janadhvani

Kannada Online News Paper

ಕಡಿಮೆ ದರದಲ್ಲಿ ಉಮ್ರಾ ಝಿಯಾರತ್: ಮದೀನಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ಯಾತ್ರಿಕರು

ಇಂಥಾ ಮೋಸದ ಜಾಲಗಳ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ, ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಪರ್ಯಾಸ. ಈ ಬಗ್ಗೆ ಪ್ರತೀ ಮೊಹಲ್ಲಾಗಳಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ.

ಮದೀನಾ ಮುನವ್ವರಃ: ಕಡಿಮೆ ವೆಚ್ಚದಲ್ಲಿ ಉಮ್ರಾ ಝಿಯಾರತ್ ಎಂಬ ಜಾಹೀರಾತುಗಳಿಗೆ ಮಾರು ಹೋಗಿ ನೂರಾರು ಮಂದಿ ಉಮ್ರಾ ಯಾತ್ರಿಕರು ಮದೀನಾದಲ್ಲಿ ಸಿಲುಕಿರುವ ಬಗ್ಗೆ ವರದಿಯಾಗಿದೆ.

ಜನರನ್ನು ಉಮ್ರಾ ಯಾತ್ರೆಗೆ ಕರೆದೊಯ್ದ ಮಂಗಳೂರು ಮೂಲದ ಟ್ರಾವೆಲ್ಸ್‌ ಏಜೆನ್ಸಿಯೊಂದು, ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಡದೆ ಅರ್ಧ ದಾರಿಯಲ್ಲೆ ಕೈಬಿಟ್ಟ ಪರಿಣಾಮ ಸುಮಾರು 160ಕ್ಕೂ ಹೆಚ್ಚು ಜನರು ಸೌದಿ ಅರೇಬಿಯಾದ ಮದೀನಾದಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಬಕದಲ್ಲಿ ಇರುವ ಮೊಹಮ್ಮದೀಯ ಹಜ್ ಆಂಡ್ ಉಮ್ರಾ ಟ್ರಾವೆಲ್ಸ್‌ ಅಡಿಯಲ್ಲಿ ಡಿಸೆಂಬರ್ 13 ಮತ್ತು 15 ನಡುವೆ ಸುಮಾರು 160 ಜನರು ಉಮ್ರಾ ಯಾತ್ರೆಗೆಂದು ಕೇರಳದ ಕಣ್ಣೂರು, ಕ್ಯಾಲಿಕಟ್‌ ವಿಮಾನ ನಿಲ್ದಾಣಗಳ ಮೂಲಕ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಿದ್ದರು. ಯಾತ್ರಾರ್ಥಿಗಳಲ್ಲಿ ಮಂಗಳೂರು, ಹಾಸನ, ಕೊಡಗು ಸೇರಿದಂತೆ ಹಲವಾರು ಜಿಲ್ಲೆಗಳ ಜನರಿದ್ದರು ಎಂದು ತಿಳಿದು ಬಂದಿದೆ.

ಅದಾಗ್ಯೂ, ಯಾತ್ರಾರ್ಥಿಗಳು ಮಕ್ಕಾ ಮತ್ತು ಮದೀನಾದಲ್ಲಿ ‘ಉಮ್ರಾ’ ಆರಾಧನೆಯನ್ನು ಮುಗಿಸಿ ಡಿಸೆಂಬರ್ 28ರ ನಂತರ ಭಾರತಕ್ಕೆ ವಾಪಸಾಗಬೇಕಿತ್ತು. ಆದರೆ ಈ ನಡುವೆ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗಿರುವ ಟ್ರಾವೆಲ್ಸ್‌ ಏಜೆನ್ಸಿಯ ಮುಖ್ಯಸ್ಥ ಅಶ್ರಫ್ ಮುಸ್ಲಿಯಾರ್ ಪರ್ಪುಂಜ ನಾಪತ್ತೆಯಾಗಿದ್ದಾರೆಂದು ಹೇಳಲಾಗಿದೆ. ಟ್ರಾವೆಲ್ ಏಜೆನ್ಸಿಯು ಪ್ರತಿ ಯಾತ್ರಾರ್ಥಿಯಿಂದ 65 ಸಾವಿರದಿಂದ 70 ಸಾವಿರದ ವರೆಗೆ ಪೂರ್ಣ ಹಣವನ್ನು ಪಡೆದಿದೆ ಎಂದು ಯಾತ್ರಾರ್ಥಿಗಳು ತಿಳಿಸಿದ್ದಾರೆ.

