🖋️ ತೌಸೀಫ್ ಸಅದಿ ಹರೇಕಳ
(Ex Chairman Blood Saibo D.K District)
ಬ್ಲಡ್ ಸೈಬೋ. ಈ ಹೆಸರು ಕೇಳದವರು ಯಾರೂ ಇರಲಿಕ್ಕಿಲ್ಲ. ರಕ್ತದಾನದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಿರಂತರ ರಕ್ತದಾನ ಮಾಡುತ್ತಾ, ರಕ್ತದಾನ ಶಿಬಿರ ಮಾಡುತ್ತಾ ಅಗಣಿತ ಮಂದಿಯ ಜೀವ ಉಳಿಸಿದ ತಂಡ. ರಕ್ತ ಬೇಕೆಂಬ ಬೇಡಿಕೆಯ ಮೆಸೇಜ್ಗಳನ್ನು ಕಣ್ಮುಚ್ಚಿ ಆಚೀಚೆ ಫಾರ್ವರ್ಡ್ ಮಾಡುವುದಕ್ಕೆ ಮಾತ್ರ ಸೀಮಿತವಾಗದೇ, ಅಂತಹ ತುರ್ತು ಸಂದರ್ಭಗಳಲ್ಲಿ ನೂರಾರು ಕುಟುಂಬಗಳಿಗೆ ಆಸರೆಯಾದ ತಂಡ.
ರಕ್ತವು ಜೀವಜಲವಾಗಿದ್ದು, ರಕ್ತದಾನವು ಜೀವದಾನಕ್ಕೆ ಸಮಾನ. ಒಂದು ಬಾಟಲ್ ರಕ್ತ ನೀಡಲೂ ಹಿಂದೆ-ಮುಂದೆ ನೋಡುತ್ತಿರು ವವರೆಡೆಯಲ್ಲಿ ಎಸ್ಸೆಸ್ಸೆಫ್ ರಕ್ತದಾನಿಗಳ ದಂಡನ್ನೇ ಕಟ್ಟಿ ಬೆಳೆಸಿದೆ. ಅಂದಹಾಗೆ ಎಸ್ಸೆಸ್ಸೆಫ್ಗೂ ರಕ್ತದಾನಕ್ಕೂ ದಶಕಗಳ ನಂಟಿದೆ. ಕಳೆದ ಮೂರು ದಶಕಗಳಿಂದೀಚೆಗೆ ತುರ್ತು ಸಂದರ್ಭದಲ್ಲೂ, ಇತರ ವೇಳೆಯೂ ಶಿಬಿರದ ಮೂಲಕವೂ ಅಲ್ಲದೆಯೂ ಎಸ್ಸೆಸ್ಸೆಫ್ ರಕ್ತದಾನ ಮಾಡಿಸುತ್ತಿದೆ. ಮೂರು ದಶಕಗಳಲ್ಲಿ ಸಾವಿರಾರು ಮಂದಿಗೆ ರಕ್ತದಾನದ ಮೂಲಕ ಜೀವದಾನ ನೀಡಿದ್ದರೆ, ಅದು ಬೇರೆ ಬೇರೆ ರೀತಿಯಲ್ಲಾಗಿತ್ತು. ನಮ್ಮದೇ ಆದ ತಂಡವಿರಲಿಲ್ಲ. ನೀಡಿದ ರಕ್ತ ಹಾಗೂ ಪಡೆದವರ ಮಾಹಿತಿ ಯಾವುದನ್ನೂ ಲಿಖಿತವಾಗಿ ನೀಡಲು ಸಾಧ್ಯವಾಗುತ್ತಿರಲಿಲ್ಲ. ಅದೆಲ್ಲದಕ್ಕೂ ಪರಿಹಾರವಾಗಿ ನಮ್ಮದೇ ಆದ ತಂಡವೊಂದನ್ನು ಕಟ್ಟಿ ಸಾಮುದಾಯಿಕ ಸೇವೆ ಮುಂದುವರಿಸಲು ಎಸ್ಸೆಸ್ಸೆಫ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮುಂದಾಯಿತು ಅದುವೇ ‘ಬ್ಲಡ್ ಸೈಬೋ’.
