ರಿಯಾದ್: ಸೌದಿ ಅರೇಬಿಯಾದಲ್ಲಿ ನಿನ್ನೆ ನಡೆದ ವಾಹನ ಅಪಘಾತದಲ್ಲಿ ಒಂಬತ್ತು ಮಂದಿ ಭಾರತೀಯರು ಸೇರಿದಂತೆ ಕನಿಷ್ಠ 15 ಜನರು ಮೃತಪಟ್ಟಿದ್ದಾರೆ. ಸೌದಿ ಅರೇಬಿಯಾದ ನೈಋತ್ಯ ಪ್ರಾಂತ್ಯದ ಜಿಝಾನ್‌ನಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್‌ಗೆ ಟ್ರೇಲರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಈ ಘಟನೆ ಸೋಮವಾರ ಬೆಳಿಗ್ಗೆ ಅರಾಮ್ಕೊ ರಿಫೈನರಿ ರಸ್ತೆಯಲ್ಲಿ ನಡೆದಿದೆ. ಮೃತರಲ್ಲಿ 15 ಮಂದಿಯೂ ಜುಬೈಲ್ ಎಸಿಐಸಿ ಕಂಪನಿಯ ಉದ್ಯೋಗಿಗಳಾಗಿದ್ದರು. ಮೃತಪಟ್ಟವರಲ್ಲಿ ಮೂವರು ನೇಪಾಳಿಗಳು ಮತ್ತು ಮೂವರು ಘಾನಾದವರು ಸೇರಿದ್ದಾರೆ. ಗಂಭೀರವಾಗಿ ಗಾಯಗೊಂಡ 11 ಜನರನ್ನು ಜಿಝಾನ್ ಮತ್ತು ಅಬಹಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಅರಾಮ್ಕೊ ಯೋಜನೆಯ ಕೆಲಸದ ಸ್ಥಳಕ್ಕೆ 26 ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಎಸಿಐಸಿ ಸರ್ವಿಸ್ ಕಂಪನಿಗೆ ಸೇರಿದ ಮಿನಿ ಬಸ್ ಅಪಘಾತಕ್ಕೀಡಾಗಿದೆ. ನಾಗರಿಕ ರಕ್ಷಣಾ ದಳದ ನೇತೃತ್ವದಲ್ಲಿ ಸಂಪೂರ್ಣವಾಗಿ ನಾಶವಾದ ಮಿನಿಬಸ್‌ನಿಂದ ಮೃತದೇಹಗಳು ಮತ್ತು ಗಾಯಾಳುಗಳನ್ನು ಹೊರತೆಗೆಯಲಾಯಿತು. 15 ಜನರು ಸ್ಥಳದಲ್ಲೇ ಮೃತಪಟ್ಟಿದ್ದರು.
ಮೃತರನ್ನು ವಿಷ್ಣು ಪ್ರಸಾದ್ ಪಿಳ್ಳೈ(ಕೇರಳ 31 ವರ್ಷ), ಹೇಶ್ ಚಂದ್ರ, ಮುಝಾಫರ್ ಹುಸೈನ್ ಖಾನ್ ಇಮ್ರಾನ್, ಪುಷ್ಕರ್ ಸಿಂಗ್ ದಾಮಿ, ಸಖಲೈನ್ ಹೈದರ್, ತಾರಿಕ್ ಆಲಂ ಮುಹಮ್ಮದ್ ಝಹೀರ್ (ಬಿಹಾರ, 46 ವರ್ಷ), ಮುಹಮ್ಮದ್ ಮೊಹ್ತಶಂ ರಝಾ (ಬಿಹಾರ, 27 ವರ್ಷ), ದಿನಕರ್ ಬಾಯಿ ಹರಿದೈ ಥಂಡಲ್ ಮತ್ತು ರಮೇಶ್ ಕಪೇಲಿ ( ತೆಲಂಗಾಣ, 32) ಮೃತಪಟ್ಟ ಭಾರತೀಯರು ಎಂದು ಗುರುತಿಸಲಾಗಿದೆ.