janadhvani

Kannada Online News Paper

“ನಿಖಾ ಹಲಾಲ” ವಿರುದ್ದ ಸುಪ್ರಿಂಕೋರ್ಟ್ ನಲ್ಲಿ ಅರ್ಜಿ- ಕೇಂದ್ರ ಸರಕಾರ ಬೆಂಬಲ

ಹೊಸದಿಲ್ಲಿ: ತೀವ್ರ ವಿರೋಧದ ನಡುವೆ ತ್ರಿವಳಿ ತಲಾಖ್ ನಿಷೇಧಮಾಡಿದ್ದ ಕೇಂದ್ರ ಸರಕಾರವೀಗ ನಿಖಾ ಹಲಾಲ ಮತ್ತು ಬಹುಪತ್ನಿತ್ವವನ್ನು ಕ್ರಿಮಿನಲ್ ಅಪರಾಧದಡಿ ತರಲು ಸಿದ್ಧತೆ ನಡೆಸಿದೆ. ಇವೆರಡು ಪದ್ಧತಿಗಳು ಅಸಾಂವಿಧಾನಿಕ ಎಂದು ಘೋಷಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರ ಪರ ನಿಲ್ಲಲು ಕೇಂದ್ರ ನಿರ್ಧರಿಸಿದೆ.

ನಿಖಾ ಹಲಾಲ (ವಿಚ್ಛೇದಿತ ಪತ್ನಿ ಮರುಮದುವೆ ನಿಯಮಗಳು) ಎನ್ನುವುದು ,ವಿಚ್ಛೇದಿತ ದಂಪತಿ ಮರು ಮದುವೆಯಾಗಲು ಬಹುದೊಡ್ಡ ತೊಡಕಾಗಿ ಪರಿಣಮಿಸಿದೆ. ಇದರ ಪ್ರಕಾರ, ಪರಿತ್ಯಕ್ತ ಪತಿಯನ್ನು ಪುನಃ ವರಿಸಲು ಕೆಲ ಪ್ರಕ್ರಿಯೆಯನ್ನು ಪೂರೈಸಬೇಕಾಗುತ್ತದೆ. ಇಲ್ಲಿ ಮಹಿಳೆ ಇನ್ನೊಬ್ಬನನ್ನು ಮದುವೆಯಾಗಿ ವಿಚ್ಛೇದನ ಪಡೆಯಬೇಕು ಅಥವಾ ಆ ಎರಡನೇ ಪತಿ ಮರಣ ಹೊಂದಿರಬೇಕು.

ಬಹುಪತ್ನಿತ್ವ ಎನ್ನುವುದು ಮುಸ್ಲಿಂ ಸಮುದಾಯದಲ್ಲಿ ಪ್ರಚಲಿತದಲ್ಲಿದ್ದು ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗುವ ಅವಕಾಶ ಕಲ್ಪಿಸಿದೆ. ಈ ಎರಡು ಪದ್ಧತಿಗಳು ಮಹಿಳಾ ವಿರೋಧಿಯಾಗಿದ್ದು, ನಿಷೇಧಗೊಳ್ಳಲೇಬೇಕಿದೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

ಅರ್ಜಿ ವಿಚಾರಣೆ ನಡೆಸಲು ಒಪ್ಪಿದ್ದ ಕೋರ್ಟ್, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಈ ಹಿಂದೆ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.