ರಿಯಾದ್: ಬುರೈದಾದಲ್ಲಿ ಹಠಾತ್ ಅನಾರೋಗ್ಯಕ್ಕೊಳಗಾಗಿ ಮರಣ ಹೊಂದಿದ ಅಬ್ದುಲ್ ಖಾದರ್ ಕಾಟಿಪಳ್ಳ ರವರ ಅಂತ್ಯಕ್ರಿಯೆಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಅಲ್ ಕಸೀಮ್ ಝೋನ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು.
ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಮಾಹಿತಿ ತಿಳಿದ ಕೂಡಲೇ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಅಲ್ ಕಸೀಮ್ ಝೋನ್ ಸಾಂತ್ವನ ಇಲಾಖೆಯ ನಾಯಕರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಚಿಕಿತ್ಸೆ ಫಲಿಸದೆ 11/01/2025ರಂದು ಮರಣ ಹೊಂದಿದ ವಿವರ ತಿಳಿದ ಕೂಡಲೇ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ದಾಖಲೆ ಪತ್ರಗಳನ್ನು ಸಿದ್ಧಪಡಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿದ್ದಾರೆ.
ಸೌದಿ ಅರೇಬಿಯಾದಲ್ಲಿ ವಿದೇಶಿಗಳು ಯಾರಾದರೂ ಮರಣಹೊಂದಿದರೆ ಅವರ ಅಂತ್ಯಕ್ರಿಯೆಗೆ ಹಲವಾರು ಕಾನೂನಾತ್ಮಕ ದಾಖಲೆ ಪತ್ರಗಳನ್ನು ಮಾಡಬೇಕಾಗಿದ್ದು, ಅದರಂತೆ ಭಾರತೀಯ ರಾಯಭಾರಿ ಕಚೇರಿ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಕಡೆಗಳಿಂದ ಬೇಕಾದ ಕಡತಗಳನ್ನು ಸರಿಪಡಿಸಬೇಕಾಗಿದೆ.
ಈ ನಿಟ್ಟಿನಲ್ಲಿ ಸೌದಿ ಅರೇಬಿಯಾದ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಸಾಂತ್ವನ ಇಲಾಖೆ ಅಧ್ಯಕ್ಷರಾದ ಭಾಷಾ ಗಂಗಾವಳಿ ಅಲ್ ಕಸೀಮ್ ಕೆಸಿಎಫ್ ಸಾಂತ್ವನ ಇಲಾಖೆ ನಾಯಕರಾದ ತಾಜುದ್ದೀನ್ ಕೆಮ್ಮಾರ, ಸೌದಿ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಅಬ್ದುಲ್ ಕಾದರ್ ಕಣ್ಣಂಗಾರ್, ಮೃತರ ಕುಟುಂಬಸ್ಥರಾದ ಹೈದರ್, ಲತೀಫ್,ಸುಲೈಮಾನ್ ಹಾಗೂ ಇನ್ನಿತರರು ಮುಂಚೂಣಿಯಲ್ಲಿದ್ದುಕೊಂಡು ಎಲ್ಲಾ ಕಾರ್ಯಗಳನ್ನು ಯಾವುದೇ ಕುಂದುಕೊರತೆಗಳಿಲ್ಲದಂತೆ ಚೆನ್ನಾಗಿ ನಿಭಾಯಿಸಿದ್ದಾರೆ. ಊರಿನಲ್ಲಿ ಮೃತರ ಸಹೋದರ ಎಲ್ಲಾ ರೀತಿಯಲ್ಲೂ ಸಹಕರಿಸಿದ್ದಾರೆ.
ಅಲ್ ಕಸೀಮ್ ಬುರೈದ ಅಲ್ ಖಲೀಜ್ ನಲ್ಲಿ ನಡೆದ ದಫನ ಕಾರ್ಯದ ನೇತೃತ್ವವವನ್ನು ಕೆಸಿಎಫ್ ಅಲ್ ಕಸೀಮ್ ಝೋನ್ ದಾಯಿಯಾದ ಯಅ್ ಕೂಬ್ ಸಖಾಫಿ, ಸಂಘಟನಾ ಅಧ್ಯಕ್ಷರಾದ ಮುಸ್ತಫ ಲತೀಫಿ ಹಾಗೂ ಝೋನ್ ಅಧ್ಯಕ್ಷರಾದ ಅಬ್ದುಲ್ ಕರೀಂ ಇಮ್ದಾದಿ ವಹಿಸಿದ್ದರು. ಹಾಗೂ ಕೆಸಿಎಫ್ ನಾಯಕರಾದ ಝೋನ್ ಕೋಶಾಧಿಕಾರಿ ಮುಸ್ತಫ ಹಾಸನ, ಸೆಕ್ಕರ್ ಇಹ್ಸಾನ್ ಅಧ್ಯಕ್ಸರಾದ ಹುಸೈನ್ ಬನ್ನೂರು, ಸೇರಿದಂತೆ ಕೆಸಿಎಫ್ ರಾಷ್ಟ್ರೀಯ, ಝೋನ್ ನಾಯಕರು, ಕಾರ್ಯಕರ್ತರು, ಕುಟುಂಬಸ್ಥರು ಹಾಗೂ ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮೃತರು ಪತ್ನಿ ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.