ಸಿರಾಜುದ್ದೀನ್ ಸಖಾಫಿ ಕನ್ಯಾನರನ್ನು ‘ಬ್ಲಡ್ ಸೈಬೋ ಜನಕ’ ಎಂದೇ ಹೇಳಬಹುದು. ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿದ್ದಾಗ ಅವಧಿಯಲ್ಲಿ ಬ್ಲಡ್ ಸೈಬೋ ಜನ್ಮ ತಾಳಿತ್ತು. ಇಸ್ಮಾಈಲ್ ಮಾಸ್ಟರ್ ಮರಿಕ್ಕಳರವರು ‘ಕೇಂದ್ರ’ ಎಂಬ ಅರ್ಥ ಬರುವ ‘ಸೈಬೋ’ ಎಂಬ ಜಪಾನೀ ಪದವನ್ನು ಸೂಚಿಸಿದ್ದರು. ಈಗಲೂ ಪ್ರಚಲಿತದಲ್ಲಿರುವ ಸುಂದರವಾದ ಲೋಗೋವನ್ನು ಹಕೀಂ ಕಳಂಜಿಬೈಲ್ ವಿನ್ಯಾಸ ಮಾಡಿ ಕೊಟ್ಟಿದ್ದರು. 2017 ಜುಲೈ 14ರಿಂದ ಅಧಿಕೃತವಾಗಿ ಜನ್ಮ ತಾಳಿದ ಬ್ಲಡ್ ಸೈಬೋದ ಮೊದಲ ಕ್ಯಾಂಪ್ ಅವಿಭಜಿತ ಉಳ್ಳಾಲ ಡಿವಿಶನ್ ವ್ಯಾಪ್ತಿಯ ದೇರಳಕಟ್ಟೆಯಲ್ಲಿ ನಡೆದಿತ್ತು. ನಂತರ ನಡೆದದ್ದೆಲ್ಲವೂ ಇತಿಹಾಸ. ಸ್ಪಷ್ಟವಾದ ಗುರಿಯೊಂದಿಗೆ ಬ್ಲಡ್ ಸೈಬೋ ಮುನ್ನುಗ್ಗಿತು. ಕಾಲಕ್ರಮೇಣ ನಾನು ಸೂಚಿಸಿದ ‘ಹನಿ ರಕ್ತಕ್ಕಾಗಿ ಅಂಗಲಾಚುವವರ ಆಸರೆ’ ಎಂಬ ಸ್ಲೋಗನ್ ಕೂಡಾ ಬ್ಲಡ್ ಸೈಬೋದ ಭಾಗವಾಯಿತು.
ಇಬ್ರಾಹಿಂ ಸಖಾಫಿ ಸೆರ್ಕಳ ಜಿಲ್ಲಾಧ್ಯಕ್ಷರಾಗಿದ್ದಾಗ ದ.ಕ ಜಿಲ್ಲಾ ಬ್ಲಡ್ ಸೈಬೋ ಸಮಿತಿ ಅಸ್ತಿತ್ವಕ್ಕೆ ಬರುವುದರೊಂದಿಗೆ ಬ್ಲಡ್ ಸೈಬೋ ಸೇವೆಯ ವೇಗ ಹೆಚ್ಚಾಯಿತು. ಒಂದೇ ದಿನದಲ್ಲಿ ಎಂಟು ರಕ್ತದಾನ ಶಿಬಿರ ನಡೆಸಿದ್ದು, ಒಂದೇ ಶಿಬಿರದಲ್ಲಿ 637 ಯುನಿಟ್ ಬ್ಲಡ್ ಸಂಗ್ರಹ ಮಾಡಿದ್ದು, ಒಂದು ತಿಂಗಳಲ್ಲಿ 18 ಕ್ಯಾಂಪ್ ಮಾಡಿದ್ದು ಸ್ವರ್ಣ ಲಿಪಿಯಲ್ಲಿ ಬರೆಯಬೇಕಾದದ್ದೇ. ಮಂಗಳೂರಿನ ಪುರಭವನದಲ್ಲಿ ನಡೆದ 100 ನೇ ಕ್ಯಾಂಪ್, ಕೆಜಿಎನ್ ಮಿತ್ತೂರಿನಲ್ಲಿ ನಡೆದ ಐತಿಹಾಸಿಕ 200 ನೇ ಕ್ಯಾಂಪ್ ಮರೆಯಲಾಗದ ಅನುಭವ.
