ಸಿಯೋಲ್: ದಕ್ಷಿಣ ಕೊರಿಯಾದ ದಕ್ಷಿಣದಲ್ಲಿರುವ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿ ಉರಿದ ಪರಿಣಾಮ 120 ಕ್ಕೂ ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆಂದು ರಾಯಿಟರ್ಸ್ ವರದಿ ಮಾಡಿದೆ. ಅಪಘಾತದಲ್ಲಿ ಇಬ್ಬರು ಪಾರಾಗಿದ್ದು, ಉಳಿದಂತೆ 179 ಮಂದಿ ಮೃತಪಟ್ಟಿದ್ದಾರೆಂದು ಕೆಲವು ಮಾಧ್ಯಮಗಳು ವರದಿ ಮಾಡಿದೆ. ಅಧಿಕೃತ ಮಾಹಿತಿಯು ಇನ್ನಷ್ಟೇ ಬರಬೇಕಾಗಿದೆ.
175 ಪ್ರಯಾಣಿಕರು ಮತ್ತು 6 ಮಂದಿ ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಲ್ಯಾಂಡಿಂಗ್ ನಂತರ ರನ್‌ವೇಯಿಂದ ಸ್ಕಿಡ್ ಆಗಿ ಕಾಂಕ್ರಿಟ್ ತಡೆಗೋಡೆಗೆ ಅಪ್ಪಳಿಸಿದಾಗ ಬೆಂಕಿ ಆವರಿಸಿದೆ. ಅದರ ಲ್ಯಾಂಡಿಂಗ್ ಗೇರ್ ಅನ್ನು ನಿಯೋಜಿಸಲು ವಿಫಲವಾದಾಗ ಈ ದುರ್ಘಟನೆ ನಡೆದಿದೆ ಎಂದು ದೇಶದ ತುರ್ತು ಕಚೇರಿ ಹೇಳಿದೆ.
ಇದು ದೇಶದಲ್ಲಿ ಇದುವರೆಗೆ ನಡೆದ ವಿಪತ್ತುಗಳಲ್ಲಿ ಅತ್ಯಂತ ಕೆಟ್ಟ ದುರ್ಘಟನೆಯಾಗಿದೆ ಎಂದು ರಾಷ್ಟ್ರೀಯ ಅಗ್ನಿಶಾಮಕ ಸಂಸ್ಥೆ ಹೇಳಿದೆ. ಬೆಂಕಿಯನ್ನು ನಿಯಂತ್ರಿಸಲು 32 ಅಗ್ನಿಶಾಮಕ ವಾಹನಗಳು ಮತ್ತು ಹಲವಾರು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ಅದು ಹೇಳಿದೆ.
YTN ಟೆಲಿವಿಷನ್ ಪ್ರಸಾರ ಮಾಡಿದ ದುರ್ಘಟನೆಯ ದೃಶ್ಯಾವಳಿಗಳಲ್ಲಿ ಜೆಜು ಏರ್ ವಿಮಾನವು ಜಾರಿಬೀಳುವುದನ್ನು ತೋರಿಸಿದೆ. ಸ್ಪಷ್ಟವಾಗಿ ಅದರ ಲ್ಯಾಂಡಿಂಗ್ ಗೇರ್ ಇನ್ನೂ ಮುಚ್ಚಲ್ಪಟ್ಟಿದೆ ಮತ್ತು ಕಾಂಕ್ರೀಟ್ ಗೋಡೆಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 9:03ಕ್ಕೆ ಈ ಘಟನೆ ನಡೆದಿದೆ ಎಂದು ಸಾರಿಗೆ ಸಚಿವಾಲಯ ತಿಳಿಸಿದೆ.
