ಡಮಾಸ್ಕಸ್: ಸಿರಿಯಾದಲ್ಲಿ ಬಷರ್ ಅಲ್ ಅಸಾದ್‌ನ ಆಡಳಿತವು ಕೊನೆಯಾಗಿದೆ. ಬಂಡುಕೋರರು ರಾಜಧಾನಿ ಡಮಾಸ್ಕಸ್‌ಗೆ ನುಗ್ಗಿದ್ದಾರೆ ಹಾಗೂ ಅಧ್ಯಕ್ಷ ಬಷರ್ ನಾಪತ್ತೆಯಾಗಿದ್ದಾರೆ. ಡಮಾಸ್ಕಸ್ ಸೇರಿದಂತೆ ಸಿರಿಯಾದ ನಗರಗಳಲ್ಲಿ ಮೆರವಣಿಗೆ ಶುರು ಮಾಡಿರುವ ಬಂಡುಕೋರರು, ‘ಅಸಾದ್‌ನಿಂದ ದೇಶದ ಬಿಡುಗಡೆ, ಇದು ಹೊಸ ಯುಗದ ಆರಂಭ’ ಎಂದು ಘೋಷಿಸಿದ್ದಾರೆ.
ಸಿರಿಯಾದ ಸೇನೆಯು ಹೋರಾಟವನ್ನು ಕೈಚೆಲ್ಲಿದ್ದು, ಅಧ್ಯಕ್ಷ ಬಷರ್ ಅಲ್ ಅಸಾದ್ ಅವರ ಆಡಳಿತವು ಕೊನೆಯಾಗಿದೆ ಎಂದು ಸರಕಾರದ ಅಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ. ಸುಮಾರು ಒಂದು ವಾರದಿಂದ ಬಂಡುಕೋರರು ನಡೆಸಿರುವ ಕ್ಷಿಪ್ರ ಕ್ರಾಂತಿಯಲ್ಲಿ ಸಿರಿಯಾದ ಆಡಳಿತವು ಬಷರ್ ಕೈತಪ್ಪಿದೆ. ಅವರು ರಾಜಧಾನಿ ಡಮಾಸ್ಕಸ್‌ನಿಂದ ಅಜ್ಞಾತ ಸ್ಥಳಕ್ಕೆ ಭಾನುವಾರ ಪರಾರಿಯಾಗಿರುವುದಾಗಿ ವರದಿಯಾಗಿದೆ.
ಬಂಡುಕೋರರು ಡಮಾಸ್ಕಸ್‌ಗೆ ಪ್ರವೇಶಿಸಿದರೂ ಸಿರಿಯಾ ಸೇನೆಯಿಂದ ಯಾವುದೇ ಪ್ರತಿರೋಧಗಳೂ ಎದುರಾಗಲಿಲ್ಲ. ಸಂಭ್ರಮಾಚರಣೆಯಲ್ಲಿರುವ ಬಂಡುಕೋರರ ಗಮನ ಈಗ ಸೆಡ್ನಯಾ ಜೈಲಿನ ಕಡೆಗೆ ಬಿದ್ದಿದೆ. ‘ಸೆರೆಮನೆ ವಾಸಿಗಳನ್ನು ಬಂಧನದಿಂದ ಬಿಡಿಸಿ, ಅವರ ಕೈಗಳಿಗೆ ಹಾಕಿರುವ ಸರಳುಗಳನ್ನು ಬಿಡಿಸಿ ಸ್ವತಂತ್ರಗೊಳಿಸಿ, ಕೊನೆಯಾಗಿರುವ ಅನ್ಯಾಯದ ಪರ್ವವನ್ನು ಸಿರಿಯಾ ಜನರೊಂದಿಗೆ ನಾವು ಸಂಭ್ರಮಿಸುತ್ತೇವೆ’ ಎಂದಿದ್ದಾರೆ.