ಅತಿ ಕಡಿಮೆ ಅವಧಿಯಲ್ಲಿ ಇನ್ನೂರು ಕ್ಯಾಂಪ್ ಸಂಘಟಿಸಿದ ಕೀರ್ತಿ ಬ್ಲಡ್ ಸೈಬೋ ಪಡೆಯಿತು. ವಿಶ್ವ ರಕ್ತದಾನ ದಿನದಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯವರು 2019 ರಲ್ಲಿ ಬ್ಲಡ್ ಸೈಬೋದ 9 ಮಂದಿ ಸಾಧಕರು ಹಾಗೂ 2020 ರಲ್ಲಿ 17 ಮಂದಿ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಿದ್ದಾರೆ. ಕೋವಿಡ್ 19 ಲಾಕ್ಡೌನ್ ನಿಂದ ಶಿಬಿರಗಳು ಸ್ಥಗಿತಗೊಂಡಿದ್ದರೂ 613 ಮಂದಿ ರಕ್ತದಾನಿಗಳು ನೇರವಾಗಿ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿದ್ದರು. ರಮಳಾನಿನಲ್ಲಿ ವೃತ ತೊರೆದ ನಂತರ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಲು ಹಿಂದೆ ಮುಂದೆ ನೋಡುತ್ತಿರಲಿಲ್ಲ.
ರಕ್ತ ಬೇಕಾಗಿದೆ… ಎಂಬ ಮೆಸೇಜ್ ಗ್ರೂಪ್ ಗಳಲ್ಲಿ ಹರಿದಾಡಿದ ಕ್ಷಣಮಾತ್ರದಲ್ಲಿ ‘ಆ ರೋಗಿಗೆ ಬ್ಲಡ್ ಸೈಬೋ ವತಿಯಿಂದ ರಕ್ತವನ್ನು ವ್ಯವಸ್ಥೆ ಮಾಡಲಾಗಿದೆ ಎಂಬ ಮೆಸೇಜ್ ಹರಿದಾಡುವ ಸುವರ್ಣ ಕಾಲವಾಗಿತ್ತದು. ಎಲ್ಲೆಲ್ಲಿ ರಕ್ತದಾನ, ಎಷ್ಟೆಷ್ಟು ಯೂನಿಟ್ ಸಂಗ್ರಹ, ರಕ್ತದಾನಿಗಳ ವಿವರ, ರಕ್ತ ಪಡೆದವರ ವಿವರ, ಯಾವ ಆಸ್ಪತ್ರೆಗೆ ಎಷ್ಟೆಷ್ಟು ರಕ್ತ ನೀಡಲಾಗಿದೆ, ಎಷ್ಟು ಯೂನಿಟ್ ರಕ್ತವನ್ನು ಬ್ಲಡ್ ಬ್ಯಾಂಕ್ ನಿಂದ ಸಾಲವಾಗಿ ಪಡೆಯಲಾಗಿದೆ ಎಂಬ ಪಿನ್ ಟು ಪಿನ್ ಮಾಹಿತಿ ಪ್ರತಿಕ್ಷಣ ಅಪ್ಡೇಟ್ ಆಗುತ್ತಿತ್ತು. ಕ್ಷಣ ಕ್ಷಣದ ಪೋಸ್ಟರ್ ಮಾಡಿಕೊಡುತ್ತಿದ್ದ ಹಕೀಂ ಕಳಂಜಿಬೈಲ್ ರವರ ಕೈಚಳಕವು ಎತ್ತಿ ಹೇಳಬೇಕಾದದ್ದೇ. ಐತಿಹಾಸಿಕ 100 ಹಾಗೂ 200 ನೇ ಕ್ಯಾಂಪ್ ಗಾಗಿ ನಿದ್ದೆ ಬಿಟ್ಟ ರಾತ್ರಿಗಳು, ಜಿಲ್ಲಾ ಬ್ಲಡ್ ಸೈಬೋ ಸಮಿತಿಯ ನಾಯಕರ ಪರಿಶ್ರಮ, ಎಲ್ಲದಕ್ಕಿಂತಲೂ ಹೆಚ್ಚಾಗಿ ಅರ್ಪಣಾ ಮನೋಭಾವದಿಂದ ಜೀವಕ್ಕೆ ಜೀವ ಕೊಟ್ಟು ಓಡಾಡುತ್ತಿದ್ದ ಡಿವಿಶನ್, ಝೋನ್, ಸೆಕ್ಟರ್ ಬ್ಲಡ್ ಸೈಬೋ ಉಸ್ತುವಾರಿಗಳು.. ಮರೆಯಲಾಗದ ನಿಮಿಷಗಳು…
