ತ್ರಿಶೂರ್,ಡಿ.29: ಸುನ್ನಿ ಸಿದ್ಧಾಂತಗಳ ಬಗ್ಗೆ ಮಾತನಾಡುವ ಮತ್ತು ನಡೆದುಕೊಳ್ಳುವ ಕಾರಣಕ್ಕಾಗಿ ಯಾರನ್ನೂ ಪ್ರತ್ಯೇಕಿಸಲು ಅಥವಾ ಮಾನಹಾನಿ ಮಾಡಲು ಅವಕಾಶ ನೀಡಬಾರದು ಎಂದು ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು. ಅವರು, ಕಳೆದ ಮೂರು ದಿನಗಳಿಂದ ಕೇರಳದ ತ್ರಿಶೂರ್ ನಲ್ಲಿ ಕೇರಳ ಎಸ್‌ವೈಎಸ್ ನ ಪ್ಲಾಟಿನಮ್ ವರ್ಷದ ಭಾಗವಾಗಿ ನಡೆಯುತ್ತಿದ್ದ ಕೇರಳ ಯೂತ್ ಕಾನ್ಫರೆನ್ಸ್ ನ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
‘ಸುನ್ನಿ ಆದರ್ಶಗಳನ್ನು ರಕ್ಷಿಸಲು ಸಮಸ್ತದ ನೇತೃತ್ವದಲ್ಲಿ ನಾವು ಬಲವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಬಹುತ್ವ ಪರಂಪರೆಯನ್ನು ಅಂಗೀಕರಿಸುವ ರಾಜಕೀಯ ಮತ್ತು ಸಾಂಸ್ಕೃತಿಕ ಸಮಾಜವೂ ಇದನ್ನು ಬೆಂಬಲಿಸಬೇಕು. ಈ ವಿಚಾರದಲ್ಲಿ ಸುನ್ನಿ ಸಂಘಟನೆಗಳು ಒಟ್ಟಾಗಿ ನಿಲ್ಲಲಿದೆ. ವಿವಿಧ ಸಂಘಟನೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸುನ್ನಿಗಳ ಮಧ್ಯೆ ಈಗ ಯಾವುದೇ ಭಿನ್ನತೆಯಿಲ್ಲ. ಸುನ್ನಿ ಸಿದ್ಧಾಂತವನ್ನು ದುರ್ಬಲಗೊಳಿಸಲು ಯಾರೂ ಪಿತೂರಿ ನಡೆಸಬಾರದು. ಮತೀಯವಾದ ಯಾರಿಗೂ ಒಳ್ಳೆಯದಲ್ಲ. ಸಂಘಟನೆಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.ಆದರೆ ಏಕತೆಗಾಗಿ ಕೆಲಸ ಮಾಡುವೆವು. ಸುನ್ನಿ ಸಿದ್ಧಾಂತವನ್ನು ಹೇಳಿದ ಕಾರಣಕ್ಕೆ ವಿದ್ವಾಂಸರು ಮತ್ತು ಸಯ್ಯದ್‌ರನ್ನು ಸಾರ್ವಜನಿಕವಾಗಿ ಅವಮಾನಿಸಬಾರದು’ ಎಂದು ಕಾಂತಪುರಂ ಹೇಳಿದರು.
‘ಕೇರಳದಲ್ಲಿ ಮುಸ್ಲಿಂ ಸಂಪ್ರದಾಯ ಸುನ್ನಿಗಳದ್ದಾಗಿದೆ. ಅದರಲ್ಲಿ ಒಡಕು, ಭಿನ್ನತೆಯನ್ನು ಮೂಡಿಸಲು ಯತ್ನಿಸಿದವರು ಮುಜಾಹಿದ್ ಮತ್ತು ಮೌದೂದಿಗಳಾಗಿದ್ದಾರೆ.ದೇಶದ ಸಾಂಸ್ಕೃತಿಕ ಸಂಬಂಧಗಳಿಗೆ ಅನುಗುಣವಾಗಿ ಕೆಲಸ ಮಾಡುವ ಶಾಂತಿಯುತ ಮಾರ್ಗಗಳನ್ನು ಅಳವಡಿಸಿಕೊಂಡವರಾಗಿದ್ದಾರೆ ಸುನ್ನಿಗಳು. ನಾವು ದೇಶದ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ನಿಯಮಗಳನ್ನು ಒಪ್ಪಿಕೊಂಡು ಮುಂದುವರಿಯುತ್ತಿದ್ದೇವೆ.
ಧಾರ್ಮಿಕ ರಾಷ್ಟ್ರ ನಿರ್ಮಾಣ, ರಾಷ್ಟ್ರೀಯ ಆಡಳಿತವನ್ನು ಸಾಧಿಸುವುದು ಅಥವಾ ಆಡಳಿತಗಾರರನ್ನು ಉರುಳಿಸುವಂತಹ ಯಾವುದೇ ಪ್ರತಿಗಾಮಿ ವಿಚಾರಗಳು ನಮ್ಮ ಗುರಿಯೋ, ನಂಬಿಕೆಯೋ ಅಲ್ಲ. ಆದರೆ ಮೌದೂದಿಯವರು ಧಾರ್ಮಿಕ ಮೌಲ್ಯಗಳನ್ನು ತಪ್ಪಾಗಿ ಅರ್ಥೈಸುವವರು ಮತ್ತು ಧಾರ್ಮಿಕ ಸಂಖ್ಯಾಶಾಸ್ತ್ರವನ್ನು ಉತ್ತೇಜಿಸುವವರಾಗಿದ್ದಾರೆ. ಮುಜಾಹಿದ್ ಸಂಘಟನೆಗಳು ಕೂಡ ಭಿನ್ನತೆಯ ಕಲ್ಪನೆಗಳನ್ನು ಹೊಂದಿವೆ. ಸಾಮಾನ್ಯ ಸಮಾಜದಲ್ಲಿ ಕೋಮುವಾದವನ್ನು ಉತ್ತೇಜಿಸುವ ಮತ್ತು ರಾಜಕೀಯ ಪಕ್ಷಗಳ ಮೇಲೆ ಪ್ರಭಾವ ಬೀರುವ ಮೂಲಕ ಸುನ್ನಿ ಸಾಂಸ್ಕೃತಿಕ ಸಂಪ್ರದಾಯವನ್ನು ದುರ್ಬಲಗೊಳಿಸುವುದನ್ನು ಎದುರಿಸಲು ಸಮಸ್ತವನ್ನು ರಚಿಸಲಾಗಿದೆ.