ಡಮಾಸ್ಕಸ್ ಅನ್ನು ಬಂಡುಕೋರರು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವಾಗಲೇ ಸಿರಿಯಾದ ವಿಮಾನವು ಡಮಾಸ್ಕಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ಶುರು ಮಾಡಿತು. ಆ ವಿಮಾನವು ಮೊದಲಿಗೆ ಬಷರ್‌ನ ಬಲಿಷ್ಠ ನೆಲೆಯಾದ ಸಿರಿಯಾದ ಕರಾವಳಿ ಭಾಗದತ್ತ ಸಾಗಿತ್ತು. ಆದರೆ, ಮಾರ್ಗ ಮಧ್ಯದಲ್ಲಿ ಯೂಟರ್ನ್ ಮಾಡಿ ವಿರುದ್ಧ ದಿಕ್ಕಿನತ್ತ ಹಾರಾಟ ಮುಂದುರಿಸಿತ್ತು. ಅನಂತರದಲ್ಲಿ ವಿಮಾನವು ಸಾಗಿದ ಹಾದಿಯು ಪತ್ತೆಯಾಗಿಲ್ಲ. ಇದೇ ವಿಮಾನದಲ್ಲಿ ಅಧ್ಯಕ್ಷ ಬಷರ್ ಅಲ್ ಅಸಾದ್ ಹಾಗೂ ಸಿರಿಯಾ ಸರಕಾರದ ಪ್ರಮುಖ ಅಧಿಕಾರಿಗಳು, ನಾಯಕರು ಪರಾರಿಯಾಗಿರುವ ಸಾಧ್ಯತೆ ಇರುವುದಾಗಿ ವರದಿಯಾಗಿದೆ.
ಇದು ಬಂಡುಕೋರರು, ಉಗ್ರಗಾಮಿ ಸಂಘಟನೆಗಳು ಹಾಗೂ ಸರಕಾರದ ನಡುವೆ ನಡೆದಿರುವ ದಿಢೀರ್ ಬಂಡಾಯವಲ್ಲ. ಸುಮಾರು 13 ವರ್ಷಗಳಿಂದಲೂ ಸಿರಿಯಾದಲ್ಲಿ ಸಿವಿಲ್ ವಾರ್, ನಾಗರಿಕ ಸಮರಗಳು ನಡೆಯುತ್ತಲೇ ಇವೆ. ಅದಕ್ಕೆ ಸಾಕ್ಷಿಯಾಗಿ ನಿಂತಿರುವುದು ಹೋಮ್ಸ್ ನಗರ. ಹೋಮ್ಸ್‌ನಲ್ಲಿ ಬಂಡುಕೋರರು ಮತ್ತು ಸಿರಿಯಾ ಸೇನೆಯ ನಡುವೆ ನಡೆದ ಭೀಕರ ಕಾಳಗದಲ್ಲಿ ಜನಸಾಮಾನ್ಯರು ಹಾಗೂ ಅವರ ಆಸ್ತಿ ಪಾಸ್ತಿಗಳು ಹಾಳಾಗಿ ಹೋದವು. ಪಾಳು ಬಿದ್ದಿರುವ ಕಟ್ಟಡಗಳು, ಅನಾಥವಾದ ಬಂಗಲೆಗಳು ಈಗಲೂ ಸಿವಿಲ್ ವಾರ್‌ನ ಕಥೆಗಳನ್ನು ಹೇಳುತ್ತಿವೆ. ಈಗ ಮತ್ತೆ ಈ ನಗರವು ಬಂಡುಕೋರರ ನಿಯಂತ್ರಣಕ್ಕೆ ಸಿಕ್ಕಿದೆ.
