janadhvani

Kannada Online News Paper

ಶೈಕ್ಷಣಿಕ, ಸಾಮಾಜಿಕ ಮುನ್ನಡೆಗೆ ಮೊಹಲ್ಲಾಗಳು ಮುಂದೆ ಬರಬೇಕು- ಎ.ಪಿ ಉಸ್ತಾದ್

“ಮೊಹಲ್ಲಾ ವ್ಯವಸ್ಥೆಯ ಮೂಲಕ ಸಮುದಾಯದ ಸಬಲೀಕರಣ” ಯೋಜನೆ ಪಂಪ್ವೆಲ್ ತಖ್ವಾ ಮಸೀದಿಯಲ್ಲಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು.

ಮಂಗಳೂರು: ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಹಾಗೂ ಕಾಸರಗೋಡು ಸಂಯುಕ್ತ ಜಮಾಅತ್‌ಗಳ ಸಭೆ ಹಾಗೂ “ಮೊಹಲ್ಲಾ ವ್ಯವಸ್ಥೆಯ ಮೂಲಕ ಸಮುದಾಯದ ಸಬಲೀಕರಣ” ಯೋಜನೆ ಪಂಪ್ವೆಲ್ ತಖ್ವಾ ಮಸೀದಿಯಲ್ಲಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮವು ಕೇರಳ SSF ಅಧ್ಯಕ್ಷ ಸಯ್ಯಿದ್ ಮುನೀರುಲ್ ಅಹ್ದಲ್ ರವರ ದುಆದೊಂದಿಗೆ ಆರಂಭಗೊಂಡಿತು. ಝೈನಿ ಕಾಮಿಲ್ ಸಖಾಫಿ ಸ್ವಾಗತ ಭಾಷಣ ಮಾಡಿದರೆ, ಡಾ. ಅಬ್ದುಲ್ ಹಕೀಮ್ ಅಝ್ಹರಿ ಉಸ್ತಾದರು ಸಭೆಯನ್ನು ಉದ್ಘಾಟಿಸಿ, ಹಿಂದಿನ ಕಾಲದ ಮಸೀದಿ ಮತ್ತು ಮಹಲ್ಲಾಗಳ ನೇತೃತ್ವದ ಮಾದರಿ ಹಾಗೂ ಸಮಾಜಕ್ಕೆ ನೀಡಿರುವ ಸೇವೆಯನ್ನು ಸ್ಮರಿಸಿಕೊಂಡರು.

GEMS (Grass root Empowerment through Mahallu System) ಗುರಿಯನ್ನು ಪ್ರಸ್ತಾಪಿಸಿ ಅಬ್ದು ಸರ್ ಮಾತನಾಡಿ, “ಈ ಮೊಹಲ್ಲಾಗಳಲ್ಲಿ ಬಯಸುವ ಬದಲಾವಣೆಗಳು ಹೇಗಿರಬೇಕು?” ಎಂಬುದರ ಬಗ್ಗೆ ಮನಮುಟ್ಟುವ ರೀತಿಯಲ್ಲಿ ವಿಷಯ ಮಂಡಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಖಾಝಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರು,
“ಖಾಝಿ ಎಂದರೆ ಕೇವಲ ಚಂದ್ರದರ್ಶನ ಅಥವಾ ನಿಕಾಹ್ ನಿರ್ವಹಿಸುವ ವ್ಯಕ್ತಿಯಲ್ಲ. ಸಮಾಜದ ಪ್ರತಿಯೊಂದು ವಿಷಯದಲ್ಲೂ ಖಾಝಿಗೆ ಜವಾಬ್ದಾರಿ ಇದೆ. ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಸಮಾಜವನ್ನು ಮುನ್ನಡೆಸುವಲ್ಲಿ ಖಾಝಿಗಳು ಪ್ರಮುಖ ಪಾತ್ರವಹಿಸಬೇಕು. ಅದಕ್ಕಾಗಿ ಖಾಝಿಗಳು ನಾಯಕತ್ವ ವಹಿಸುವ ಮೊಹಲ್ಲಾಗಳು ಮುಂದಾಗಬೇಕು,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಂಪ್ವೆಲ್ ತಖ್ವಾ ಮಸೀದಿಯ ಪದಾಧಿಕಾರಿಗಳು ಹಾಗೂ ವಿವಿಧ ಜಿಲ್ಲೆಗಳ ಸಂಯುಕ್ತ ಜಮಾಅತ್‌ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.