janadhvani

Kannada Online News Paper

ವಿಧಾನಸಭೆ: ಸಭಾಧ್ಯಕ್ಷರ ಪೀಠಕ್ಕೆ ಅಗೌರವ-18 ಬಿಜೆಪಿ ಶಾಸಕರು ಅಮಾನತು

ಈ ಶಾಸಕರು ಅರುತಿಂಗಳೊಳಗೆ ನಡೆಯುವ ಯಾವುದೇ ಅಧಿವೇಶನದಲ್ಲಿ ಭಾಗಿಯಾಗುವಂತಿಲ್ಲ.

ಬೆಂಗಳೂರು: ವಿಧಾನಸಭೆಯಲ್ಲಿ ಸಭಾಧ್ಯಕ್ಷರ ಪೀಠಕ್ಕೆ ಮುತ್ತಿಗೆ ಹಾಕಿ, ಕಲಾಪಕ್ಕೆ ಅಡ್ಡಿಪಡಿಸಿದ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಲಾಗಿದೆ. ಈ ಶಾಸಕರು ಅರುತಿಂಗಳೊಳಗೆ ನಡೆಯುವ ಯಾವುದೇ ಅಧಿವೇಶನದಲ್ಲಿ ಭಾಗಿಯಾಗುವಂತಿಲ್ಲ.

ಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ಈ ಆದೇಶ ಹೊರಡಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಹನಿಟ್ರ್ಯಾಪ್‌ ಆರೋಪನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು. ಕಲಾಪ ನಡೆಸಲು ಅವಕಾಶ ಕೊಡಿ ಎಂದು ಖಾದರ್‌ ಅವರು ಮನವಿ ಮಾಡಿಕೊಂಡರೂ ಪಟ್ಟು ಬಿಡಲಿಲ್ಲ.

ಗದ್ದಲ ನಿಯಂತ್ರಣಕ್ಕೆ ಬಾರದ ಕಾರಣ ಕಲಾಪ ಮುಂದೂಡಲಾಗಿತ್ತು. ಸಂಜೆ 4.10ಕ್ಕೆ ಕಲಾಪ ಆರಂಭವಾಯಿತು. ಸಭಾಧ್ಯಕ್ಷರ ಪೀಠದ ಗೌರವಕ್ಕೆ ಈ 18 ಶಾಸಕರು ಅಗೌರವ ತರುವ ರೀತಿಯಲ್ಲಿ ನಡೆದುಕೊಂಡಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ ಎಂದು ಸಭಾಧ್ಯಕ್ಷರು ಪ್ರಕಟಿಸಿದರು.

ಹೆಸರಿಸಿದ ಎಲ್ಲ 18 ಶಾಸಕರನ್ನು ಆರು ತಿಂಗಳ ಅವಧಿಗೆ ಸದನದಿಂದ ಅಮಾನತು ಮಾಡುವಂತೆ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು ಪ್ರಸ್ತಾವ ಮಂಡಿಸಿದರು. ಅದನ್ನು ಸ್ಪೀಕರ್ ಧ್ಚನಿಮತಕ್ಕೆ ಹಾಕಿದರು. ಗದ್ದಲದ ಮಧ್ಯೆಯೇ ಧ್ವನಿಮತದ ಮೂಲಕ ನಿರ್ಣಯ ಅಂಗೀರಿಸಲಾಯಿತು.

ಅಮಾನತುಗೊಂಡಿರುವ ಎಲ್ಲ 18 ಸದಸ್ಯರಿಗೆ ಸ್ವಯಂಪ್ರೇರಿತವಾಗಿ ಸದನದಿಂದ ಹೊರ ಹೋಗುವಂತೆ ಮನವಿ ಮಾಡಿರುವ ಸಭಾಧ್ಯಕ್ಷರು, ಹತ್ತು ನಿಮಿಷಗಳ ಕಾಲ ಕಲಾಪ ಮುಂದೂಡಿದ್ದಾರೆ. ಅವರು ಸ್ವಯಂಪ್ರೇರಿತವಾಗಿ ಹೊರ ಹೋಗದಿದ್ದರೆ ಮಾರ್ಷಲ್‌ಗಳನ್ನು ಬಳಸಿ ಹೊರಹಾಕುವ ಸಾಧ್ಯತೆ ಇದೆ.

