ವಾಷಿಂಗ್ಟನ್: ಇಸ್ರೇಲ್ ಮತ್ತು ಇರಾನ್ ರಾಷ್ಟ್ರಗಳ ನಡುವಿನ ಯುದ್ಧ ಕೊನೆಗೂ ಮುಕ್ತಾಯವಾಗಿದ್ದು, ಉಭಯ ದೇಶಗಳ ನಡುವೆ ಕದನ ವಿರಾಮ ಜಾರಿಗೆ ಬಂದಿದೆ ಎಂದು ಟೆಹ್ರಾನ್ ಖಚಿತ ಪಡಿಸಿದೆ.
ಮಧ್ಯಪ್ರಾಚ್ಯದಲ್ಲಿನ 12 ದಿನಗಳ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಮತ್ತು ಇರಾನ್ ಮಂಗಳವಾರ ಒಪ್ಪಿಕೊಂಡಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ.
ಇಂದು ಬೆಳಿಗ್ಗೆ ಸಾಮಾಜಿಕ ಜಾಲತಾಣ ಟ್ರುತ್ ನಲ್ಸಿ ಪೋಸ್ಟ್ ಮಾಡಿದ್ದ ಟ್ರಂಪ್ ಅವರು, ಎಲ್ಲರಿಗೂ ಅಭಿನಂದನೆಗಳು. ಇಸ್ರೇಲ್ ಮತ್ತು ಇರಾನ್ ಸಂಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಇಸ್ರೇಲ್ ಮತ್ತು ಇರಾನ್ ತಮ್ಮ ಅಂತಿಮ ಕಾರ್ಯಾಚರಣೆಗಳನ್ನು ಮುಗಿಸಿದ ನಂತರ, ಸುಮಾರು 6 ಗಂಟೆಗಳಲ್ಲಿ ಕದನ ವಿರಾಮ ಪ್ರಾರಂಭವಾಗುತ್ತದೆ. 12 ಗಂಟೆಗಳ ಕಾಲ ಇದು ನಡೆಯುತ್ತದೆ. ನಂತರ ಯುದ್ಧವು ಮುಕ್ತಾಯವಾಗುತ್ತದೆ ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಹೇಳಿಕೆ ನೀಡಿದ್ದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು, ಇಸ್ರೇಲ್ ಜೊತೆ ಕದನ ವಿರಾಮಕ್ಕೆ ಒಪ್ಪಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇರಾನ್ ಮೇಲೆ ಯುದ್ಧ ಆರಂಭಿಸಿದ್ದು ಇಸ್ರೇಲ್. ಈಗಿನವರೆಗೆ, ಯಾವುದೇ ಕದನ ವಿರಾಮ ಅಥವಾ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಗೆ ಯಾವುದೇ ಒಪ್ಪಂದ ಆಗಿಲ್ಲ. ಇಸ್ರೇಲ್ ತನ್ನ ಕಾನೂನುಬಾಹಿರ ಆಕ್ರಮಣವನ್ನು ನಿಲ್ಲಿಸಿದರೆ, ನಾವು ಯುದ್ಧ ಮುಂದುವರಿಸುವ ಉದ್ದೇಶ ಹೊಂದಿಲ್ಲ. ನಮ್ಮ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆ ಬಗ್ಗೆ ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಮಂಗಳವಾರ ಮುಂಜಾನೆ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರು. ಇಸ್ರೇಲ್ ಕೂಡ ಬೆಳಗಿನ ಜಾವ ಇರಾನ್‌ನಾದ್ಯಂತ ವೈಮಾನಿಕ ದಾಳಿಯನ್ನು ನಡೆಸಿದೆ. ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಬೇರ್ಶವಾದಲ್ಲಿನ ವಸತಿ ಸಂಕೀರ್ಣಗಳು ಸಂಪೂರ್ಣವಾಗಿ ನಾಶವಾಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸುಟ್ಟುಹೋದ ಕಾರುಗಳು ಮತ್ತು ಮರಗಳ ಅವಶೇಷಗಳು ವಿಡಿಯೋದಲ್ಲಿ ಕಂಡು ಬಂದಿದೆ.
ಆ ಬಳಿಕ ಎರಡೂ ಕಡೆಯವರು ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಂಡರು ಎಂದು ವರದಿಯಾಗಿದೆ. ಇದೀಗ ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದು, ಅಂತಿಮವಾಗಿ 12 ದಿನಗಳ ಯುದ್ಧ ಕೊನೆಗೂ ಮುಕ್ತಾಯಗೊಂಡಿದೆ. ಯುದ್ಧ ನಿಲ್ಲಿಸುವುದಾಗಿ ಇರಾನ್ ಘೋಷಣೆ ಮಾಡಿದ್ದು, ಕದನ ವಿರಾಮ ಜಾರಿಗೆ ಬರುವ ಕೊನೆಯ ಕ್ಷಣದರವೆಗೂ ಹೋರಾಡಿದ್ದೇವೆಂದು ಇರಾನ್ ಹೇಳಿದೆ.
ಕದನ ವಿರಾಮ ಕುರಿತು ಸಾಮಾಜಿಕ ಜಾಲತಾಣ ಟ್ರುತ್ ನಲ್ಲಿ ಪೋಸ್ಟ್ ಮಾಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕದನ ವಿರಾಮ ಈಗಿನಿಂದ ಜಾರಿಯಾಗಿದೆ. ದಯವಿಟ್ಟು ಉಲ್ಲಂಘನೆ ಮಾಡದಿರಿ ಎಂದು ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ತಲೆದೋರಿದ್ದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮುಚ್ಚಲಾಗಿರುವ ವಾಯುಪ್ರದೇಶವನ್ನು ಶೀಘ್ರದಲ್ಲೇ ತೆರೆಯಲಾಗುವುದು ಮತ್ತು ವಿಮಾನ ಯಾನ ಸೇವೆಗಳು ಪುನರಾರಂಭ ಗೊಳ್ಳಲಿದೆ ಎಂದು ತಿಳಿದು ಬಂದಿದೆ.