ಬ್ಲಡ್ ಸೈಬೋ ಅನ್ನು ಕರ್ನಾಟಕದ ಇತರ ಜಿಲ್ಲೆಗಳಿಗೂ ವಿಸ್ತರಿಸುವ ಭಾಗವಾಗಿ 2021 ರಲ್ಲಿ ಎಸ್ಸೆಸ್ಸೆಎಫ್ ರಾಜ್ಯ ಸಮಿತಿಯ ಅಧೀನಕ್ಕೆ ಬಂದ ಬ್ಲಡ್ ಸೈಬೋ ರಾಜ್ಯಾದ್ಯಂತ ಬೆಳೆಯಿತು. ಎಸ್ಸೆಸ್ಸೆಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆಯವರು ರಾಜ್ಯ ಕೋಡಿನೇಟರ್ ಆಗಿ ಈಗ ಬ್ಲಡ್ ಸೈಬೋ ಗೆ ನಾಯಕತ್ವ ನೀಡುತ್ತಿದ್ದು, ಇದರ 348 ನೇ ಕ್ಯಾಂಪ್ ಇಂದು ವಿಟ್ಲದಲ್ಲಿ ನಡೆಯುತ್ತಿದೆ.
ನಮ್ಮೀ ಪಣಯದಲ್ಲಿ ಮರೆಯಲಾಗದ ಹಲವು ಮಂದಿಯಿದ್ದಾರೆ. ಬ್ಲಡ್ ಸೈಬೋ ಆರಂಭಿಸಿದ ಸಿರಾಜುದ್ದೀನ್ ಸಖಾಫಿ ನೇತೃತ್ವದ ಜಿಲ್ಲಾ ಸಮಿತಿ, ಮುಂದುವರಿಸಿದ ಇಬ್ರಾಹಿಂ ಸಖಾಫಿ ಸೆರ್ಕಳ ನೇತೃತ್ವದ ಜಿಲ್ಲಾ ಸಮಿತಿ, ಕಾಲಿಗೆ ಚಕ್ರ ಓಡಾಡುತ್ತಿದ್ದ ಜಿಲ್ಲಾ ಕೋಡಿನೇಟರ್ ಗಳಾದ ಕರೀಂ ಕದ್ಕಾರ್ ಮತ್ತು ನವಾಝ್ ಸಖಾಫಿ ಅಡ್ಯಾರ್ಪದವು, ಜಿಲ್ಲಾ ಬ್ಲಡ್ ಸೈಬೋ ಸಮಿತಿಯ ಕನ್ವೀನರ್ ರಶೀದ್ ಹಾಜಿ ವಗ್ಗ, ಜಮಾಲ್ ಸಖಾಫಿ ಮುದುಂಗಾರ್, ಫೈಝಲ್ ಝುಹ್ರಿ, ಶರೀಫ್ ಬೆರ್ಕಳ, ಶರೀಫ್ ನಂದಾವರ, ಡಿವಿಶನ್, ಝೋನ್, ಸೆಕ್ಟರ್ ಬ್ಲಡ್ ಸೈಬೋ ಉಸ್ತುವಾರಿಗಳು.. (ಹೆಸರು ಬಹಳಷ್ಟಿದೆ) ಸ್ಫೂರ್ತಿ ನೀಡುತ್ತಿದ್ದ ಜಿಎಂ ಉಸ್ತಾದ್ ಸಹಿತವಿರುವ ಮೇರು ನಾಯಕರು, ಈ ತನಕ ಮುಂದುವರಿಸಿಕೊಂಡು ಬಂದ ರಾಜ್ಯ ಸಮಿತಿಯ ನಾಯಕರು, ರಕ್ತದಾನಿಗಳು, ಸಂಘಟಕರು, ಬೆನ್ನು ತಟ್ಟಿದವರು… ಎಲ್ಲರನ್ನೂ ವಿಶ್ವ ರಕ್ತದಾನ ದಿನದಂದು ನೆನಪಿಸುತ್ತಿದ್ದೇವೆ.







