janadhvani

Kannada Online News Paper

ಕಾಕ್‌ಪಿಟ್‌ನಲ್ಲಿ ಹೊಗೆ: 273 ಪ್ರಯಾಣಿಕರಿದ್ದ ವಿಮಾನ ತುರ್ತು ಭೂಸ್ಪರ್ಶ

ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಪ್ರಯಾಣಿಕರನ್ನು ತಕ್ಷಣವೇ ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

ಸಿಯಾಟಲ್: ಇತ್ತೀಚಿನ ದಿನಗಳಲ್ಲಿ ಒಂದಲ್ಲಾ ಒಂದು ರೀತಿಯ ವಿಮಾನ ಅಪಘಾತಗಳ ಬಗ್ಗೆ ವರದಿಗಳು ಹೆಚ್ಚಾಗಿದೆ. ಹವಾಮಾನ ವೈಪರೀತ್ಯದಿಂದ ಹಿಡಿದು, ದೈತ್ಯಾಕಾರದ ವಿಮಾನಗಳಿಗೆ ಸಣ್ಣಪುಟ್ಟ ಹಕ್ಕಿಗಳು ಡಿಕ್ಕಿಯಾದ ಪರಿಣಾಮ ಅಪಘಾತ ಸಂಭವಿಸಿರುವ ಬಗ್ಗೆಯೂ ವರದಿಗಳು ಬಂದಿವೆ.

ಇದೀಗ, ಕಾಕ್‌ಪಿಟ್‌ನಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೇಕ್ ಆಫ್ ಆಗಿದ್ದ ವಿಮಾನವು ಮರಳಿ ಅದೇ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬಗ್ಗೆ ವರದಿಯಾಗಿದೆ.
ಅಮೇರಿಕಾ ಸಂಯುಕ್ತ ಸಂಸ್ಥಾನದ ಹವಾಯಿ ರಾಜ್ಯದ ರಾಜಧಾನಿ ಹೊನೊಲುಲುವಿಗೆ ಹೊರಟಿದ್ದ ಹವಾಯಿಯನ್ ಏರ್‌ಲೈನ್ಸ್ ವಿಮಾನವು ಮತ್ತೆ ಸಿಯಾಟಲ್‌ಗೆ ಮರಳಿದೆ.

ವಿಮಾನದ ಕಾಕ್‌ಪಿಟ್‌ನಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನವನ್ನು ಮರಳಿ ಇಳಿಸಲಾಗಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಹೇಳಿದೆ.
ಏರ್‌ಬಸ್ A330 ಸೋಮವಾರ ಮಧ್ಯಾಹ್ನ 1 ಗಂಟೆಗೆ ಸಿಯಾಟಲ್-ಟಕೋಮಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತ್ತು. ವಿಮಾನದಲ್ಲಿ 273 ಪ್ರಯಾಣಿಕರು ಮತ್ತು 10 ಸಿಬ್ಬಂದಿಗಳಿದ್ದರು. ಹೊನೊಲುಲುವಿನ ಡೇನಿಯಲ್ ಕೆ. ಇನೌಯೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾರಾಟ ನಡೆಸಿತು. ಬಳಿಕ

ಕಾಕ್‌ಪಿಟ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ.
ಘಟನೆಯ ಕುರಿತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತನಿಖೆಯನ್ನು ಪ್ರಾರಂಭಿಸಿದೆ. ಕ್ಯಾಪ್ಟನ್ ತುರ್ತು ಪರಿಸ್ಥಿತಿಯನ್ನು ವರದಿ ಮಾಡಿದ ನಂತರ, ಸಿಯಾಟಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಬಂದಿಳಿದ ತಕ್ಷಣ ಅಗ್ನಿಶಾಮಕ ಮತ್ತು ವೈದ್ಯಕೀಯ ಸಿಬ್ಬಂದಿಗಳು ವಿಮಾನಕ್ಕೆ ಧಾವಿಸಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಪ್ರಯಾಣಿಕರನ್ನು ತಕ್ಷಣವೇ ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ನಂತರ ಸಿಯಾಟಲ್ ಅಗ್ನಿಶಾಮಕ ಇಲಾಖೆ ವಿಮಾನವನ್ನು ಪರಿಶೀಲಿಸಿತು. ಆದರೆ, ಯಾವುದೇ ಹೊಗೆ ಅಥವಾ ವಾಸನೆ ಪತ್ತೆಯಾಗಿಲ್ಲ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

error: Content is protected !! Not allowed copy content from janadhvani.com