janadhvani

Kannada Online News Paper

ಧಾರ್ಮಿಕ ಸ್ಥಳಗಳ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ತಡೆ- ತೀರ್ಪು ನೀಡದಂತೆ ನ್ಯಾಯಾಲಯಗಳಿಗೆ ಆದೇಶ

ಯಾವುದೇ ಪೂಜಾ ಸ್ಥಳಗಳ ಪರಿವರ್ತನೆಗೆ 1991ರ ಕಾನೂನು ನಿರ್ಬಂಧ ಹೇರಿದ್ದು, 1947ರ ಆಗಸ್ಟ್ 15ರಂದು ಇದ್ದಂತೆಯೇ ಪೂಜಾ ಸ್ಥಳದ ಯಥಾಸ್ಥಿತಿ ಕಾಪಾಡಬೇಕು ಎಂದು ಹೇಳಿದೆ.

ನವದೆಹಲಿ: ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಗುರುವಾರ ಧಾರ್ಮಿಕ ಸ್ಥಳಗಳು, ವಿಶೇಷವಾಗಿ ಮಸೀದಿಗಳು ಮತ್ತು ದರ್ಗಾಗಳನ್ನು ತಮ್ಮ ಸುಪರ್ದಿಗೆ ನೀಡಬೇಕೆಂದು ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತಂತೆ ಯಾವುದೇ ಪರಿಣಾಮಕಾರಿ ಮಧ್ಯಂತರ ಅಥವಾ ಅಂತಿಮ ಆದೇಶಗಳನ್ನು ಹೊರಡಿಸದಂತೆ ದೇಶದ ನ್ಯಾಯಾಲಯಗಳಿಗೆ ನಿರ್ಬಂಧ ಹೇರಿದೆ. ತನ್ನ ಮುಂದಿನ ನಿರ್ದೇಶನದವರೆಗೆ ಕಾಯುವಂತೆ ಕೆಳ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

‘ಧಾರ್ಮಿಕ ಸ್ಥಳಗಳ ಕುರಿತ ವಿಷಯ ವಿಚಾರಣೆಯಲ್ಲಿದ್ದು, ಈ ಬಗ್ಗೆ ನಾವು ನಿರ್ಧಾರ ಕೈಗೊಳ್ಳಬೇಕಿದೆ. ಹೀಗಾಗಿ, ಮುಂದಿನ ಆದೇಶದವರೆಗೂ ಯಾವುದೇ ಹೊಸ ಪ್ರಕರಣಗಳ ವಿಚಾರಣೆ ಮತ್ತು ಆದೇಶ ನೀಡಬಾರದು’ ಎಂದು ಮುಖ್ಯ ನ್ಯಾಯಮೂರ್ತಿ ಅವರನ್ನೂ ಒಳಗೊಂಡ ಪೀಠ ಹೇಳಿದೆ.

ವಾರಾಣಸಿಯ ಗ್ಯಾನವಾಪಿ, ಮಥುರಾದ ಶಾಹಿ ಈದ್ಗಾ ಮಸೀದಿ, ಸಂಭಲ್‌ನ ಶಾಹಿ ಜಾಮಾ ಮಸೀದಿ ಸೇರಿದಂತೆ 10 ಮಸೀದಿಗಳ ಮೂಲ ಧಾರ್ಮಿಕ ಸ್ವರೂಪವನ್ನು ಪರಿಶೀಲಿಸುವಂತೆ ವಿವಿಧ ಹಿಂದೂ ಅರ್ಜಿದಾರರು ಸಲ್ಲಿಸಿರುವ ಸುಮಾರು 18 ಮೊಕದ್ದಮೆಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ನಿರ್ಬಂಧಿಸಿದೆ.

1991ರ ಪೂಜಾ ಸ್ಥಳಗಳ ಕಾಯ್ದೆಯ ವಿವಿಧ ಅಂಶಗಳನ್ನು ಪ್ರಶ್ನಿಸಿ ವಕೀಲರಾದ ಅಶ್ವಿನಿ ಉಪಾಧ್ಯಾಯ್‌ ಸೇರಿದಂತೆ 6 ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

ಯಾವುದೇ ಪೂಜಾ ಸ್ಥಳಗಳ ಪರಿವರ್ತನೆಗೆ 1991ರ ಕಾನೂನು ನಿರ್ಬಂಧ ಹೇರಿದ್ದು, 1947ರ ಆಗಸ್ಟ್ 15ರಂದು ಇದ್ದಂತೆಯೇ ಪೂಜಾ ಸ್ಥಳದ ಯಥಾಸ್ಥಿತಿ ಕಾಪಾಡಬೇಕು ಎಂದು ಹೇಳಿದೆ.1991ರ ಕಾನೂನಿನ ಕಠಿಣ ಜಾರಿಗೆ ಹಲವರು ಕೋರಿದ್ದು, ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಈ ವ್ಯಾಪ್ತಿಯಿಂದ ರಾಮ ಜನ್ಮಭೂಮಿ–ಬಾಬರಿ ಮಸೀದಿ ಕುರಿತ ಪ್ರಕರಣವನ್ನು ಹೊರಗಿಡಲಾಗಿದೆ.

