ರಿಯಾದ್: ಮಕ್ಕಾದಲ್ಲಿರುವ ಪವಿತ್ರ ಭವನ ಕಅಬಾ ವನ್ನು ಅಲಂಕರಿಸಲು ಹೊಸ ಕಿಸ್ವಾ ಸಜ್ಜಾಗಿದೆ. ಜೂನ್ 26 ರಂದು (ಹಿಜ್ರಿ ವರ್ಷದ ಮೊದಲ ದಿನ, ಮುಹರ್ರಮ್ 1) ಕಿಸ್ವಾವನ್ನು ಕಅಬಾಗೆ ಧರಿಸಲು ಹಸ್ತಾಂತರಿಸಲಾಯಿತು. ಸಾಮಾನ್ಯವಾಗಿ ದುಲ್ ಹಜ್ಜ್ 9ನೇ ಅರಫಾ ದಿನದಂದು ಹೊಸ ಕಿಸ್ವಾವನ್ನು ಹೊದಿಸಲಾಗುತ್ತಿತ್ತು. ಕಳೆದ ವರ್ಷದಿಂದ ಮುಹರ್ರಮ್ ಒಂದರಂದು ಹೊದಿಸಲು ತೀರ್ಮಾನಿಸಲಾಗಿದೆ.
ಮಕ್ಕಾದ ಉಪ ಗವರ್ನರ್ ಸಊದ್ ಬಿನ್ ಮಿಶ್ಅಲ್ ಅವರು ರಾಜ ಸಲ್ಮಾನ್ ಪರವಾಗಿ ಕಅಬಾದ ಉಸ್ತುವಾರಿ ಅಬ್ದುಲ್ ಮಲಿಕ್ ಬಿನ್ ತ್ವಾಹಾ ಅಲ್-ಶೈಬಿ ಅವರಿಗೆ ಹೊಸ ಕಿಸ್ವಾವನ್ನು ಹಸ್ತಾಂತರಿಸಿದರು. ಇದಕ್ಕಾಗಿ ವರ್ಗಾವಣೆ ದಾಖಲೆಗೆ ಹಜ್ ಮತ್ತು ಉಮ್ರಾ ಸಚಿವ ಮತ್ತು ಎರಡು ಪವಿತ್ರ ಮಸೀದಿಗಳ ಜನರಲ್ ಪ್ರೆಸಿಡೆನ್ಸಿಯ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಡಾ. ತೌಫೀಕ್ ಅಲ್-ರಬಿಯಾ ಮತ್ತು ಕಅಬಾದ ಕೀಲಿಗಳ ಉಸ್ತುವಾರಿ ಅಬ್ದುಲ್ ಮಲಿಕ್ ಬಿನ್ ತ್ವಾಹಾ ಅಲ್-ಶೈಬಿ ಸಹಿ ಹಾಕಿದ್ದಾರೆ.
ಇದು 14 ಮೀಟರ್ ಎತ್ತರ ಮತ್ತು 12 ಮೀಟರ್ ಉದ್ದವಿದೆ. ಅದರ ಮೇಲಿನ ಮೂರನೇ ಒಂದು ಭಾಗದಲ್ಲಿ 95 ಸೆಂಟಿಮೀಟರ್ ಅಗಲ ಮತ್ತು 47 ಮೀಟರ್ ಉದ್ದದ ಬೆಲ್ಟ್ ಇದೆ. ಇದು 16 ತುಣುಕುಗಳನ್ನು ಹೊಂದಿದ್ದು, ಇಸ್ಲಾಮಿಕ್ ಅಲಂಕಾರದಲ್ಲಿ ಚಿನ್ನ ಮತ್ತು ಬೆಳ್ಳಿಯ ದಾರಗಳಲ್ಲಿ ಖುರ್ ಆನ್‌ನ ಸೂಕ್ತಗಳಿಂದ ಅಲಂಕರಿಸಲ್ಪಟ್ಟ ಚೌಕದಿಂದ ಸುತ್ತುವರೆದಿದೆ. ಸುಮಾರು 200 ಕಾರ್ಮಿಕರು 10 ತಿಂಗಳುಗಳಲ್ಲಿ ಈ ಕಿಸ್ವಾವನ್ನು ತಯಾರಿಸಿದರು.