janadhvani

Kannada Online News Paper

ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ ಮಂಡನೆ: ಸಾಲಮನ್ನಾ ಘೋಷಣೆ

ಬೆಂಗಳೂರು: ಬಹುನಿರೀಕ್ಷಿತ ರೈತರ ಸಾಲಮನ್ನಾ ಘೋಷಣೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್​ ಅಧಿವೇಶನದಲ್ಲಿ ಗುರುವಾರ ಪ್ರಕಟಿಸಿದ್ದು, 2 ಲಕ್ಷ ರೂ. ವರೆಗಿನ ಸಾಲವನ್ನು ಮನ್ನಾ ಮಾಡಿದ್ದಾರೆ. ಈ ಕ್ರಮದಿಂದಾಗಿ ಸರಕಾರಕ್ಕೆ 34 ಸಾವಿರ ಕೋಟಿ ರೂ. ಹೊರೆಯಾಗಲಿದೆ.

ಮೈತ್ರಿ ಸರ್ಕಾರ ರಚನೆಯಾದಂದಿನಿಂದ ಜೆಡಿಎಸ್‌ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಇದರ ಹಿನ್ನೆಲೆಯಲ್ಲಿಯೇ ಮುಖ್ಯಮಂತ್ರಿ ತಮ್ಮ ಮೊದಲ ಬಜೆಟ್‌ನಲ್ಲಿ ಸಾಲಮನ್ನಾ ಘೋಷಣೆ ಮಾಡಿದ್ದಾರೆ.

ಯಾವುದು ಏರಿಕೆ :
ಪ್ರತಿ ಲೀಟರ್ ಪೆಟ್ರೋಲ್ ದರ 1 ರೂ. 14 ಪೈಸೆ ಏರಿಕೆ
ಡೀಸೆಲ್ ದರ ಒಂದು ಲೀಟರ್‍ಗೆ 1ರೂ. 12 ಪೈಸೆ ಹೆಚ್ಚಳ
ಹಾಲಿ ಇರುವ ಮದ್ಯದ ದರ ಶೇ.4ರಷ್ಟು ಏರಿಕೆ
ತಂಬಾಕು, ಉತ್ಪನ್ನ, ಬೀಡಿ ಬೆಲೆ ಹೆಚ್ಚಳ
ಒಂದು ಯೂನಿಟ್ ವಿದ್ಯುತ್ ದರಕ್ಕೆ 20 ಪೈಸೆ ಏರಿಕೆ

ಯಾವುದು ಇಳಿಕೆ:
ನವಣೆ, ಸಾವೇ, ಬರಗು, ಅರಕ ಹಿಟ್ಟುಗಳ ಮೇಲೆ ತೆರಿಗೆ ವಿನಾಯ್ತಿ
ದ್ವಿದಳ ಧಾನ್ಯ, ತೆಂಗಿನಕಾಯಿ ಸಿಪ್ಪೆ ಮೇಲಿನ ತೆರಿಗೆ ವಿನಾಯ್ತಿ ಮುಂದುವರಿಕೆ

ಜನಸಾಮಾನ್ಯರಿಗೆ ಶಾಕ್ :

ರೈತರ ಸಾಲ ಮನ್ನಾದಿಂದ ರಾಜ್ಯದ ಬೊಕ್ಕಸಕ್ಕೆ ಉಂಟಾಗುತ್ತಿರುವ ಹೊರೆಯನ್ನು ತಗ್ಗಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಬಜೆಟ್‍ನಲ್ಲಿ ಪೆಟ್ರೋಲ್,ಡೀಸೆಲ್, ಮದ್ಯ ಹಾಗೂ ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರಿಗೂ ಬಿಸಿ ತಟ್ಟಿಸಿದ್ದಾರೆ.   ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ರೈತರು ಪಡೆದಿರುವ 34 ಸಾವಿರ ಕೋಟಿ ಸಾಲವನ್ನು ಒಂದೇ ಕಂತಿನಲ್ಲಿ ಮನ್ನಾ ಮಾಡುತ್ತಿರುವುದರಿಂದ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಅವರು ಈ ಮಾರ್ಗ ಕಂಡುಕೊಂಡಿದ್ದಾರೆ.

ಪೆಟ್ರೋಲ್ ಮೇಲಿನ ತೆರಿಗೆ ದರವನ್ನು ಶೇ.30ರಿಂದ 32ಕ್ಕೆ( 1.ರೂ. 14 ಪೈಸೆ) ಹಾಗೂ ಡೀಸೇಲ್ ಮೇಲಿನ ತೆರಿಗೆ ದರವನ್ನು ಶೇ.19ರಿಂದ 21ಕ್ಕೆ (1 ರೂ. 12 ಪೈಸೆ) ಏರಿಕೆ ಮಾಡಿದ್ದಾರೆ.  ಇದೇ ರೀತಿ ಮದ್ಯದ ಮೇಲಿನ ಶೇ.4ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದ್ದು , ಪ್ರಸಕ್ತ ವರ್ಷ ಈ ಇಲಾಖೆಯಿಂದ 19,750 ಕೋಟಿ ರಾಜಸ್ವ ಸಂಗ್ರಹಣೆಯ ಗುರಿಯನ್ನು ಹೊಂದಲಾಗಿದೆ. ಮೋಟಾರ್ ವಾಹನ ತೆರಿಗೆಯನ್ನು ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರ ಖಾಸಗಿ ಸೇವಾ ವಾಹನ ತೆರಿಗೆಯನ್ನು ಪ್ರತಿ ಚದರ ಕಿ.ಮೀಗೆ ಶೇ50ರಂತೆ ಹೆಚ್ಚಳ ಮಾಡಿದೆ. ಇದರಿಂದ ಇನ್ನುಮುಂದೆ ಪ್ರತಿ ಚದರ ಕಿ.ಮೀಗೆ ಖಾಸಗಿ ಸೇವಾ ವಾಹನ ತೆರಿಗೆಯು 1650ರಿಂದ 1800 ಹಾಗೂ 1950ರಿಂದ 2220ವರೆಗೆ ಏರಿಕೆಯಾಗಲಿದೆ.

error: Content is protected !! Not allowed copy content from janadhvani.com