1991ರ ಕಾನೂನಿನ ಮಾನ್ಯತೆ, ವ್ಯಾಪ್ತಿಯನ್ನು ಪರಿಶೀಲಿಸುವುದಾಗಿ ಪೀಠವು ಸ್ಪಷ್ಟಪಡಿಸಿದೆ. ಈ ಕುರಿತಂತೆ ಯಾವುದೇ ಮುಂದಿನ ಆದೇಶ ನೀಡುವವರೆಗೆ ಈ ಕುರಿತ ಪ್ರಕರಣಗಳ ವಿಚಾರಣೆಯಿಂದ ದೂರವಿರಿ ಎಂದು ಇತರ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ

ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ. ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ, 1991 ಕ್ಕೆ ಸಂಬಂಧಿಸಿದ ಅರ್ಜಿಗಳ ಮೇಲೆ ಈ ಮಹತ್ವದ ನಿರ್ದೇಶನ ನೀಡಿದೆ.

1947 ಆಗಸ್ಟ್ 15 ರಂದು ಚಾಲ್ತಿಯಲ್ಲಿದ್ದ ಪೂಜಾ ಸ್ಥಳವನ್ನು ಹಿಂಪಡೆಯಲು ಅಥವಾ ಅದರ ಸ್ವರೂಪದಲ್ಲಿ ಬದಲಾವಣೆಯನ್ನು ಕೋರಲು ಮೊಕದ್ದಮೆ ಹೂಡುವುದನ್ನು ನಿಷೇಧಿಸುವ 1991 ರ ಕಾನೂನಿನ ಕೆಲವು ನಿಬಂಧನೆಗಳ ಸಿಂಧುತ್ವವನ್ನು ಪ್ರಶ್ನಿಸುವ PIL ಗಳ ನ್ನು ಆಲಿಸಲು ಸುಪ್ರೀಂ ಕೋರ್ಟ್ ವಿಶೇಷ ಪೀಠವನ್ನು ರಚಿಸಿದೆ.

ಗಮನಾರ್ಹವಾಗಿ, ತನ್ನ ಮುಂದಿನ ಆದೇಶಗಳವರೆಗೆ ಯಾವುದೇ ಹೊಸ ಮೊಕದ್ದಮೆಯನ್ನು ದಾಖಲಿಸಲಾಗುವುದಿಲ್ಲ ಮತ್ತು ಬಾಕಿ ಉಳಿದಿರುವ ಪ್ರಕರಣಗಳಲ್ಲಿ, ನ್ಯಾಯಾಲಯಗಳು ತನ್ನ ಮುಂದಿನ ಆದೇಶದವರೆಗೆ ಯಾವುದೇ “ಪರಿಣಾಮಕಾರಿ ಮಧ್ಯಂತರ ಅಥವಾ ಅಂತಿಮ ಆದೇಶ” ದಿಂದ ದೂರವಿರಲಿವೆ ಎಂದು ಸುಪ್ರೀಂ ಪೀಠವು ಹೇಳಿದೆ. ಪೂಜಾ ಸ್ಥಳಗಳ ಕಾಯಿದೆಯನ್ನು ಉಲ್ಲೇಖಿಸಿ ಮುಸ್ಲಿಂ ಪರ ಮನವಿಗಳಲ್ಲಿ ಮಸೀದಿಗಳ ಸರ್ವೇ ಮಾಡುವ ತೀರ್ಮಾನಗಳ ಕುರಿತು ಪ್ರಶ್ನಿಸಲಾಗಿತ್ತು.

ಮಧ್ಯಕಾಲೀನ ಯುಗದಲ್ಲಿ ನಿರ್ಮಿಸಲಾದ ಮಸೀದಿಗಳು ಮತ್ತು ದರ್ಗಾಗಳ ಮಾಲೀಕತ್ವವನ್ನು ಪಡೆಯಲು ದೇಶದ ಹಲವೆಡೆ ನ್ಯಾಯಾಲಯಗಳಲ್ಲಿ ಅರ್ಜಿಗಳನ್ನು ಸಲ್ಲಿಸುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಇದನ್ನು ನಿಷೇಧಿಸಿ ಮಧ್ಯಂತರ ಆದೇಶವನ್ನು ನೀಡಿತು. ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ 16ನೇ ಶತಮಾನದ ಮಸೀದಿಯನ್ನು ಹಿಂದುತ್ವವಾದಿಗಳು ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯವು ಸಮೀಕ್ಷೆಗೆ ಆದೇಶಿಸಿತ್ತು. ಇದು ದಾಳಿಗೆ ಕಾರಣವಾಯಿತು ಮತ್ತು ನಾಲ್ಕು ಜನರು ಜೀವ ಕಳಕೊಂಡರು. ಇದರ ನಂತರ, ಹಿಂದುತ್ವವಾದಿಗಳು ಅಜ್ಮೀರ್‌ ದರ್ಗಾದಲ್ಲಿ ಹಕ್ಕು ಸಲ್ಲಿಸಿ ನ್ಯಾಯಾಲಯವನ್ನು ಸಂಪರ್ಕಿಸಿದರು. ಬಂದಾ-ಬಹ್ಮಚ್ ಹೆದ್ದಾರಿಯಲ್ಲಿರುವ 185 ವರ್ಷಗಳಷ್ಟು ಹಳೆಯದಾದ ಮಸೀದಿಯ ಒಂದು ಭಾಗವನ್ನು ಕಳೆದ ವಾರ ಕೆಡವಲಾಗಿತ್ತು.

error: Content is protected !! Not allowed copy content from janadhvani.com