ಅಮಾನತ್ತು ಅವಧಿಯಲ್ಲಿ ಈ ಪರಿಣಾಮಗಳು ಜಾರಿಯಲ್ಲಿರುತ್ತವೆ.
1. ಅವರುಗಳು ವಿಧಾನಸಭೆಯ ಸಭಾಂಗಣ, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವಂತಿಲ್ಲ.
2. ಅವರು ಸದಸ್ಯರಾಗಿರುವ ವಿಧಾನಮಂಡಲದ/ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಸಭೆಗಳಲ್ಲಿಯೂ ಭಾಗವಹಿಸುವಂತಿಲ್ಲ.
3. ವಿಧಾನ ಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಅವರುಗಳ ಹೆಸರಿನಲ್ಲಿ ಯಾವುದೇ ವಿಷಯವನ್ನು ನಮೂದು ಮಾಡತಕ್ಕದಲ್ಲ.
4. ಅಮಾನತ್ತಿನ ಅವಧಿಯಲ್ಲಿ ಅವರುಗಳು ನೀಡುವ ಯಾವುದೇ ಸೂಚನೆಗಳನ್ನು ಸ್ವೀಕರಿಸಲಾಗುವುದಿಲ್ಲ.
5. ಅಮಾನತ್ತಿನ ಅವಧಿಯಲ್ಲಿ ನಡೆಯುವ ಸಮಿತಿಗಳ ಚುನಾವಣೆಯಲ್ಲಿ ಅವರುಗಳು ಮತದಾನ ಮಾಡುವಂತಿಲ್ಲ.
6. ಅಮಾನತ್ತಿನ ಅವಧಿಯಲ್ಲಿ ಅವರುಗಳು ಯಾವುದೇ ದಿನಭತ್ಯೆಯನ್ನು ಪಡೆಯಲು ಅರ್ಹರಿರುವುದಿಲ್ಲ.

ಅಮಾನತುಗೊಂಡ ಸದಸ್ಯರು

  1. ದೊಡ್ಡನಗೌಡ ಪಾಟೀಲ
  2. ಡಾ. ಸಿ.ಎನ್‌. ಅಶ್ವಥನಾರಾಯಣ
  3. ಎಸ್‌.ಆರ್‌. ವಿಶ್ವನಾಥ್‌
  4. ಬಿ.ಎ. ಬಸವರಾಜ್
  5. ಎಂ. ಆರ್‌. ಪಾಟೀಲ್‌
  6. ಚನ್ನಬಸಪ್ಪ
  7. ಬಿ. ಸುರೇಶಗೌಡ
  8. ಉಮಾನಾಥ ಎ. ಕೋಟ್ಯಾನ್‌
  9. ಶರಣು ಸರಲಗರ
  10. ಸಿ.ಕೆ. ರಾಮಮೂರ್ತಿ
  11. ಬಿ.ಬಿ ಹರೀಶ್‌
  12. ಮುನಿರತ್ನ
  13. ಡಾ. ವೈ. ಭರತ್‌ ಶೆಟ್ಟಿ
  14. ಬಸವರಾಜ ಮತ್ತಿಮೂಡ್‌
  15. ಡಾ. ಚಂದ್ರು ಲಮಾಣಿ
  16. ಡಾ. ಶೈಲೇಂದ್ರ ಬೆಲ್ದಾಳೆ
  17. ಯಶಪಾಲ್ ಎ. ಸುವರ್ಣ
  18. ಧೀರಜ್‌ ಮುನಿರಾಜು