ಸುರತ್ಕಲ್: ಎಂಆರ್ಪಿಎಲ್ – ಕಾನ ರಸ್ತೆಯ ಸುರತ್ಕಲ್ ರೈಲ್ವೇ ಮೇಲ್ಸೇತುವೆ ಕಾಮಗಾರಿ ನಡೆಯಲಿರುವುದರಿಂದ ಡಿ.11ರಿಂದ ಫೆ.8ರ ವರೆಗೆ ತಾತ್ಕಾಲಿಕ ರಸ್ತೆ ಸಂಚಾರ ಬದಲಾಯಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಆದೇಶಿಸಿದ್ದಾರೆ.
ಕೃಷ್ಣಾಪುರ, ಕಾಟಿಪಳ್ಳ ಎಂಆರ್ ಪಿಎಲ್ ಮತ್ತು ಕಾನ ಕಡೆ ಸಂಚರಿಸುವ ಲಘು ವಾಹನಗಳು ಸೂರಜ್ ಇಂಟರ್ ನ್ಯಾಶನಲ್ ಹೋಟೇಲ್ ಬಳಿಯಿಂದ ಬಂಟರ ಭವನ ರಸ್ತೆಯಾಗಿ ಸಂಪರ್ಕಿಸಿ ಅಲ್ಲಿಂದ ಮುಂದುವರಿಯುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಆದರೆ ,ಅತ್ಯಂತ ಕಿರಿದಾದ ಈ ಅಗರ್ಮೈಲ್ ರಸ್ತೆಯಲ್ಲಿ ದ್ವಿಮುಖ ವಾಹನ ಸಂಚಾರ ಸಾಧ್ಯವಲ್ಲದ ಕಾರಣ ವಾಹನ ಚಾಲಕರು ಪರಸ್ಪರ ಕಚ್ಚಾಡುವಂತಹಾ ಪರಿಸ್ಥಿತಿ ತಲೆದೋರಿದೆ. ಈ ನಿಟ್ಟಿನಲ್ಲಿ ಇಲ್ಲಿನ ವಾಹನಗಳ ನಿಯಂತ್ರಣಕ್ಕಾಗಿ ಟ್ರಾಫಿಕ್ ಪೋಲೀಸರನ್ನು ನೇಮಕ ಮಾಡುವುದು ಅತೀ ಅಗತ್ಯವಾಗಿದೆ.
ಇಲ್ಲದಿದ್ದರೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸಗಾರರು, ರೋಗಿಗಳು ನಡು ರಸ್ತೆಯಲ್ಲಿ ತಾಸುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉಂಟಾಗಲಿದೆ. ಹೆಚ್ಚಾಗಿ ದ್ವಿಚಕ್ರವಾಹನಗಳಲ್ಲಿ ಕೆಲಸಕ್ಕೆ ತೆರಳುವ ಮಹಿಳೆಯರು ಸಂಕಷ್ಟಕ್ಕೀಡಾಗಲಿದ್ದಾರೆ.