janadhvani

Kannada Online News Paper

ಸಂಘರ್ಷಕ್ಕೆ ವಿರಾಮ? :”ವಿಶ್ವಕ್ಕೆ ಅಭಿನಂದನೆಗಳು, ಇದು ಶಾಂತಿಯ ಸಮಯ”- ಟ್ರಂಪ್

"ಯಾವುದೇ ಜೀವಹಾನಿಯಾಗದಂತೆ ಮತ್ತು ಯಾರಿಗೂ ಗಾಯವಾಗದಂತೆ" ಮೊದಲೇ ಸೂಚನೆ ನೀಡಿದ್ದಕ್ಕಾಗಿ ಇರಾನ್‌ಗೆ ಟ್ರಂಪ್ ಧನ್ಯವಾದ ಅರ್ಪಿಸಿದರು.

ವಾಷಿಂಗ್ಟನ್: ಕತಾರ್‌ನಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸುತ್ತಾ, ಅದನ್ನು “ತುಂಬಾ ದುರ್ಬಲ ಪ್ರತಿಕ್ರಿಯೆ” ಎಂದು ಬಣ್ಣಿಸಿದರು. ಪ್ರತ್ಯೇಕ ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ ಅವರು, “ವಿಶ್ವಕ್ಕೆ ಅಭಿನಂದನೆಗಳು, ಇದು ಶಾಂತಿಯ ಸಮಯ!” ಎಂದು ಘೋಷಿಸಿದರು.

ಅಮೆರಿಕ ಅಧ್ಯಕ್ಷರ ಈ ಹೇಳಿಕೆಯನ್ನು ಅರಬ್ ಮಾಧ್ಯಮಗಳು ಇದು ಯುದ್ಧಕ್ಕೆ ವಿರಾಮ ನೀಡುವ ಸಂದೇಶವಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಇಸ್ರೇಲ್ ಕೂಡ ಯುದ್ಧಕ್ಕೆ ವಿರಾಮ ನೀಡಲು ಇಂಗಿತವನ್ನು ವ್ಯಕ್ತಪಡಿಸಿದ್ದು, ಇರಾನ್ ಇದಕ್ಕೆ ಒಪ್ಪಿಗೆ ನೀಡಿದ್ದಲ್ಲಿ ಪ್ರದೇಶದಲ್ಲಿ ಶಾಂತಿ ಪುನಃಸ್ಥಾಪಿಸಲು ಸಾಧ್ಯವಾಗಲಿದೆ.

“ಇರಾನ್ ತನ್ನ ಪರಮಾಣು ಸೌಲಭ್ಯಗಳ ನಮ್ಮ ನಿರ್ಮೂಲನೆಗೆ ಅಧಿಕೃತವಾಗಿ ಬಹಳ ದುರ್ಬಲವಾಗಿ ಪ್ರತಿಕ್ರಿಯಿಸಿದೆ, ಅದನ್ನು ನಾವು ನಿರೀಕ್ಷಿಸಿದ್ದೇವೆ ಮತ್ತು ಬಹಳ ಪರಿಣಾಮಕಾರಿಯಾಗಿ ತಡೆದಿದ್ದೇವೆ. 14 ಕ್ಷಿಪಣಿಗಳನ್ನು ಹಾರಿಸಲಾಗಿತ್ತು – 13 ಕ್ಷಿಪಣಿಗಳನ್ನು ಹೊಡೆದುರುಳಿಸಲಾಯಿತು, ಮತ್ತು 1 ಕ್ಷಿಪಣಿಯನ್ನು “ಮುಕ್ತಗೊಳಿಸಲಾಯಿತು” ಏಕೆಂದರೆ ಅದು ಬೆದರಿಕೆಯಿಲ್ಲದ ದಿಕ್ಕಿನಲ್ಲಿ ಸಾಗಿತ್ತು” ಎಂದು ಅವರು ಹೇಳಿದರು.