ಡಿಸೆಂಬರ್ 28ರಂದು ಟ್ರಾವೆಲ್ಸ್ ಏಜನ್ಸಿಯ ಮುಖ್ಯಸ್ಥ ನಾಪತ್ತೆಯಾದ ನಂತರ, ಅವರ ಇಬ್ಬರು ಸಹಾಯಕರು, ವಿಮಾನದ ಟಿಕೆಟ್ ದರ ಏರಿಕೆಯಾಗಿದೆ ಎಂದು ಸಬೂಬು ನೀಡಿ ಭಾರತಕ್ಕೆ ಹಿಂತಿರುಗುವ ದಿನವನ್ನು ಮುಂದೂಡುತ್ತಿದ್ದು, ಇದೀಗ ಸ್ವತಃ ಟಿಕೆಟ್ ಖರೀದಿಸುವಂತೆ ಕೇಳಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಈ ನಡುವೆ ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಭಾರತೀಯರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್‌) ಸಂತ್ರಸ್ತ ಯಾತ್ರಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿದೆ ಎಂದು ಅದರ ಪದಾಧಿಕಾರಿಗಳು ತಿಳಿಸಿದ್ದಾರೆ.160 ಜನರಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆ ಮಾಡಲಾಗಿದೆ.

ಕಡಿಮೆ ವೆಚ್ಚದಲ್ಲಿ ಉಮ್ರಾ ಎಂಬ ಜಾಹೀರಾತು ನೀಡುವ ಮುಹಮ್ಮದಿಯ್ಯ ಉಮ್ರಾ,ಅಮಾನತ್ ತೈಬಾ ,ತೈಬಾ ಉಮ್ರಾ ಬಂಗ್ಲಗುಡ್ಡೆ ಮುಂತಾದ ಗ್ರೂಪಿನ ಮನಮೋಹಕ ವಾಗ್ದಾನಗಳಿಗೆ ಯಾರೂ ಬಲಿಯಾಗದಿರಿ ಎಂದು ಮಕ್ಕಾ ಮತ್ತು ಮದೀನಾದಲ್ಲಿರುವ ಸಾಮಾಜಿಕ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಇಂಥಾ ಮೋಸದ ಜಾಲಗಳ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ, ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಪರ್ಯಾಸ. ಈ ಬಗ್ಗೆ ಪ್ರತೀ ಮೊಹಲ್ಲಾಗಳಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ.

ಉಮ್ರಾ ಯಾತ್ರೆ ಕೈಗೊಳ್ಳಲು ಬಯಸುವವರು ಹೆಸರಾಂತ ಸಂಸ್ಥೆಗಳಲ್ಲಿ ನುರಿತ ಅಮೀರರ ನೇತೃತ್ವದಲ್ಲಿ ಹಜ್ ಮತ್ತು ಉಮ್ರಾ ಯಾತ್ರೆಗೆ ಸಿದ್ಧತೆ ನಡೆಸುವಂತೆ ಮಕ್ಕಾ ಮತ್ತು ಮದೀನಾದಲ್ಲಿರುವ ಸಾಮಾಜಿಕ ಕಾರ್ಯಕರ್ತರು ವಿನಂತಿಸಿದ್ದಾರೆ.

error: Content is protected !! Not allowed copy content from janadhvani.com