janadhvani

Kannada Online News Paper

‘ಜಾತಿ ಗಣತಿ’ – ಕರ್ನಾಟಕ ಉಲಮಾ ಕೋ ಆರ್ಡಿನೇಷನ್ ಮುಸ್ಲಿಂ ಸಮುದಾಯಕ್ಕೆ ಮನವಿ

ಉಪಜಾತಿ ಬರೆಯುವಲ್ಲಿ ಸಾಕಷ್ಟು ಗೊಂದಲ, ವಿವಿಧ ಅಭಿಪ್ರಾಯ, ಸಲಹೆಗಳು ಕೇಳಿ ಬಂದಿದ್ದು ವಿವಿಧ ಸಂಘಟನೆಗಳ ಪ್ರಕಟಣೆಗಳೂ ಹೊರಬಂದಿವೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಅಕ್ಟೋಬರ್ 7ರ ತನಕ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ)ಯಲ್ಲಿ ಎಲ್ಲಾ ಮುಸ್ಲಿಮರು ಸಕ್ರಿಯವಾಗಿ ಪಾಲ್ಗೊಂಡು ಸರಿಯಾದ ಮಾಹಿತಿ ನೀಡಿ ಸಹಕರಿಸುವಂತೆ ಕರ್ನಾಟಕ ಉಲಮಾ ಕೋ ಆರ್ಡಿನೇಷನ್ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದೆ.

ವಿಶೇಷವಾಗಿ ಧರ್ಮ ಇಸ್ಲಾಂ, ಜಾತಿ ಮುಸ್ಲಿಂ, ಭಾಷೆಯಲ್ಲಿ ಆಯಾ ಪ್ರದೇಶದ ಮಾತೃ ಭಾಷೆ, ಬ್ಯಾರಿ,ಉರ್ದು, ಕನ್ನಡ ಹೀಗೇ ಬರೆಯಬೇಕೆಂಬುದರಲ್ಲಿ ಸಮುದಾಯದ ಮಧ್ಯೆ ಒಮ್ಮತವಿದೆ. ಆದರೆ ಉಪಜಾತಿ ಬರೆಯುವಲ್ಲಿ ಸಾಕಷ್ಟು ಗೊಂದಲ, ವಿವಿಧ ಅಭಿಪ್ರಾಯ, ಸಲಹೆಗಳು ಕೇಳಿ ಬಂದಿದ್ದು ವಿವಿಧ ಸಂಘಟನೆಗಳ ಪ್ರಕಟಣೆಗಳೂ ಹೊರಬಂದಿವೆ.

ಈ ನಿಟ್ಟಿನಲ್ಲಿ ಕರ್ನಾಟಕದ ಉಭಯ ಸುನ್ನೀ ಸಂಘಟನೆಗಳ ಉನ್ನತ ವಿದ್ವಾಂಸರ ಸಾರಥ್ಯದಲ್ಲಿ ಗೌರವಾನ್ವಿತ ಖಾಝಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುವ ‘ಕರ್ನಾಟಕ ಉಲಮಾ ಕೋ ಓರ್ಡಿನೇಷನ್ ಸಮಿತಿ’ಯು ಈ ಬಗ್ಗೆ ಸುದೀರ್ಘ ಚರ್ಚೆ, ಸಮಾಲೋಚನೆ ನಡೆಸಿ ತಜ್ಞರ ಸಲಹೆ ಸೂಚನೆಗಳನ್ನು ಪಡೆದು ಉಪ ಜಾತಿ ಕಾಲಂನಲ್ಲಿ “ಸುನ್ನೀ ಮುಸ್ಲಿಂ” ಎಂದು ಬರೆಯಬೇಕೆಂದು ನಿರ್ಧಾರ ಮಾಡಿ, ಸಮುದಾಯಕ್ಕೆ ತಿಳಿಸಲು ಉತ್ಸುಕವಾಗಿದೆ.

ಸಮುದಾಯ ಬಾಂಧವರು ಈ ಸಲಹೆಯನ್ನು ಪಾಲಿಸಿ ಉಪಜಾತಿಯಲ್ಲಿ ‘ಸುನ್ನೀ ಮುಸ್ಲಿಂ’ ಎಂದು ಬರೆಯುವಂತೆ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಖಾಝಿ ಸಯ್ಯಿದ್ ಝೈನುಲ್ ಆಬಿದೀನ್ ತಂಙಲ್ ದುಗ್ಗಲಡ್ಕ, ಖಾಝಿ ಬಿ.ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಸಯ್ಯಿದ್ ಇಸ್ಮಾಯಿಲ್ ಮದನಿ ಅಲ್ ಹಾದಿ ಉಜಿರೆ, ಯು ಕೆ ಮುಹಮ್ಮದ್ ಸಅದಿ ವಳವೂರು, ಕೆ.ಎಂ ಉಸ್ಮಾನುಲ್ ಫೈಝಿ ತೋಡಾರು, ಕೆ.ಎಂ ಶರೀಫ್ ಫೈಝಿ ಕಡಬ ಮುಂತಾದವರನ್ನೊಳಗೊಂಡ ಉಲಮಾ ನಾಯಕರು ಮನವಿ ಮಾಡಿದ್ದಾರೆ.

ಉಪಯುಕ್ತ ಸೂಚನೆಗಳು:

1️⃣ ಸ್ವಯಂಪ್ರೇರಿತವಾಗಿ ಪ್ರತಿಯೊಬ್ಬರೂ ಜಾತಿ ಜನಗಣತಿಯಲ್ಲಿ ಭಾಗವಹಿಸಬೇಕು.
2️⃣ 6 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮಕ್ಕಳ ಮಾಹಿತಿ ನೀಡಬೇಕು.
3️⃣ ಮನೆ ಸದಸ್ಯರ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿಗಳನ್ನು ಗಣತಿದಾರರು ಬರುವ ಮೊದಲೇ ಸಿದ್ಧಪಡಿಸಿಡಿ.
4️⃣ ಗಣತಿದಾರರು ಕೇಳುವ 60 ಪ್ರಶ್ನೆಗಳಿಗೆ ನಿಖರವಾದ ಉತ್ತರ ನೀಡಿ. ಅಗತ್ಯವಿಲ್ಲದ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿಲ್ಲ.
5️⃣ ಸಮುದಾಯದ ಸಂಘ-ಸಂಸ್ಥೆಗಳು, ಸಂಘಟನಾ ಕಾರ್ಯಕರ್ತರು ,ಮೊಹಲ್ಲಾ ನಿವಾಸಿಗಳು ಸ್ವಯಂ ಪ್ರೇರಿತವಾಗಿ ಜಾತಿ ಜನಗಣತಿಯಲ್ಲಿ ಸ್ವಯಂ ಸೇವಕರಾಗಿ ತೊಡಗಿಸಿಕೊಳ್ಳುವ ಮೂಲಕ ಜಾಗೃತಿ ಮೂಡಿಸಬೇಕು.