“ಯಾವುದೇ ಅಮೆರಿಕನ್ನರಿಗೆ ಹಾನಿಯಾಗಿಲ್ಲ ಮತ್ತು ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿ ಮಾಡಲು ನನಗೆ ಸಂತೋಷವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಅವರು ತಮ್ಮ “ವ್ಯವಸ್ಥೆಯಿಂದ” ಎಲ್ಲವನ್ನೂ ಹೊರಹಾಕಿದ್ದಾರೆ ಮತ್ತು ಆಶಾದಾಯಕವಾಗಿ, ಇನ್ನು ಮುಂದೆ ಯಾವುದೇ ದ್ವೇಷ ಇರುವುದಿಲ್ಲ” “ಯಾವುದೇ ಜೀವಹಾನಿಯಾಗದಂತೆ ಮತ್ತು ಯಾರಿಗೂ ಗಾಯವಾಗದಂತೆ” ಮೊದಲೇ ಸೂಚನೆ ನೀಡಿದ್ದಕ್ಕಾಗಿ ಇರಾನ್‌ಗೆ ಟ್ರಂಪ್ ಧನ್ಯವಾದ ಅರ್ಪಿಸಿದರು.

“ಬಹುಶಃ ಇರಾನ್ ಈಗ ಈ ಪ್ರದೇಶದಲ್ಲಿ ಶಾಂತಿ ಮತ್ತು ಸಾಮರಸ್ಯಕ್ಕೆ ಮುಂದುವರಿಯಬಹುದು, ಮತ್ತು ನಾನು ಇಸ್ರೇಲ್ ಕೂಡ ಅದೇ ರೀತಿ ಮಾಡಲು ಉತ್ಸಾಹದಿಂದ ಪ್ರೋತ್ಸಾಹಿಸುತ್ತೇನೆ. ಈ ವಿಷಯದಲ್ಲಿ ನಿಮ್ಮ ಗಮನಕ್ಕೆ ಧನ್ಯವಾದಗಳು!” ಎಂದು ಅವರು ಬರೆದಿದ್ದಾರೆ. ಟ್ರಂಪ್ ನ ಈ ಪ್ರತಿಕ್ರಿಯೆಯು ಇರಾನ್ ನಡೆಸಿದ ದಾಳಿಗೆ ಯಾವುದೇ ಪ್ರತಿದಾಳಿ ನಡೆಸುವುದಿಲ್ಲ ಎಂದು ಸೂಚಿಸಿದೆ. ಈ ನಿಟ್ಟಿನಲ್ಲಿ ಪ್ರದೇಶದಲ್ಲಿ ತಲೆದೋರಿದ್ದ ಉದ್ವಿಗ್ನತೆ ಅಲ್ಪ ಮಟ್ಟಿಗೆ ಶಮನಗೊಂಡಿದೆ.

ಇರಾನ್‌ನ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ದೋಹಾದಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ದಾಳಿ ನಡೆಸಿದ ಪರಿಣಾಮ ಕತಾರ್, ಸೌದಿ ಅರೇಬಿಯಾ, ಯುಎಇ, ಬಹರೈನ್, ಕುವೈತ್ ತಮ್ಮ ವಾಯು ಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿತ್ತು. ವಿಮಾನ ಯಾನ ಸೇವೆಯು ಸ್ಥಗಿತಗೊಂಡು ಯಾತ್ರಿಕರು ವಿಮಾನ ನಿಲ್ದಾಣಗಳಲ್ಲಿ ಪರದಾಡುವಂತಾಗಿತ್ತು. ಇದೀಗ ಯುಎಇ, ಬಹರೈನ್ ಮತ್ತು ಕುವೈತ್ ತಮ್ಮ ವಾಯುಪ್ರದೇಶವನ್ನು ತೆರೆದಿರುವುದಾಗಿ ವರದಿಯಾಗಿದೆ. ಶೀಘ್ರದಲ್ಲೇ ವಿಮಾನ ಯಾನ ಸೇವೆಗಳು ಪುನರಾರಂಭಗೊಳ್ಳುವ ನಿರೀಕ್ಷೆಯಿದೆ.