ಪ್ರಮುಖ ಬಂಡುಕೋರ ಸಂಘಟನೆಯಾಗಿರುವ ‘ಹಯ್ ಅತ್ ತಹ್ರೀರ್ ಅಲ್-ಶಾಮ್’ನ ಮುಖಂಡ ಅಬು ಮೊಹಮ್ಮದ್ ಅಲ್ ಗೊಲಾನಿ ಅವರು ಹೋಮ್ಸ್ ನಗರದಲ್ಲಿ ಪ್ರಭುತ್ವ ಸಾಧಿಸಿರುವುದನ್ನು ಐತಿಹಾಸಿಕ ವಿಜಯ ಎಂದು ಬಣ್ಣಿಸಿದ್ದಾರೆ. ನಾಗರಿಕರ ರಕ್ಷಣೆಗೆ ಬದ್ಧರಾಗಿರುವಂತೆ ಅವರು ತಮ್ಮ ಹೋರಾಟಗಾರರಿಗೆ ಕರೆ ಕೊಟ್ಟಿದ್ದಾರೆ. ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ನಾವು ಹೇಳಿದಂತೆ ಕೇಳುವವರಿಗೆ ಯಾವುದೇ ಹಾನಿಯನ್ನೂ ಮಾಡದಂತೆ ಸೂಚನೆಗಳನ್ನು ಕೊಟ್ಟಿದ್ದಾರೆ.
ಸಿರಿಯಾಗೆ ಇರಾನ್, ರಷ್ಯಾ ಬೆನ್ನೆಲುಬು
ಬಹಳ ಕಾಲದಿಂದಲೂ ಅಸಾದ್ ಸಿರಿಯಾದ ಚುಕ್ಕಾಣಿ ಹಿಡಿದಿದ್ದಾರೆ. 2011ರಲ್ಲಿ ಅಸಾದ್‌ನ ಆಡಳಿತದ ವಿರುದ್ಧ ದೊಡ್ಡ ದಂಗೆ ಎದುರಾಯಿತು. ಇಸ್ಲಾಮ್ ಜಿಹಾದಿ ಉಗ್ರ ಸಂಘಟನೆಗಳಿಗೆ ಸಿರಿಯಾ ನೆಲೆಯಾಯಿತು. ಇಡೀ ಜಗತ್ತಿನಾದ್ಯಂತ ದಾಳಿಗಳನ್ನು ನಡೆಸೋಕೆ ಇಲ್ಲಿಂದಲೇ ಯೋಜನೆಗಳ ರೂಪುಗೊಂಡವು. ಹೊರಗಿನ ಶಕ್ತಿಗಳು ಸಿರಿಯಾಗೆ ಪ್ರವೇಶಿಸಿದವು. ಸಿವಿಲ್ ವಾರ್ ಶುರುವಾಗಿ ಸಿರಿಯಾ ಸೇನೆಯ ಜೊತೆಗೆ ಬಂಡುಕೋರರು ಹಾಗೂ ಉಗ್ರರ ಗುಂಪುಗಳು ಕಾಳಗ ನಡೆಸಿದವು. ಲಕ್ಷಾಂತರ ಜನರು ನೆಲೆ ಕಳೆದುಕೊಂಡು ಅಕ್ಕಪಕ್ಕದ ರಾಷ್ಟ್ರಗಳಿಗೆ ವಲಸೆ ಹೊರಟರು. ಈಗ ಬಂಡಾಯ ನಡೆಸುತ್ತಿರುವ ‘ಹಯ್ ಅತ್ ತಹ್ರೀರ್ ಅಲ್-ಶಾಮ್’ಸಂಘಟನೆಯು ಹಿಂದೆ ಅಲ್‌ಖೈದಾ ಉಗ್ರರೊಂದಿಗೆ ನಂಟು ಹೊಂದಿತ್ತು.