ಸ್ಥಳೀಯ ಟಿವಿ ಚಾನೆಲ್ ಗಳು ಬೆಂಕಿ ಜ್ವಾಲೆಯಿಂದ ಸುತ್ತುವರಿದಿರುವ ವಿಮಾನದಿಂದ ದಟ್ಟ ಹೊಗೆಯ ದೃಶ್ಯಗಳನ್ನು ಪ್ರಸಾರ ಮಾಡಿವೆ. ಮುವಾನ್‌ನಲ್ಲಿನ ತುರ್ತು ನಿಗಾ ಘಟಕದ ಅಧಿಕಾರಿಗಳು ಬೆಂಕಿಗೆ ಕಾರಣವನ್ನು ಪರಿಶೀಲಿಸುತ್ತಿದ್ದಾರೆ. ವಿಮಾನವು ಬ್ಯಾಂಕಾಕ್‌ನಿಂದ ಹಿಂತಿರುಗುತ್ತಿತ್ತು ಮತ್ತು ಅದರ ಪ್ರಯಾಣಿಕರಲ್ಲಿ ಇಬ್ಬರು ಥಾಯ್ ಪ್ರಜೆಗಳು ಸೇರಿದ್ದಾರೆ ಎಂದು ಸಾರಿಗೆ ಸಚಿವಾಲಯ ತಿಳಿಸಿದೆ.
ಥಾಯ್ಲೆಂಡ್‌ನ ಪ್ರಧಾನಿ ಪೇಟೊಂಗ್ಟಾರ್ನ್ ಶಿನವತ್ರಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಮೂಲಕ ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ನೆರವು ನೀಡುವಂತೆ ವಿದೇಶಾಂಗ ಸಚಿವಾಲಯಕ್ಕೆ ಆದೇಶ ನೀಡಿರುವುದಾಗಿ ವರದಿಯಾಗಿದೆ.
ದಕ್ಷಿಣ ಕೊರಿಯಾದ ವಿಮಾನಯಾನ ಇತಿಹಾಸದಲ್ಲಿ ಇದು ಅತ್ಯಂತ ಭೀಕರ ದುರಂತಗಳಲ್ಲಿ ಒಂದಾಗಿದೆ. 1997ರಲ್ಲಿ ಕೊರಿಯನ್ ಏರ್‌ಲೈನ್ ವಿಮಾನವು ಗುವಾಮ್‌ನಲ್ಲಿ ಪತನಗೊಂಡು 228 ಜನರು ಸಾವನ್ನಪ್ಪಿದ್ದು ದಕ್ಷಿಣ ಕೊರಿಯಾದ ದೊಡ್ಡ ಪ್ರಮಾಣದ ವಾಯು ದುರಂತವನ್ನು ಈ ಹಿಂದೆ ಕಂಡಿತ್ತು.
ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ದೊಡ್ಡ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿರುವ ವೇಳೆ ಈ ಘಟನೆ ಸಂಭವಿಸಿದೆ. ಕಳೆದ ಶುಕ್ರವಾರ ದಕ್ಷಿಣ ಕೊರಿಯಾದ ಶಾಸಕರು ಹಂಗಾಮಿ ಅಧ್ಯಕ್ಷ ಹಾನ್ ಡಕ್-ಸೂ ಅವರನ್ನು ದೋಷಾರೋಪಣೆ ಮಾಡಿ ಅಮಾನತುಗೊಳಿಸಿದ್ದರು. ನಂತರ ಉಪಪ್ರಧಾನ ಮಂತ್ರಿ ಚೋಯ್ ಸಾಂಗ್-ಮೋಕ್ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಚೋಯ್ ಅವರು ಮುವಾನ್‌ಗೆ ಹೋಗುವ ಮೊದಲು ಪ್ರಯಾಣಿಕರು ಮತ್ತು ಸಿಬ್ಬಂದಿ ರಕ್ಷಣೆಗೆ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ಅಪಘಾತದ ಕುರಿತು ಚರ್ಚಿಸಲು ಹಿರಿಯ ಅಧ್ಯಕ್ಷೀಯ ಸಿಬ್ಬಂದಿ ನಡುವೆ ನಡೆಯುವ ತುರ್ತುಸಭೆಗೆ ಅಧ್ಯಕ್ಷರ ಮುಖ್ಯ ಕಾರ್ಯದರ್ಶಿ ಚುಂಗ್ ಜಿನ್-ಸುಕ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಯೂನ್ ಅವರ ಕಚೇರಿ ತಿಳಿಸಿದೆ.