ಬೆಳ್ತಂಗಡಿ (ಮಾ-29): ಬೆಳ್ತಂಗಡಿ ತಾಲೂಕಿನ ಪದ್ಮುಂಜ ಸರ್ಕಾರಿ ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸುವ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಮೆನ್ ಇಂಡಿಯಾ ಮೂವ್ಮೆಂಟ್(WIM) ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಲಾಯಿತು.
ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಪರೀಕ್ಷೆ ಬರೆದು ಫೇಲ್ ಆದರೆ ಶಾಲೆಗೆ 100% ಶೇಕಡ ಫಲಿತಾಂಶ ಬರುವುದಿಲ್ಲ ಎಂಬ ಕಾರಣಕ್ಕೆ, ಅವರಿಗೆ ಹಾಲ್ ಟಿಕೆಟ್ ಕೊಡದೆ ಪರೀಕ್ಷೆ ಬರೆಯುವ ಅವಕಾಶ ತಪ್ಪಿಸಲಾಗಿದೆ ಎಂಬ ಗಂಭೀರ ಆರೋಪ ಈ ಶಾಲಾ ಸಿಬ್ಬಂದಿಗಳ ಮೇಲೆ ಇದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ತ ಸಿಬ್ಬಂದಿಗಳ ಮೇಲೆ ಕೇಸ್ ದಾಖಲಿಸಬೇಕು ಮತ್ತು ವಿದ್ಯಾರ್ಥಿನಿಯರಿಗೆ ಎಲ್ಲರಂತೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುವಂತೆ ಮಾಡಬೇಕೆಂದು ಮನವಿ ಮಾಡಲಾಯಿತು.
ಇದರ ಪ್ರತಿಗಳನ್ನು ಶಾಲಾ ಶಿಕ್ಷಣ & ಸಾಕ್ಷರತೆ ಇಲಾಖೆ ಅಧಿಕಾರಿ, ಮಾನ್ಯ ಶಿಕ್ಷಣ ಸಚಿವರಿಗೆ, ಮುಖ್ಯ ಮಂತ್ರಿ ಗಳಿಗೆ, ರಾಜ್ಯಪಾಲರಿಗೆ ಇಮೇಲ್ ಮುಖಾಂತರ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಕ್ಷೇತ್ರಾಧ್ಯಕ್ಷರಾದ ಶಮಾ ಆಲಿ ಉಜಿರೆ, ನಸೀಮಾ ಬೆಳ್ತಂಗಡಿ, ಸೌದಾ ಬೆಳ್ತಂಗಡಿ ಉಪಸ್ಥಿತರಿದ್ದರು.