ಕೆಲವು ವರದಿಗಳ ಪ್ರಕಾರ, ಸಿರಿಯಾ ಅಧ್ಯಕ್ಷ ಅಸಾದ್ ರಷ್ಯಾ ಅಥವಾ ಜೋರ್ಡನ್ ಕಡೆಗೆ ಹೊರಟಿರುವ ಸಾಧ್ಯತೆ ಇದೆ. ಅಸಾದ್‌ನ ಕುಟುಂಬವು ಸಿರಿಯಾದಲ್ಲಿ ಸುಮಾರು 50 ವರ್ಷಗಳು ಆಡಳಿತ ನಡೆಸಿದೆ. ಹೋಮ್ಸ್, ಅಲೆಪ್ಪೊ, ಟಾರ್ಟಸ್, ಡಮಾಸ್ಕಸ್ ಎಲ್ಲೆಲ್ಲೂ ಈಗ ಬಂಡುಕೋರರು ಆಕ್ರಮಿಸಿಕೊಂಡಿದ್ದಾರೆ. ಅವರ ಕಣ್ತಪ್ಪಿಸಿ, ಇನ್ನು ದೇಶದಿಂದ ಹೊರಹೋಗುವುದು ಯಾರಿಗೂ ಸಾಧ್ಯವಾಗುವುದಿಲ್ಲ. ಎರಡು ದಿನಗಳ ಹಿಂದೆಯೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೂಡಲೇ ಸಿರಿಯಾ ಬಿಟ್ಟು ಹೊರಡುವಂತೆ ತುರ್ತು ಸೂಚನೆಯನ್ನು ರವಾನಿಸಿತ್ತು. ಡಮಾಸ್ಕಸ್ ಭದ್ರಕೋಟೆಯೇ ಈಗ ಸಿರಿಯ ಸೇನೆಯ ನಿಯಂತ್ರಣದಲ್ಲಿ ಇಲ್ಲ. ಹಲವು ಭಾಗಗಳಲ್ಲಿ ಅಸಾದ್‌ನ ತಂದೆ ಹಾಗೂ ಸೋದರನ ಮೂರ್ತಿಗಳು, ಫೋಟೋಗಳನ್ನು ಬಂಡುಕೋರರು ಹಾಳುಗೆಡವಿದ್ದಾರೆ.
ಮುಖ್ಯವಾಗಿ ಸಿರಿಯಾದ ಅಸಾದ್ ಆಡಳಿತಕ್ಕೆ ಇರಾನ್ ಮತ್ತು ರಷ್ಯಾ ದೇಶಗಳು ಬೆನ್ನೆಲುಬಾಗಿ ನಿಂತಿದ್ದವು. ಲೆಬನಾನ್‌ನ ಹಿಝ್ ಬುಲ್ಲಾಹ್ ಬಂಡುಕೋರರು ಸಿರಿಯಾ ಪರವಾಗಿ ಹೋರಾಟ ನಡೆಸುತ್ತಿದ್ದಾರೆ. ಇರಾನ್ ಬೆಂಬಲಿತ ಶಿಯಾ ಸಮುದಾಯದ ಉಗ್ರ ಸಂಘಟನೆಗಳು ಅಸಾದ್ ಬೆಂಬಲಕ್ಕೆ ನಿಂತಿದ್ದವು. ಆದರೆ, ಸುನ್ನಿ ಸಮುದಾಯದ ಟರ್ಕಿ ಹಾಗೂ ಕತಾರ್‌ನಿಂದ ಸಿರಿಯಾದಲ್ಲಿ ಬಂಡುಕೋರರಿಗೆ ಬೆಂಬಲ ಸಿಗುತ್ತಿದೆ. ಅದರಿಂದಾಗಿ ಅಂತರ್‌ಯುದ್ಧಗಳು ಹೆಚ್ಚಿದವು. ಇರಾನ್ ಮತ್ತು ರಷ್ಯಾ ತಮ್ಮದೇ ಹೋರಾಟಗಳಲ್ಲಿ ಮುಳುಗಿರೋದ್ರಿಂದ ಸಿರಿಯಾದಲ್ಲಿ ಅಸಾದ್‌ಗೆ ಹೆಚ್ಚಿನ ಸೇನಾ ಬಲದ ಬೆಂಬಲ ಪೂರೈಸೋಕೆ ಸಾಧ್ಯವಾಗಿಲ್ಲ. ಒಟ್ಟಾರೆ, ಸಿರಿಯಾದಲ್ಲಿ ಈಗ ಬಂಡುಕೋರರ ಹೊಸ ಆಡಳಿತವು ಚುಕ್ಕಾಣಿ ಹಿಡಿದಿರೋದು ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಮಹತ್ತರ ಬದಲಾವಣೆಗೆ ನಾಂದಿ ಹಾಡಿದಂತಾಗಿದೆ.