಕ ಸಮುದಾಯಕ್ಕಾಗಿ ಸಮಾಜಕ್ಕಾಗಿ ಕಾಟಿಪಳ್ಳ ಜಮಾಅತ್ ಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟವರು ನಮ್ಮೆಲ್ಲರ ನೆಚ್ಚಿನ ಬೆಲಿಯೊ ಉಸ್ತಾದ್ ಮರ್ಹೂಂ ಮುಹಮ್ಮದ್ ಸ್ವಾಲಿಹ್ ಉಸ್ತಾದ್.
ಶವ್ವಾಲ್ 22, 1998 ರ ಮಧ್ಯಾಹ್ನ ತನ್ನ 63 ನೇ ವಯಸ್ಸಿನಲ್ಲಿ ನಮ್ಮೆಲ್ಲರನ್ನೂ ಬಿಟ್ಟಗಲಿ 29 ವರ್ಷ. ಮೂರುವರೆ ದಶಕಗಳ ಸುದೀರ್ಘ ಕಾಲ ಕಾಟಿಪಳ್ಳದಲ್ಲಿ ಹಿರಿಯ, ಕಿರಿಯ, ಶ್ರೀಮಂತ ಬಡವ ಭೇದ ಭಾವ ವಿಲ್ಲದೇ ಜಮಾಅತ್ ನ ಉನ್ನತಿಗಾಗಿ ಶ್ರಮಿಸಿದವರು.

ಮುತಅಲ್ಲಿಮರಾಗಿ,ಮುಅಲ್ಲಿಮರಾಗಿ, ಇಮಾಮರಾಗಿ, ಖತೀಬರಾಗಿ ಮರಣದ ತನಕ ಜಮಾಅತ್ ಗಾಗಿ ಶ್ರಮಿಸಿದವರು.
60 ವರ್ಷಗಳ ಹಿಂದೆ ಪಣಂಬೂರ್ ನಿಂದ ಕಾಟಿಪಳ್ಳಕ್ಕೆ ಬಂದು ನೆಲೆಸಿದರೂ ಧಾರ್ಮಿಕ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ ಸುತ್ತಮುತ್ತಲಿನ ಜಮಾಅತ್ ಬಾಂಧವರು ಕೂಡಾ ದೀನೀ ವಿದ್ಯಾಭ್ಯಾಸ ಗೈಯ್ಯಲು ಶ್ರಮಿಸಿದವರು.
ಅಲ್ ಮದ್ರಸತುನ್ನೂರಿಯ್ಯ ಧಾರ್ಮಿಕ ಶಿಕ್ಷಣದ ಮೂಲಕ ಪಣಂಬೂರು ಮುಸ್ಲಿಂ ಜಮಾಅತ್ ಅಧೀನದ ಮದ್ರಸ ದ ಪ್ರಾರಂಭದ ಉಸ್ತಾದರಾಗಿಯೂ, ಮಕ್ಕಳಿಗೆ ಮಾತ್ರವಲ್ಲದೇ ವಯಸ್ಕರಿಗೂ ಶಿಕ್ಷಣವನ್ನು ಧಾರೆ ಎರೆದವರು.

ಮದ್ರಸ ನಿರ್ಮಾಣ ಕಾರ್ಯದಲ್ಲಿ ಸಹಾಯ ಸಹಕಾರ ಪ್ರೋತ್ಸಾಹ ಪ್ರಾರ್ಥನೆಯ ಮೂಲಕ ಕೈ ಜೋಡಿಸಿದ ಪ್ರತಿಯೊಬ್ಬ ಸಹೋದರ ಸದಸ್ಯರಿಗೂ, ಹಿತೈಷಿಗಳಿಗೂ ಊರ – ಪರಊರ ಜಮಾಅತ್ ನವರಿಗೂ, ಉಲಮಾ ಉಮರಾ ವೃಂದಕ್ಕೂ, ದಾನಿಗಳಿಗೂ ಜನ್ನಾತುಲ್ ಫಿರ್ದೌಸ್ ನಲ್ಲಿ ಬೆಲಿಯೊ ಉಸ್ತಾದರೊಂದಿಗೆ ಉನ್ನತ ಸ್ಥಾನ ಅಲ್ಲಾಹು ಅನುಗ್ರಹಿಸಲಿ.

ಇದನ್ನೂ ಓದಿರಿ...