ಸುನ್ನಿಗಳ ವಕ್ಫ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಂಪ್ರದಾಯವು ನವೀನ ವಾದಿಗಳಿಗಿದೆ. ಕೆಲವು ವಿವಾದಿತ ಜಮೀನುಗಳು ವಕ್ಫ್ ಅಲ್ಲ ಎಂದು ಕೆಲವು ಕೇಂದ್ರಗಳಿಂದ ಘೋಷಣೆಯಾಗಿರುವುದು ಅದರ ಮುಂದುವರಿದ ಭಾಗವಾಗಿರಬಹುದೇ ಎಂದು ಶಂಕಿಸಬೇಕಿದೆ.
ಕೇರಳದ ಸಾಮಾಜಿಕ ಬಂಧುತ್ವ ಮತ್ತು ಪ್ರಗತಿಗಾಗಿ ಸಮಾನ ಪ್ರಾಮುಖ್ಯತೆಯಿಂದ ಸಮಸ್ತ ಮತ್ತು ಸಂಘಟನೆಗಳು ಕೆಲಸ ಮಾಡಲಿದೆ. ನವಕೇರಳ ನಿರ್ಮಾಣದಲ್ಲಿ ಪಾಲ್ಗೊಳ್ಳುವರು. ಪುತ್ತುಮಲ ಸೇರಿದಂತೆ ಸಂಕಷ್ಟದಲ್ಲಿರುವ ಪ್ರದೇಶಗಳ ಪುನಶ್ಚೇತನದಲ್ಲಿ ಮುಸ್ಲಿಂ ಜಮಾಅತ್ ಮತ್ತು ಎಸ್ ವೈಎಸ್ ಭಾಗಿಯಾಗಲಿದೆ. ಸರ್ಕಾರವು ಪರಿಣಾಮಕಾರಿ ಪುನರ್ನಿರ್ಮಾಣ ಚಟುವಟಿಕೆಗಳನ್ನು ಮುನ್ನಡೆಸಬೇಕು. ‘ಸಾಮಾಜಿಕ ಸಾಮರಸ್ಯವನ್ನು ಸರ್ಕಾರದ ನೀತಿ ಕಾರ್ಯಕ್ರಮವಾಗಿ ಸೇರಿಸಿ ವಿಶೇಷ ಸಚಿವಾಲಯ ರಚಿಸಿ ಕೆಲಸ ಮಾಡಬೇಕು’ ಎಂದು ಕಾಂತಪುರಂ ಹೇಳಿದರು.
ಎಸ್ ವೈಎಸ್ ಕೇರಳ ಯುವಜನ ಸಮಾರೋಪ ಸಮ್ಮೇಳನವನ್ನು ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಿದರು. ಸಮಸ್ತ ಅಧ್ಯಕ್ಷರಾದ ಇ. ಸುಲೈಮಾನ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಅಲಿ ಬಾಫಕಿ ಪ್ರಾರ್ಥನೆಗೈದರು. ವಕ್ಫ್ ಸಚಿವ ವಿ. ಅಬ್ದುರ್ರಹ್ಮಾನ್, ವಿರೋಧ ಪಕ್ಷದ ಉಪನಾಯಕ ಪಿ.ಕೆ.ಕುಂಞಾಲಿಕುಟ್ಟಿ, ಜೋಯ್ ಅಲುಕಾಸ್ ಅತಿಥಿಗಳಾಗಿದ್ದರು. ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಪ್ರ. ಕಾರ್ಯದರ್ಶಿ ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ, ಪೇರೋಡ್ ಅಬ್ದುರಹ್ಮಾನ್ ಸಖಾಫಿ, ಸಿ. ಮುಹಮ್ಮದ್ ಫೈಝಿ, ಸಯ್ಯಿದ್ ತ್ವಾಹಾ ತಂಙಳ್ ಸಖಾಫಿ, ಸುಲೈಮಾನ್ ಸಖಾಫಿ ಮಾಳಿಯೇಕಲ್, ಡಾ. ಮುಹಮ್ಮದ್ ಅಬ್ದುಲ್ ಹಕೀಂ ಅಝ್ಹರಿ, ಸಯ್ಯಿದ್ ಫಝಲ್ ತಂಙಳ್, ರಹ್ಮತುಲ್ಲಾ ಸಖಾಫಿ ಎಳಮರಮ್, ಎನ್.ಎಂ ಸ್ವಾದಿಕ್ ಸಖಾಫಿ, ಎಂ. ಮುಹಮ್ಮದ್ ಸಾದಿಕ್, ಡಾ. ಮುಹಮ್ಮದ್ ಫಾರೂಕ್ ನಈಮಿ, ಫಿರ್ದೌಸ್ ಸಖಾಫಿ ಕಡವತ್ತೂರು ಹಾಗೂ ಸಮೀರ್ ಎರಿಯಾಡ್ ಮುಂತಾದವರು ಮಾತನಾಡಿದರು.